ಫ್ಲೆಕ್ಸ್, ಬ್ಯಾನರ್ ಆಡಂಬರ ಬೇಡ: ಯಶ್ ಹುಟ್ಟುಹಬ್ಬಕ್ಕೆ ಮುಖ್ಯವಾದ ಸಂದೇಶ
‘ರಾಕಿಂಗ್ ಸ್ಟಾರ್’ ಯಶ್ ಅವರ ಹುಟ್ಟುಹಬ್ಬ ಸಮೀಪಿಸುತ್ತಿದೆ. ಜನವರಿ 8ರಂದು ಅವರ ಬರ್ತ್ಡೇ. ಆದರೆ ಈ ಬಾರಿ ಯಾವುದೇ ಆಡಂಬರ ಬೇಡ ಎಂದು ಯಶ್ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ತಮ್ಮ ಜನ್ಮದಿನಕ್ಕೆ ಈ ವರ್ಷ ಫ್ಯಾನ್ಸ್ ಏನು ಮಾಡಬೇಕು ಎಂಬುದನ್ನು ಯಶ್ ಈಗಲೇ ತಿಳಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ನಟ ಯಶ್ ಅವರು ‘ಟಾಕ್ಸಿಕ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ಅಭಿಮಾನಿಗಳು ಬರ್ತ್ಡೇ ಸೆಲೆಬ್ರೇಟ್ ಮಾಡಲು ಕಾದಿದ್ದಾರೆ. ಆದರೆ ಯಶ್ ಅವರು ಅಭಿಮಾನಿಗಳಿಗೆ ಒಂದು ಮುಖ್ಯವಾದ ಸಂದೇಶವನ್ನು ನೀಡಿದ್ದಾರೆ. ತಮ್ಮ ಹುಟ್ಟುಹಬ್ಬಕ್ಕೆ ಇನ್ನು ಕೆಲವೇ ದಿನಗಳು ಇರುವಾಗ ಸೋಶಿಯಲ್ ಮೀಡಿಯಾ ಮೂಲಕ ಅವರು ಒಂದು ಮನವಿ ಮಾಡಿಕೊಂಡಿದ್ದಾರೆ. ಯಾವುದೇ ಆಡಂಬರ ಇಲ್ಲದೇ ತಮ್ಮ ಜನ್ಮದಿನವನ್ನು ಆಚರಿಸುವಂತೆ ಯಶ್ ಅವರು ತಮ್ಮ ಅಭಿಮಾನಿಗಳ ಬಳಿ ಕೇಳಿಕೊಂಡಿದ್ದಾರೆ.
‘ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು ಊರಿನಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿ ಇರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಫ್ಲೆಕ್ಸ್, ಬ್ಯಾನರ್ಗಳ ಯಾವುದೇ ಆಡಂಬರ ಮಾಡದೇ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೇ ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದು ಇಲ್ಲ. ಆದಷ್ಟು ಬೇಗ ನಿಮ್ಮನ್ನೆಲ್ಲ ಭೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿ’ ಎಂದು ಯಶ್ ಪೋಸ್ಟ್ ಮಾಡಿದ್ದಾರೆ.
View this post on Instagram
‘ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ, ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ’ ಎಂದು ಯಶ್ ಅವರು ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.
ಇದನ್ನೂ ಓದಿ: ‘ಎಸ್ಎಂ ಕೃಷ್ಣ ಅವರನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳಬೇಕು’: ಯಶ್
2024ರಲ್ಲಿ ಬರ್ತ್ಡೇ ಪ್ರಯುಕ್ತ ಯಶ್ ಅವರ ಫ್ಲೆಕ್ಸ್ ನಿಲ್ಲಿಸುವಾಗ ಮೂವರು ಅಭಿಮಾನಿಗಳ ವಿದ್ಯುತ್ ಸ್ಪರ್ಶದಿಂದ ನಿಧನರಾಗಿದ್ದರು. ಆ ಘಟನೆಯಿಂದ ಯಶ್ ಮನಸ್ಸಿಗೆ ತೀವ್ರ ನೋವಾಗಿತ್ತು. ಆ ರೀತಿಯ ಘಟನೆಗಳು ಮತ್ತೆ ನಡೆಯಬಾರದು ಎಂಬ ಕಾಳಜಿ ಯಶ್ ಅವರದ್ದು. ಹಾಗಾಗಿ ಈ ವರ್ಷ ಅವರು ಅಭಿಮಾನಿಗಳಲ್ಲಿ ಈ ರೀತಿ ಮನವಿ ಮಾಡಿಕೊಂಡಿದ್ದಾರೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಈ ಚಿತ್ರದ ಮೇಲೆ ಫ್ಯಾನ್ಸ್ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬರ್ತ್ಡೇ ಪ್ರಯುಕ್ತ ‘ಟಾಕ್ಸಿಕ್’ ಚಿತ್ರತಂಡದಿಂದ ಅಪ್ಡೇಟ್ ಸಿಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:57 pm, Mon, 30 December 24