ಟಾಲಿವುಡ್ನ ಹಲವು ಸಿನಿಮಾಗಳನ್ನು ಬಾಲಿವುಡ್ಗೆ ರಿಮೇಕ್ ಮಾಡಲಾಗುತ್ತಿದೆ. ಇವುಗಳಲ್ಲಿ ಬಹುತೇಕ ಸಿನಿಮಾಗಳು ಯಶಸ್ಸು ಕಂಡಿವೆ. ಗೆಲ್ಲೋಕೆ ಇದು ಸುಲಭ ತಂತ್ರ ಎಂಬುದನ್ನು ಬಾಲಿವುಡ್ ನಿರ್ಮಾಪಕರು ಕಂಡುಕೊಂಡಿದ್ದಾರೆ. ಹೀಗಾಗಿ, ದಕ್ಷಿಣ ಭಾರತದ ಸೂಪರ್ ಹಿಟ್ ಚಿತ್ರಗಳನ್ನು ರಿಮೇಕ್ ಮಾಡೋಕೆ ಅವರು ಕೊಂಚವೂ ಹಿಂದೇಟು ಹಾಕುವುದಿಲ್ಲ. ನಟ ಶಾಹಿದ್ ಕಪೂರ್ (Shahid Kapoor) ಕೂಡ ರಿಮೇಕ್ ಚಿತ್ರಗಳಲ್ಲಿ ನಟಿಸೋಕೆ ಸಾಕಷ್ಟು ಉತ್ಸುಕತೆ ತೋರುತ್ತಿದ್ದಾರೆ. ತೆಲುಗಿನ ‘ಅರ್ಜುನ್ ರೆಡ್ಡಿ’ ಚಿತ್ರವನ್ನು ‘ಕಬೀರ್ ಸಿಂಗ್’ ಆಗಿ ಹಿಂದಿಗೆ ರಿಮೇಕ್ ಮಾಡಲಾಗಿತ್ತು. ಇದು ಶಾಹಿದ್ ಕಪೂರ್ ವೃತ್ತಿ ಜೀವನಕ್ಕೆ ದೊಡ್ಡ ಹಿಟ್ ನೀಡಿತ್ತು. ಆ ಬಳಿಕ ನಾನಿ ನಟನೆಯ ‘ಜೆರ್ಸಿ’ ಚಿತ್ರದ ರಿಮೇಕ್ನಲ್ಲಿ ಶಾಹಿದ್ ಕಪೂರ್ ಬಣ್ಣ ಹಚ್ಚಿದ್ದಾರೆ. ಇದಕ್ಕೆ ಹಿಂದಿಯಲ್ಲೂ ‘ಜೆರ್ಸಿ’ (Jersey Movie) ಎಂದು ಹೆಸರು ಇಡಲಾಗಿದೆ. ಈ ಸಿನಿಮಾ ಕ್ರಿಕೆಟರ್ ಓರ್ವನ ಕಥೆಯನ್ನು ಹೇಳುತ್ತಿದೆ. ತೆಲುಗಿನಲ್ಲಿ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಮೂಲ ಚಿತ್ರದಲ್ಲಿ ನಾನಿ ಹಾಗೂ ಶ್ರದ್ಧಾ ಶ್ರೀನಾಥ್ ಬಣ್ಣ ಹಚ್ಚಿದ್ದರು. ಕೊವಿಡ್ ಕಾರಣದಿಂದ ಚಿತ್ರದ ರಿಲೀಸ್ ದಿನಾಂಕ ವಿಳಂಬವಾಗಿದೆ. ಈ ಮಧ್ಯೆ ಮತ್ತೊಂದು ಟಾಲಿವುಡ್ ಚಿತ್ರದ ಮೇಲೆ ಶಾಹಿದ್ ಕಪೂರ್ ಕಣ್ಣಿಟ್ಟಿದ್ದಾರೆ.
