ಡಿಸೆಂಬರ್ 30 ಕನ್ನಡ ಚಿತ್ರರಂಗದ ಸಾಹಸ ಸಿಂಹ ವಿಷ್ಣುವರ್ಧನ್ ಅಗಲಿದ ದಿನ. 2009ರ ಡಿಸೆಂಬರ್ 30ರ ಮುಂಜಾನೆ ಬಂದ ಸುದ್ದಿ, ಇಡೀ ಕನ್ನಡ ಚಿತ್ರರಂಗಕ್ಕೆ ಅರಗಿಸಿಕೊಳ್ಳಲಾಗದಂತಹ ನೋವನ್ನು ನೀಡಿತ್ತು. 2024ರ ಡಿಸೆಂಬರ್ 30ಕ್ಕೆ ವಿಷ್ಣುವರ್ಧನ್ ಇಲ್ಲದೇ 15 ವರ್ಷ ಕಳೆದಿದೆ. ವಿಷ್ಣುವರ್ಧನ್ ಕಾಲವಾಗಿ ಹದಿನೈದು ವರ್ಷಗಳಾದರೂ ಅವರ ಅಭಿಮಾನಿಗಳು ಅವರನ್ನು ಎಂದಿಗೂ ಮರೆತಿಲ್ಲ. ವಿಷ್ಣುವರ್ಧನ್ ಅಭಿನಯಿಸಿದ ಸಿನಿಮಾಗಳು, ವಿಭಿನ್ನ ಪಾತ್ರಗಳು ಮತ್ತು ಸಮಾಜಮುಖಿ ಕೆಲಸಗಳ ಮೂಲಕ ಫ್ಯಾನ್ಸ್ ತಮ್ಮ ನೆಚ್ಚಿನ ನಟನನ್ನು ಸದಾ ಜೀವಂತವಾಗಿರಿಸುವ ಕೆಲಸ ಮಾಡುತ್ತ ಬಂದಿದ್ದಾರೆ.
ವಿಷ್ಣುವರ್ಧನ್ ಅವರ 15ನೇ ವರ್ಷದ ಪುಣ್ಯ ಸ್ಮರಣೆ ಸಂದರ್ಭದಲ್ಲಿ ಅವರ ಅಭಿಮಾನಿಗಳು ‘ಸಿಂಹದ ಹಾದಿʼ ಎಂಬ ಶಾರ್ಟ್ ಫಿಲ್ಮ್ ಮಾಡಿ, ಅವರನ್ನು ಮತ್ತೆ ತೆರೆಮೇಲೆ ನೆನಪು ಮಾಡಿಕೊಳ್ಳುವ ಕೆಲಸ ಮಾಡಿದ್ದಾರೆ. ‘ಜಿ. ಕೆ. ಸಿನಿ ಫೈಲ್ಸ್ ಪ್ರೊಡಕ್ಷನ್ಸ್ʼ ಬ್ಯಾನರ್ ಮೂಲಕ ಜಿ.ಕೆ. ಶಶಿರಾಜ್ ದೊರೈ ಅವರು ‘ಸಿಂಹದ ಹಾದಿʼ ಎಂಬ ಕಿರುಚಿತ್ರವನ್ನು ನಿರ್ಮಿಸಿ ಬಿಡುಗಡೆ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ವಿಷ್ಣುವರ್ಧನ್ ಫ್ಯಾನ್ಸ್ ಆಗಿರುವ ಶಶಿರಾಜ್ ದೊರೆ ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಅಭಿನಯ ಮತ್ತು ನಿರ್ದೇಶನ ವಿಭಾಗದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ವಿಷ್ಣುವರ್ಧನ್ ಸಸ್ಯಹಾರಿಯೋ, ಮಾಂಸಾಹಾರಿಯೋ? ಅಚ್ಚರಿಯ ವಿಚಾರ ತಿಳಿಸಿದ ಹಿರಿಯ ನಿರ್ದೇಶಕ
ವಿಷ್ಣುವರ್ಧನ್ ಪುಣ್ಯಸ್ಮರಣೆಗೂ ಮುನ್ನ ನಡೆದ ಸಮಾರಂಭದಲ್ಲಿ, ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಜೋ ಸೈಮನ್, ಕೃಷ್ಣೇಗೌಡ, ಭಾಮ ಹರೀಶ್, ಉಮೇಶ್ ಬಣಕಾರ್, ಲಕ್ಷ್ಮೀದೇವಮ್ಮ, ವೀರಯ್ಯ ಮುಂತಾದವರು ಹಾಜರಿದ್ದು, ‘ಸಿಂಹದ ಹಾದಿʼ ಕಿರುಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ಕಿರುಚಿತ್ರದಲ್ಲಿ ಶಶಿರಾಜ್ ದೊರೆ, ಸವಿತಾ, ಪಲ್ಲವಿ ರಾವ್, ಸಾಯಿ ಜ್ಯೋತಿ, ಸಂನ್ಸಿಕಾ, ಹರಿ ಪ್ರಕಾಶ್, ಪ್ರಕೃತಿ, ಮಂಜು, ಮಹೇಶ್ ಗುರು ಮುಂತಾದವರು ನಟಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶಶಿರಾಜ್ ದೊರೆ ಮಾತನಾಡಿ, ‘ವಿಷ್ಣುವರ್ಧನ್ ಅವರನ್ನು ಆದರ್ಶವಾಗಿ ಇಟ್ಟುಕೊಂಡು ಬದುಕು ಕಟ್ಟಿಕೊಂಡ ನಾಲ್ಕು ಜನರ ಜೀವನವನ್ನು ಆಧರಿಸಿ ಈ ಕಿರುಚಿತ್ರ ಮಾಡಲಾಗಿದೆ. ವಿಷ್ಣುವರ್ಧನ್ ಅವರ ಸಿನಿಮಾಗಳು, ಅವರು ಮಾಡಿದ ಪಾತ್ರಗಳು, ಅವರ ಸಾಮಾಜಿಕ ಕಾರ್ಯಗಳು ಎಲ್ಲವನ್ನೂ ಇದು ಆಧರಿಸಿದೆ. ವಿಷ್ಣುವರ್ಧನ್ ಅಭಿಮಾನಿಗಳು ಈ ಕಾರ್ಯದಲ್ಲಿ ನಮಗೆ ಬೆಂಬಲವಾಗಿ ನಿಂತಿದ್ದಾರೆ. ವಿಷ್ಣುವರ್ಧನ್ ಅವರ ಜೀವನ ಮತ್ತು ಸಾಧನೆಯನ್ನು ಮುಂದಿನ ಜನತೆಗೆ ತೋರಿಸುವ ಸಣ್ಣ ಪ್ರಯತ್ನವಿದು’ ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.