ಶಿವರಾಜ್‌ಕುಮಾರ್ ನಟನೆಯ ‘ಕೂರ್ಮಾವತಾರ’ ಚಿತ್ರದ ಟೀಸರ್ ರಿಲೀಸ್

ಪೌರಾಣಿಕ, ಭಕ್ತಿಪ್ರಧಾನ ಕಥಾಹಂದರ ಹೊಂದಿರುವ ‘ಕೂರ್ಮಾವತಾರ’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅವರ ಜೊತೆ ಸಾಯಿ ಕುಮಾರ್, ವರಲಕ್ಷ್ಮಿ ಶರತ್‌ಕುಮಾರ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರದ ರಿಲೀಸ್ ದಿನಾಂಕ ಶೀಘ್ರದಲ್ಲೇ ಘೋಷಣೆ ಆಗಲಿದೆ.

ಶಿವರಾಜ್‌ಕುಮಾರ್ ನಟನೆಯ ‘ಕೂರ್ಮಾವತಾರ’ ಚಿತ್ರದ ಟೀಸರ್ ರಿಲೀಸ್
Shiva Rajkumar

Updated on: Sep 01, 2026 | 7:11 PM

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shiva Rajkumar) ಅಭಿನಯದ ಮುಂಬರುವ ಭಕ್ತಿಪ್ರಧಾನ ಹಾಗೂ ಸಾಹಸಮಯ ಬಹುನಿರೀಕ್ಷಿತ ಸಿನಿಮಾ ‘ಕೂರ್ಮಾವತಾರ’ (Kurmaavatar) ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪೌರಾಣಿಕ ಹಿನ್ನೆಲೆ, ಆಧ್ಯಾತ್ಮಿಕತೆ ಮತ್ತು ಭರ್ಜರಿ ಸಾಹಸ ದೃಶ್ಯಗಳ ಸಮ್ಮಿಶ್ರಣವಾಗಿ ಮೂಡಿಬಂದಿರುವ ಈ ಟೀಸರ್ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಹರ್ಷವರ್ಧನ್ ಕಡಿಯಾಲ ನಿರ್ದೇಶನದ ಈ ಚಿತ್ರವನ್ನು ಪಂಚವಕ್ತ್ರ ಪಿಕ್ಚರ್ಸ್ ಮತ್ತು ರುಕ್ವಿನಾ ಸ್ಟುಡಿಯೋಸ್ ಬ್ಯಾನರ್‌ಗಳಡಿಯಲ್ಲಿ ಪೂಜಿತಾ ಕೆ. ಹಾಗೂ ಕೆ. ಸೇವಿತಾ ನಿರ್ಮಿಸಿದ್ದಾರೆ.

ಆಧ್ಯಾತ್ಮಿಕ ಶೈಲಿಯಲ್ಲಿ ಆರಂಭವಾಗುವ ಈ ಟೀಸರ್‌ನಲ್ಲಿ ನಟ ಸಾಯಿ ಕುಮಾರ್ ಅವರ ಗಂಭೀರ ಕಂಠದ ಹಿನ್ನೆಲೆ ಧ್ವನಿ ಇದೆ. ಯುಗ ಯುಗಗಳಲ್ಲಿ ದೇವರ ಮಹತ್ವ, ಭಕ್ತಿ ಮತ್ತು ಧರ್ಮದ ಕುರಿತು ವಿವರಿಸಲಾಗಿದೆ. ತದನಂತರ ಅಸಾಧಾರಣ ಶಕ್ತಿಗಳೊಂದಿಗೆ ದುಷ್ಟ ಶಕ್ತಿಗಳು ತಲೆಯೆತ್ತಿ, ವಿಶ್ವದ ಸಮತೋಲನವನ್ನು ಹಾಳುಮಾಡಲು ಯತ್ನಿಸಿದಾಗ, ಧರ್ಮವನ್ನು ರಕ್ಷಿಸಲು ದಿವ್ಯ ಯೋಧನಾಗಿ ನಾಯಕನ ಶಕ್ತಿಶಾಲಿ ಎಂಟ್ರಿ ಆಗುತ್ತದೆ.

