ಆರ್ಆರ್ಆರ್ (RRR) ಸಿನಿಮಾದಿಂದಾಗಿ ಗ್ಲೋಬಲ್ ಸ್ಟಾರ್ ಆಗಿರುವ ರಾಮ್ ಚರಣ್ (Ram Charan) ಮೇಲೀಗ ನಿರೀಕ್ಷೆಗಳ ಭಾರವಿದೆ. ಆರ್ಆರ್ಆರ್ ಗಿಂತಲೂ ದೊಡ್ಡ ಮಟ್ಟದ ಸಿನಿಮಾಗಳನ್ನು ನೀಡಲೇ ಬೇಕಾದ ಒತ್ತಡಕ್ಕೆ ರಾಮ್ ಚರಣ್ ಸಿಲುಕಿದ್ದಾರೆ. ಅದಕ್ಕೆ ತಕ್ಕಂತೆ ರಾಮ್ ಚರಣ್, ತಮಿಳಿನ ದೊಡ್ಡ ಬಜೆಟ್ ಸಿನಿಮಾ ನಿರ್ದೇಶಕ ಶಂಕರ್ (Shankar) ಜೊತೆ ಕೈಜೋಡಿಸಿದ್ದರು. ಸಿನಿಮಾದ ಅದ್ಧೂರಿ ಮುಹೂರ್ತ, ಫೋಟೊಶೂಟ್ ಎಲ್ಲವೂ ಆಗಿ ಚಿತ್ರೀಕರಣವೂ ಶುರುವಾಗಿತ್ತು. ಆದರೆ ಈಗ ಯಾಕೋ ನಿರ್ದೇಶಕ ಶಂಕರ್, ರಾಮ್ ಚರಣ್ಗೆ ಕೈಕೊಟ್ಟಂತಿದೆ.
ರಾಮ್ ಚರಣ್ಗಾಗಿ ಶಂಕರ್ ನಿರ್ದೇಶಿಸುತ್ತಿದ್ದ ಸಿನಿಮಾಕ್ಕೆ ಗೇಮ್ ಚೇಂಜರ್ ಎಂದು ಹೆಸರಿಡಲಾಗಿತ್ತು. ಆದರೆ ಈಗ ಸಿನಿಮಾದಿಂದ ಶಂಕರ್ ಹಿಂದೆ ಸರಿದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಶಂಕರ್ ಬದಲಿಗೆ ಬೇರೆ ನಿರ್ದೇಶಕರೊಬ್ಬರು ಸಿನಿಮಾ ನಿರ್ದೇಶನ ಮಾಡಿ ಪೂರ್ಣಗೊಳಿಸಲಿದ್ದಾರೆ ಎನ್ನಲಾಗುತ್ತಿದೆ.
ಕೆಲವು ಮೂಲಗಳ ಪ್ರಕಾರ, ಶಂಕರ್, ‘ಗೇಮ್ ಚೇಂಜರ್’ ಸಿನಿಮಾದ ಕೆಲ ಭಾಗಗಳ ಚಿತ್ರೀಕರಣ ಮುಗಿಸಿ ಸಿನಿಮಾದಿಂದ ಹಿಂದೆ ಸರಿದಿದ್ದಾರೆ. ಮಾತ್ರವಲ್ಲದೆ, ಕಮಲ್ ಹಾಸನ್ ಜೊತೆಗೆ ಈ ಮೊದಲು ಆರಂಭಿಸಿದ್ದ ‘ಇಂಡಿಯನ್ 2’ ಸಿನಿಮಾದ ಚಿತ್ರೀಕರಣ ಮುಂದುವರೆಸಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಕೆಲವು ದಿನಗಳ ಹಿಂದಷ್ಟೆ ಕಮಲ್ ಹಾಸನ್ ಹಾಗೂ ಶಂಕರ್ ಒಟ್ಟಿಗಿರುವ ಚಿತ್ರವೊಂದು ವೈರಲ್ ಆಗಿತ್ತು. ನಿಂತಿದ್ದ ಇಂಡಿಯನ್ 2 ಸಿನಿಮಾದ ಚಿತ್ರೀಕರಣ ಮತ್ತೆ ಶುರು ಮಾಡಿದ ಖುಷಿಗೆ ಕಮಲ್, ಶಂಕರ್ಗೆ ನಾಲ್ಕು ಲಕ್ಷದ ವಾಚ್ ಒಂದನ್ನು ಉಡುಗೊರೆ ನೀಡಿದ್ದರು.
