ಡಾ. ರಾಜ್ಕುಮಾರ್ ಮೊಮ್ಮಗ ಯುವ ರಾಜ್ಕುಮಾರ್ (Yuva Rajkumar) ಅಭಿನಯದ ‘ಯುವ’ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಮನೆ ಮಾಡಿದೆ. ಈಗಾಗಲೇ ಪೋಸ್ಟರ್ಗಳು ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿವೆ. ಈ ಸಿನಿಮಾಗೆ ‘ಹೊಂಬಾಳೆ ಫಿಲ್ಮ್ಸ್’ (Hombale Films) ಸಂಸ್ಥೆ ಬಂಡವಾಳ ಹೂಡಿದೆ.‘ರಾಜಕುಮಾರ’, ‘ಕೆಜಿಎಫ್: ಚಾಪ್ಟರ್ 1’, ‘ಕೆಜಿಎಫ್: ಚಾಪ್ಟರ್ 2’, ‘ಕಾಂತಾರ’ ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಈ ಸಂಸ್ಥೆ ಈಗ ‘ಯುವ’ ಸಿನಿಮಾವನ್ನು ಜನರ ಎದುರು ತರಲು ತಯಾರಿ ಮಾಡಿಕೊಳ್ಳುತ್ತಿದೆ. ಮೊದಲ ಹಾಡಿನ (Yuva Movie First Song) ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದೆ.
ಪ್ರತಿಷ್ಠಿತ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಮೂಲಕ ನಿರ್ಮಾಪಕ ವಿಜಯ್ ಕಿರಗಂದೂರು ಅವರು ‘ಯುವ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಯುವ ರಾಜ್ಕುಮಾರ್ ಹೀರೋ ಆಗಿ ನಟಿಸಿರುವ ಮೊದಲ ಸಿನಿಮಾ ಎಂಬ ಕಾರಣದಿಂದ ಇದರ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಖ್ಯಾತ ನಿರ್ದೇಶಕ ಸಂತೋಷ್ ಆನಂದ್ರಾಮ್ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಹಾಡುಗಳ ಮೂಲಕ ಕ್ರೇಜ್ ಸೃಷ್ಟಿಸಲು ಚಿತ್ರತಂಡ ರೆಡಿಯಾಗಿದೆ.
‘ಯುವ’ಸಿನಿಮಾಗೆ ಬಿ. ಅಜನೀಶ್ ಲೋಕನಾಥ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಮೊದಲ ಸಾಂಗ್ ಮಾರ್ಚ್ 2ರಂದು ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಎದುರಿನ ಮೈದಾನದಲ್ಲಿ ಅದ್ದೂರಿಯಾಗಿ ಸಮಾರಂಭ ಮಾಡಲಾಗುವುದು. ಈ ವೇದಿಕೆಯಲ್ಲಿ ‘ಒಬ್ಬನೇ ಶಿವ ಒಬ್ಬನೇ ಯುವ..’ ಸಾಂಗ್ ಬಿಡುಗಡೆ ಆಗಲಿದೆ. ಈ ಹಾಡಿಗಾಗಿ ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ‘ಯುವ’ ಆಡಿಯೋ ಹಕ್ಕು; ಮಾ.29ಕ್ಕೆ ಸಿನಿಮಾ ರಿಲೀಸ್
ಮಾರ್ಚ್ 29ರಂದು ‘ಯುವ’ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಯುವ ರಾಜಕುಮಾರ್ ಅವರಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಕಿಶೋರ್, ಸುಧಾರಾಣಿ ಮುಂತಾದ ಕಲಾವಿದರು ಕೂಡ ಈ ಸಿನಿಮಾದಲ್ಲಿದ್ದಾರೆ. ಈ ಚಿತ್ರದ ಆಡಿಯೋ ಹಕ್ಕುಗಳು ದೊಡ್ಡ ಮೊತ್ತಕ್ಕೆ ಸೇಲ್ ಆಗಿವೆ ಎಂಬ ಸುದ್ದಿಯನ್ನು ಚಿತ್ರತಂಡ ಇತ್ತೀಚೆಗೆ ಬಿಟ್ಟುಕೊಟ್ಟಿತ್ತು. ಪ್ರತಿಷ್ಠಿತ ಆಡಿಯೋ ಸಂಸ್ಥೆಯಾದ ‘ಆನಂದ್ ಆಡಿಯೋ’ ದೊಡ್ಡ ಮೊತ್ತ ನೀಡಿ ‘ಯುವ’ ಚಿತ್ರದ ಹಾಡುಗಳ ಹಕ್ಕನ್ನು ಖರೀದಿಸಿದೆ. ಹಾಡುಗಳು ಬಿಡುಗಡೆ ಆದ ಬಳಿಕ ಸಿನಿಮಾ ಮೇಲಿನ ಕ್ರೇಜ್ ಇನ್ನಷ್ಟು ಹೆಚ್ಚಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.