ವಿಭಿನ್ನ ಕಥಾಹಂದರದ ಮೂಲಕ ನಿರ್ದೇಶಕ ಹರ್ಷ ವರ್ಧನ್ ಕಡಿಯಾಲ ಗಮನ ಸೆಳೆದಿದ್ದಾರೆ. ಟೀಸರ್‌ನಲ್ಲಿರುವ ಭಕ್ತಿಪ್ರಧಾನ ವಾತಾವರಣ, ಆಕರ್ಷಕ ನಿರೂಪಣೆ ಮತ್ತು ದೃಶ್ಯ ವೈಭವ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಜಗದೀಶ್ ಚೀಕಟಿ ಅವರ ಛಾಯಾಗ್ರಹಣ ಚಿತ್ರಕ್ಕೆ ಅದ್ಧೂರಿ ಸ್ಪರ್ಶವನ್ನು ನೀಡಿದ್ದರೆ, ಬಿ. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಆಧ್ಯಾತ್ಮಿಕ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

‘ಕೂರ್ಮಾವತಾರ’ ಚಿತ್ರದ ಟೀಸರ್‌:

KurmaAvatar Teaser Kannada|Shivaraj Kumar | Varalaxmi Sarathkumar | Raj Tharun| AthiraRaj |Sai kumar

‘ಕೂರ್ಮಾವತಾರ’ ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರ ಲುಕ್ ಗಮನ ಸೆಳೆಯುತ್ತಿದೆ. ಅವರ ಗಂಭೀರ ನಟನೆ ಟೀಸರ್‌ನ ಪ್ರಮುಖ ಆಕರ್ಷಣೆಯಾಗಿದೆ. ನಟ ರಾಜ್ ತರುಣ್ ರಹಸ್ಯಮಯ ಪಾತ್ರದಲ್ಲಿ ಅಚ್ಚರಿ ಮೂಡಿಸಿದ್ದರೆ, ವರಲಕ್ಷ್ಮಿ ಶರತ್‌ಕುಮಾರ್, ಸಾಯಿ ಕುಮಾರ್, ಆತಿರಾ ರಾಜ್ ಮತ್ತು ಶಿವಾಜಿ ಪೋಷಕ ಪಾತ್ರಗಳಲ್ಲಿ ಬಲ ತುಂಬಿದ್ದಾರೆ. ಒಟ್ಟಾರೆಯಾಗಿ ‘ಕೂರ್ಮಾವತಾರ’ ಚಿತ್ರದ ಟೀಸರ್ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದ್ದು, ಪ್ರೇಕ್ಷಕರು ಈ ಪೌರಾಣಿಕ ಸಾಹಸಮಯ ಚಿತ್ರಕ್ಕಾಗಿ ಕಾತುರದಿಂದ ಕಾಯುವಂತೆ ಮಾಡಿದೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಜೊತೆ ಶಿವಣ್ಣ ಸಿನಿಮಾ ಮಾಡ್ತಾರಾ? ಶಿವರಾಜ್​ಕುಮಾರ್ ಕೊಟ್ಟರು ಉತ್ತರ

‘ಕೂರ್ಮಾವತಾರ ಕಥೆಯ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿರುವುದು ಖುಷಿ ತಂದಿದೆ. ನಾನು ಯಾವತ್ತೂ ಹೊಸಬರು-ಹಳಬರು ಎಂದು ಭೇದಭಾವ ಮಾಡುವುದಿಲ್ಲ. ಕಥೆ ಹಾಗೂ ನಿರ್ದೇಶಕರ ಮೇಲಿನ ನಂಬಿಕೆಯೇ ನನ್ನ ಆಯ್ಕೆ. ಈ ಚಿತ್ರದಲ್ಲಿ ಸಾಯಿಕುಮಾರ್ ಅವರೊಂದಿಗೆ ಮತ್ತೊಮ್ಮೆ ತೆರೆ ಹಂಚಿಕೊಂಡಿರುವುದು ವಿಶೇಷ ಅನುಭವ ನೀಡಿದೆ’ ಎಂದು ಶಿವರಾಜ್​ಕುಮಾರ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us