ಇದನ್ನೂ ಓದಿ:ಮತ್ತೊಂದು ಮಲ್ಟಿಸ್ಟಾರರ್ನಲ್ಲಿ ರಾಮ್ ಚರಣ್, ಈ ಬಾರಿ ಬಾಲಿವುಡ್ ನಟನೊಟ್ಟಿಗೆ ನಾಟು-ನಾಟು
ಈಗ ಅರ್ಧಕ್ಕೆ ನಿಂತಿರುವ ಗೇಮ್ ಚೇಂಜರ್ ಸಿನಿಮಾವನ್ನು ಪೂರ್ಣಗೊಳಿಸಲು ತೆಲುಗಿನ ಯುವ ನಿರ್ದೇಶಕ ಸೈಲೇಶ್ ಕೊಲಾನು ಅವರನ್ನು ಕರೆತರಲಾಗಿದೆ. ಶಂಕರ್ ಬರೆದಿರುವ ಕತೆ, ಚಿತ್ರಕತೆಯನ್ನು ಸೈಲೇಶ್ ಕೊಲಾನು ನಿರ್ದೇಶನ ಮಾಡಿ ಉಳಿದ ಭಾಗಗಳ ಚಿತ್ರೀಕರಣ ಮಾಡಿಕೊಡಲಿದ್ದಾರಂತೆ. ಸೈಲೇಶ್ ಕೊಲಾನು ಈ ಮೊದಲು ಹಿಟ್ ಹೆಸರಿನ ಥ್ರಿಲ್ಲರ್ ಸಿನಿಮಾ ಮಾಡಿದ್ದರು. ಅದೇ ಸಿನಿಮಾದ ಎರಡನೇ ಭಾಗವನ್ನು ಸಹ ನಿರ್ದೇಶಿಸಿದ್ದರು. ಇದೀಗ ಸೈಂಧವ ಹೆಸರಿನ ಹೊಸ ಸಿನಿಮಾ ಸಹ ಘೋಷಿಸಿದ್ದಾರೆ. ಆ ಬೆನ್ನಲ್ಲೆ ಈಗ ರಾಮ್ ಚರಣ್ರ ಗೇಮ್ ಚೇಂಜರ್ ನಿರ್ದೇಶಿಸುವ ಅವಕಾಶ ಬಂದೊದಗಿದೆ.
ಗೇಮ್ ಚೇಂಜರ್ ಸಿನಿಮಾ ರಾಜಕೀಯ ವಿಷಯವಸ್ತು ಹೊಂದಿರುವ ಸಿನಿಮಾ ಆಗಿದ್ದು ಸಿನಿಮಾದಲ್ಲಿ ರಾಮ್ ಚರಣ್ ಜೊತೆಗೆ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ತೆಲುಗು ನಟ ಸುನಿಲ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ. ಮೊದಲಿಗೆ ಈ ಸಿನಿಮಾದ ಕತೆಯನ್ನು ಪವನ್ ಕಲ್ಯಾಣ್ ಅವರಿಗಾಗಿ ಮಾಡಲಾಗಿತ್ತಂತೆ. ಆದರೆ ದಿಲ್ ರಾಜು ಸೂಚಿಸಿದ ಕಾರಣಕ್ಕೆ ರಾಮ್ ಚರಣ್ ಅನ್ನು ನಾಯಕನನ್ನಾಗಿ ಮಾಡಲಾಗಿದೆ.
ಈ ಹಿಂದೆ ಕಮಲ್ ನಟನೆಯ ‘ಇಂಡಿಯನ್ 2’ ಸಿನಿಮಾವನ್ನು ಪ್ರಾರಂಭ ಮಾಡಿದ್ದ ಶಂಕರ್ ಆ ಸಿನಿಮಾ ಅರ್ಧಕ್ಕೆ ನಿಲ್ಲಿಸಿ ‘ಗೇಮ್ ಚೇಂಜರ್’ ಕಡೆಗೆ ಹೊರಳಿದ್ದರು. ಆಗ ‘ಇಂಡಿಯನ್ 2’ ಸಿನಿಮಾದ ನಿರ್ಮಾಣ ಸಂಸ್ಥೆ ಲೈಕಾ, ಶಂಕರ್ ವಿರುದ್ಧ ದೂರು ದಾಖಲಿಸಿತ್ತು. ಈಗ ಮತ್ತೊಮ್ಮೆ ‘ಇಂಡಿಯನ್ 2’ ಗಾಗಿ ‘ಗೇಮ್ ಚೇಂಜರ್’ ಅನ್ನು ಬಿಟ್ಟು ಹೋಗಿದ್ದಾರೆ ಶಂಕರ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