
ಮಂಗ್ಲಿ (Mangli), ದಕ್ಷಿಣ ಭಾರತದ ಜನಪ್ರಿಯ ಗಾಯಕಿ. ತೀರಾ ಹಿಂದುಳಿದ ಸಮುದಾಯದಿಂದ ಬಂದು, ತನ್ನ ಜನಪದ ಗಾಯಕ ಕಲೆಯಿಂದ ಒಂದೊಂದೆ ಮೆಟ್ಟಿಲು ಹತ್ತಿ ಇಂದು ದಕ್ಷಿಣ ಭಾರತದ ಬೇಡಿಕೆಯ ಗಾಯಕರಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಕನ್ನಡದ ‘ರಾಬರ್ಟ್’ ಸಿನಿಮಾದ ತೆಲುಗು ಡಬ್ನಲ್ಲಿ ಮಂಗ್ಲಿ ಹಾಡಿದ ಹಾಡು ಭಾರಿ ದೊಡ್ಡ ಹಿಟ್ ಆಗಿತ್ತು. ಕರ್ನಾಟಕದಲ್ಲಿ ಹಲವು ಲೈವ್ ಶೋಗಳನ್ನು ಸಹ ಮಂಗ್ಲಿ ನೀಡಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರಕ್ಕೂ ಅವರು ಬಂದಿದ್ದರು. ಆದರೆ ಇದೀಗ ಮಂಗ್ಲಿ ಹೆಸರು ವಿವಾದದಲ್ಲಿ ಸಿಲುಕಿಕೊಂಡಿದ್ದು, ಅವರ ವಿರುದ್ಧ ಕ್ರಿಮಿನಲ್ ಆರೋಪ ಹೊರಿಸಲಾಗಿದೆ.
ಮಂಗ್ಲಿ ವಿರುದ್ಧ ಹಣಕಾಸು ವಂಚನೆ, ಬೆದರಿಕೆ, ಹಲ್ಲೆಗೆ ಬೆಂಬಲ ಇನ್ನಿತರೆ ಆರೋಪಗಳನ್ನು ಕೆಲವರು ಮಾಡಿದ್ದು, ದೂರು ಸಹ ದಾಖಲಾಗಿದೆ. ಮೈಕ್ರೋ ಫೈನಾನ್ಸ್ ಮತ್ತು ‘ಶುಭಾಕ್ಷೇತ್ರ ಇನ್ಫ್ರಾ’ ಹೆಸರಿನಲ್ಲಿ ನಡೆದ ಕೋಟ್ಯಂತರ ರೂಪಾಯಿಗಳ ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮೇಲೆ ಕೇಳಿಬರುತ್ತಿರುವ ಆರೋಪಗಳ ಕುರಿತು ಜನಪ್ರಿಯ ಗಾಯಕಿ ಮಂಗ್ಲಿ ಇದೀಗ ಪ್ರತಿಕ್ರಿಯಿಸಿದ್ದಾರೆ. ಪ್ರಕರಣ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಗಾಯಕಿ ಮಂಗ್ಲಿ ಈ ಹಗರಣದಲ್ಲಿ ಮೋಸಹೋದ ಸಂತ್ರಸ್ತರಿಗೆ ಅನ್ಯಾಯವಾಗಿದ್ದು, ಅವರಿಗೆ ನ್ಯಾಯ ಸಿಗುವವರೆಗೂ ತಾನು ಬೆಂಬಲವಾಗಿ ನಿಲ್ಲುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಹಣಕಾಸು ವಂಚನೆ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಮಂಗ್ಲಿ ತಿಳಿಸಿದ್ದಾರೆ.