ಕಳೆದ ವರ್ಷಾಂತ್ಯಕ್ಕೆ ತೆರೆಗೆ ಬಂದ ‘ಶ್ಯಾಮ್ ಸಿಂಗ ರಾಯ್’ ಚಿತ್ರಕ್ಕೆ ನಾನಿ ಹೀರೋ. ಅವರ ಜತೆ ಸಾಯಿ ಪಲ್ಲವಿ, ಕೃತಿ ಶೆಟ್ಟಿ, ಮಡೋನ್ನಾ ಸೆಬಾಸ್ಟಿಯನ್ ಕೂಡ ನಟಿಸಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಮಾಡಿದೆ. ಒಟಿಟಿಯಲ್ಲಿ ರಿಲೀಸ್ ಆಗಿ ಚಿತ್ರ ಹೆಚ್ಚು ಸದ್ದು ಮಾಡಿದೆ. ಪುನರ್ಜನ್ಮದ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ. ಈ ಚಿತ್ರ ಯಶಸ್ಸು ಕಂಡಿರುವುದರಿಂದ ಅನೇಕ ಬಾಲಿವುಡ್ ನಿರ್ಮಾಪಕರು ಇದರ ರಿಮೇಕ್ ಹಕ್ಕನ್ನು ಪಡೆಯಲು ಮುಂದೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಶಾಹಿದ್ ಕಪೂರ್ ಅವರು ‘ಶ್ಯಾಮ್ ಸಿಂಗ ರಾಯ್’ ಚಿತ್ರವನ್ನು ವೀಕ್ಷಣೆ ಮಾಡಿದ್ದಾರೆ. ಅವರಿಗೆ ಚಿತ್ರದ ಕಥೆ ತುಂಬಾನೇ ಇಷ್ಟವಾಗಿದೆ. ಹೀಗಾಗಿ, ಚಿತ್ರದ ರಿಮೇಕ್ ಮಾಡೋಕೆ ಅವರು ಉತ್ಸಾಹ ತೋರಿಸಿದ್ದಾರೆ ಎನ್ನಲಾಗಿದೆ. ಯಾವ ನಿರ್ಮಾಪಕರು ಈ ಚಿತ್ರದ ರಿಮೇಕ್ ಹಕ್ಕು ಪಡೆದುಕೊಳ್ಳುತ್ತಾರೆ, ಇದರ ನಿರ್ದೇಶನವನ್ನು ಯಾರು ಮಾಡಲಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಿದೆ. ಸಾಲುಸಾಲು ತೆಲುಗು ರಿಮೇಕ್ನಲ್ಲಿ ಶಾಹಿದ್ ನಟಿಸುತ್ತಿದ್ದಾರೆ.
‘ಜೆರ್ಸಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಶಾಹಿದ್ ಬ್ಯುಸಿ ಆಗಲಿದ್ದಾರೆ. ಈ ಚಿತ್ರವನ್ನು ಗೌತಮ್ ಹಿಂದಿಗೆ ರಿಮೇಕ್ ಮಾಡಿದ್ದಾರೆ. ಪಂಕಜ್ ಕಪೂರ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೃನಾಲ್ ಠಾಕೂರ್ ಸಿನಿಮಾಗೆ ನಾಯಕಿ. ಟಾಲಿವುಡ್ನಲ್ಲಿ ತೆರೆಕಂಡ ‘ಅರ್ಜುನ್ ರೆಡ್ಡಿ’ ಸಿನಿಮಾ ಬಾಲಿವುಡ್ನಲ್ಲಿ ‘ಕಬೀರ್ ಸಿಂಗ್’ ಆಗಿ ತೆರೆಗೆ ಬಂದಿತ್ತು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಹೀಗಾಗಿ ತೆಲುಗಿನ ‘ಜೆರ್ಸಿ’ ಸಿನಿಮಾವನ್ನು ಬಾಲಿವುಡ್ಗೆ ರಿಮೇಕ್ ಮಾಡಲಾಗಿದೆ.
ಇದನ್ನೂ ಓದಿ: ಟಾಲಿವುಡ್ ಅಂಗಳದಲ್ಲಿ ಕಿಚ್ಚ ಸುದೀಪ್; ಫೆಬ್ರವರಿ 4ರಂದು ರಿಲೀಸ್ ಆಗುತ್ತಿದೆ ಸಿನಿಮಾ
‘ಪುನೀತ್ ಸಾವಿನಿಂದ ಕಟು ಸತ್ಯ ಬಯಲಾಗಿದೆ’: ಆತಂಕದಲ್ಲೇ ಅನಿಸಿಕೆ ಹಂಚಿಕೊಂಡ ರಾಮ್ ಗೋಪಾಲ್ ವರ್ಮಾ