
ಕಾಲಿವುಡ್ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಥಗ್ ಲೈಫ್’ (Thug Life) ಚಿತ್ರ ಕೂಡ ಮುಂಚೂಣಿಯಲ್ಲಿದೆ. ಈ ಸಿನಿಮಾದ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಳ್ಳಲು ಅನೇಕ ಕಾರಣಗಳಿವೆ. ಮೂರು ದಶಕಗಳ ಬಳಿಕ ಖ್ಯಾತ ನಟ ಕಮಲ್ ಹಾಸನ್ (Kamal Haasan) ಹಾಗೂ ದಿಗ್ಗಜ ನಿರ್ದೇಶಕ ಮಣಿರತ್ನಂ ಅವರು ಈ ಚಿತ್ರದ ಮೂಲಕ ಕೈ ಜೋಡಿಸಿದ್ದಾರೆ. ಬರೋಬ್ಬರಿ 36 ವರ್ಷಗಳ ಹಿಂದೆ ಗ್ಯಾಂಗ್‌ಸ್ಟರ್ ಕಥೆಯುಳ್ಳ ‘ನಾಯಕನ್’ ಸಿನಿಮಾದಲ್ಲಿ ಈ ನಟ-ನಿರ್ದೇಶಕನ ಕಾಂಬಿನೇಷನ್ ಮೋಡಿ ಮಾಡಿತ್ತು. ಈಗ ಅವರು ಮತ್ತೆ ‘ಥಗ್ ಲೈಫ್’ ಚಿತ್ರದಲ್ಲಿ ಒಂದಾಗಿದ್ದು, ಇವರಿಬ್ಬರ ಜೊತೆಗೆ ಸಿಲಂಬರಸ್ (Silambarasan) ಅಲಿಯಾಸ್ ಸಿಂಬು ಕೂಡ ಸೇರಿಕೊಂಡಿದ್ದಾರೆ ಎಂಬುದು ವಿಶೇಷ.
‘ಥಗ್ ಲೈಫ್’ ಸಿನಿಮಾ ಅನೌನ್ಸ್ ಆದಾಗಿನಿಂದಲೂ ಅಭಿಮಾನಿಗಳ ವಲಯದಲ್ಲಿ ಕ್ರೇಜ್ ಸೃಷ್ಟಿ ಆಗಿದೆ. ಟೈಟಲ್ ಟೀಸರ್ ನೋಡಿದ ಎಲ್ಲರೂ ವಾವ್ ಎಂದಿದ್ದಾರೆ. ಈಗ ಕಾಲಿವುಡ್ನ ಖ್ಯಾತ ಸಿಲಂಬರಸನ್ ಕೂಡ ಈ ಚಿತ್ರತಂಡಕ್ಕೆ ಸೇರ್ಪಡೆ ಆಗಿರುವುದರಿಂದ ಸಿನಿಮಾದ ಸ್ಟಾರ್ ಮೆಗುರು ಹೆಚ್ಚಿದೆ. ಸಿಂಬು ಅವರನ್ನು ಸ್ವಾಗತಿಸಲು ಖಡಕ್ ಆದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಎಂಟ್ರಿಯಲ್ಲೇ ಸಿಲಂಬರಸನ್ ಅವರು ಖಡಕ್ ಲುಕ್ ನೀಡಿದ್ದಾರೆ. ಮರುಭೂಮಿಯಲ್ಲಿ ಕಾರ್ ಚೇಸ್ ಮಾಡುತ್ತಾ ಗನ್ ಹಿಡಿದು ಅವರು ದಾಳಿಗೆ ಮುಂದಾಗಿದ್ದಾರೆ. ಅವರ ಈ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೇ ಸಿನಿಮಾದಲ್ಲಿ ತ್ರಿಶಾ ಕೂಡ ನಟಿಸುತ್ತಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಕಮಲ್, ಮಣಿರತ್ನಂ ಕಾಂಬಿನೇಷನ್ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿ ಆಗಲಿದೆ ಎಂದು ಫ್ಯಾನ್ಸ್ ನಿರೀಕ್ಷಿಸಿದ್ದಾರೆ.
ಇದನ್ನೂ ಓದಿ: ‘ಮಾನಾಡು’ ನಟ ಸಿಂಬುಗೆ ಗೌರವ ಡಾಕ್ಟರೇಟ್; ಚಿತ್ರರಂಗದಲ್ಲಿ ಈ ಕಲಾವಿದನ ಸಾಧನೆ ಏನು?
‘ರಾಜ್ಕಮಲ್ ಇಂಟರ್ನ್ಯಾಷನಲ್’, ‘ಮದ್ರಾಸ್ ಟಾಕೀಸ್’, ‘ರೆಡ್ಜೈಂಟ್ ಮೂವೀಸ್’ ಸಂಸ್ಥೆಗಳು ಜಂಟಿಯಾಗಿ ‘ಥಗ್ ಲೈಫ್’ ಸಿನಿಮಾವನ್ನು ನಿರ್ಮಿಸುತ್ತಿವೆ. ಕಮಲ್ ಹಾಸನ್, ಮಣಿರತ್ನಂ, ಆರ್. ಮಹೇಂದ್ರನ್, ಶಿವ ಅನಂತ್ ಅವರು ಜತೆಯಾಗಿ ಬಂಡವಾಳ ಹೂಡುತ್ತಿದ್ದಾರೆ. ಘಟಾನುಘಟಿ ಕಲಾವಿದರು ಪರದೆ ಮೇಲೆ ಕಾಣಿಸಿಕೊಂಡರೆ, ಪರದೆ ಹಿಂದೆ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾಗೆ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ಶ್ರೀಕರ್ ಪ್ರಸಾದ್ ಸಂಕಲನ ಮಾಡುತ್ತಿದ್ದು, ರವಿ ಕೆ. ಚಂದ್ರನ್ ಅವರ ಛಾಯಾಗ್ರಹಣ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.