ಕೆಲವು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ತನ್ನ ಹೆಸರನ್ನು ಈ ಪ್ರಕರಣಕ್ಕೆ ಎಳೆದು ತರುತ್ತಿದ್ದಾರೆ ಮತ್ತು ತನ್ನ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ‘ಸತ್ಯ ಖಂಡಿತವಾಗಿಯೂ ಹೊರಬರುತ್ತದೆ. ನನಗೆ ಭಾರತದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ಗೌರವ ಹಾಗೂ ನಂಬಿಕೆಯಿದೆ. ಕಾನೂನು ಪ್ರಕ್ರಿಯೆಯ ಮೂಲಕವೇ ಎಲ್ಲವೂ ಸ್ಪಷ್ಟವಾಗಲಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಗಾಯಕಿ ಮಂಗ್ಲಿಯಿಂದ 10 ಕೋಟಿ ವಂಚನೆ? ಹಣ ಕೇಳಿದ್ದಕ್ಕೆ ಕೊಲೆ ಬೆದರಿಕೆ ಆರೋಪ
ಸಿಮೆಂಟ್ ಕಂಪನಿ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲಿ ಹೆಚ್ಚಿನ ಲಾಭ ಹಾಗೂ ಹಣ ದ್ವಿಗುಣವಾಗುತ್ತದೆ ಎಂದು ನಂಬಿಸಿ ಮಧು ಮತ್ತು ಗ್ಯಾಂಗ್ ಕೋಟ್ಯಂತರ ರೂಪಾಯಿ ವಸೂಲಿ ಮಾಡಿರುವ ಬಗ್ಗೆ ದೂರುಗಳು ದಾಖಲಾಗಿವೆ. ಈ ಪ್ರಕರಣದಲ್ಲಿ ಆರೋಪಿಗಳಾದ ರಮಾವತ್ ಮಧು, ಬಾಲಾಜಿನಾಯಕ್ ಮತ್ತು ಭರತ್ ಚೌಹಾಣ್ ವಿರುದ್ಧ ನಲ್ಗೊಂಡ ಮತ್ತು ಗದ್ವಾಲ್‌ನಲ್ಲಿ ಸುಮಾರು 62 ಪ್ರಕರಣಗಳು ದಾಖಲಾಗಿವೆ. ಈ ಆರೋಪಿಗಳು ಮಂಗ್ಲಿಯವರ ಆಪ್ತರಾಗಿದ್ದು, ಸಹೋದರರು ಸಹ ಆಗಿದ್ದಾರೆ. ಮಂಗ್ಲಿ ವಿರುದ್ಧವೂ ಸಹ ವಂಚನೆ ಆರೋಪ ಮಾಡಲಾಗಿದೆ.
ಮಧ್ಯಮ ವರ್ಗದವರು, ಸಣ್ಣ ವ್ಯಾಪಾರಿಗಳು ಮತ್ತು ಗ್ರಾಮೀಣ ಹೂಡಿಕೆದಾರರನ್ನು ಗುರಿಯಾಗಿಸಿಕೊಂಡು ಈ ಸ್ಕೀಮ್ ನಡೆಸಲಾಗಿತ್ತು. ಆರಂಭದಲ್ಲಿ ಲಾಭ ನೀಡುವ ಮೂಲಕ ನಂಬಿಕೆ ಹುಟ್ಟಿಸಿ, ನಂತರ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿಸಿ ವಂಚಿಸಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ವಕೀಲರೊಬ್ಬರು ಮಂಗ್ಲಿ ಹಾಗೂ ಸಂಗಡಿಗರ ವಿರುದ್ಧ ದೂರು ದಾಖಲಿಸಿದ್ದಾರೆ. ಅದಾದ ಬಳಿಕ ಗಾಯಕಿ ಮಂಗ್ಲಿ ಸಹ ಪ್ರತಿದೂರು ದಾಖಲಿಸಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ. ಪ್ರಸ್ತುತ ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಮಂಗ್ಲಿ ಅವರ ಹೆಸರು ಕೇಳಿಬಂದಿರುವುದು ಚಿತ್ರರಂಗದಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಆದರೆ ಮಂಗ್ಲಿ ಮಾತ್ರ ತಾನು ನಿರ್ದೋಷಿ ಎಂದು ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