AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರದೀಪ್ ರಾವತ್ ಅಂತ್ಯಕ್ರಿಯೆ: ಅಂತಿಮ ದರ್ಶನ ಪಡೆದು ಭಾವುಕರಾದ ಆಮಿರ್ ಖಾನ್

ಮುಂಬೈನಲ್ಲಿ ಪ್ರದೀಪ್ ರಾವತ್ ಅವರ ಅಂತ್ಯಕ್ರಿಯೆ ನಡೆಸಲಾಗಿದೆ. ನಟ ಆಮಿರ್ ಖಾನ್, ನಿರ್ದೇಶಕ ಅಶುತೋಷ್ ಗೋವಾರಿಕರ್ ಸೇರಿದಂತೆ ಹಲವರು ಬಂದು ಅಂತಿಮ ನಮನ ಸಲ್ಲಿಸಿದ್ದಾರೆ. ಆಮಿರ್ ಖಾನ್ ಮತ್ತು ಪ್ರದೀಪ್ ರಾವತ್ ಅವರು ‘ಲಗಾನ್’ ಹಾಗೂ ‘ಘಜಿನಿ’ ಚಿತ್ರಗಳಲ್ಲಿ ಒಂದಾಗಿ ಅಭಿನಯಿಸಿದ್ದರು.

ಪ್ರದೀಪ್ ರಾವತ್ ಅಂತ್ಯಕ್ರಿಯೆ: ಅಂತಿಮ ದರ್ಶನ ಪಡೆದು ಭಾವುಕರಾದ ಆಮಿರ್ ಖಾನ್
Pradeep Rawat, Aamir Khan
ಮದನ್​ ಕುಮಾರ್​
|

Updated on: Aug 05, 2026 | 8:38 PM

Share

ಬಾಲಿವುಡ್, ತೆಲುಗು, ತಮಿಳು, ಕನ್ನಡ ಚಿತ್ರರಂಗದಲ್ಲಿ ಖಳನಟ ಮತ್ತು ಪೋಷಕ ನಟನಾಗಿ ಖ್ಯಾತಿ ಪಡೆದಿದ್ದ ಹಿರಿಯ ನಟ ಪ್ರದೀಪ್ ರಾವತ್ (Pradeep Rawat) ಅವರು ಕ್ಯಾನ್ಸರ್ ಮರುಕಳಿಸಿದ ಹಿನ್ನೆಲೆಯಲ್ಲಿ ಮಂಗಳವಾರ (ಆಗಸ್ಟ್ 4) ಸಂಜೆ ನಿಧನರಾದರು. ಬುಧವಾರ ಮುಂಬೈನಲ್ಲಿ ನಡೆದ ಅವರ ಅಂತ್ಯಕ್ರಿಯೆಯಲ್ಲಿ ಬಾಲಿವುಡ್ ಸ್ಟಾರ್ ಆಮಿರ್ ಖಾನ್ (Aamir Khan) ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿ ಕಂಬನಿ ಮಿಡಿದರು. ‘ಲಗಾನ್’ ಚಿತ್ರತಂಡದವರು ಬಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಬುಧವಾರ ಸಂಜೆ ನಡೆದ ಅಂತ್ಯಕ್ರಿಯೆಯಲ್ಲಿ ‘ಲಗಾನ್’ ಚಿತ್ರದ ನಿರ್ದೇಶಕ ಅಶುತೋಷ್ ಗೋವಾರಿಕರ್, ನಟ ಆಮಿರ್ ಖಾನ್, ಯಶ್‌ಪಾಲ್ ಶರ್ಮಾ, ದಯಾ ಶಂಕರ್ ಪಾಂಡೆ ಹಾಗೂ ರಾಜೇಂದ್ರ ಗುಪ್ತಾ ಭಾಗವಹಿಸಿದ್ದರು. ‘ಲಗಾನ್’ ಚಿತ್ರದಲ್ಲಿ ದೇವ್ ಸಿಂಗ್ ಸೋಧಿ ಎಂಬ ಪಾತ್ರದ ಮೂಲಕ ಗಮನ ಸೆಳೆದಿದ್ದ ಪ್ರದೀಪ್ ರಾವತ್ ಅವರಿಗೆ ತಂಡವು ಅಂತಿಮ ನಮನ ಸಲ್ಲಿಸಿತು. ಆಮಿರ್ ಖಾನ್ ಅವರು ಪ್ರದೀಪ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ಸಲ್ಮಾನ್ ಖಾನ್ ಕಂಬನಿ:

1990ರ ‘ಬಾಘಿ’ ಚಿತ್ರದಲ್ಲಿ ಪ್ರದೀಪ್ ರಾವತ್ ಅವರೊಂದಿಗೆ ನಟಿಸಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಇಂದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಳೆಯ ಫೋಟೋ ಹಂಚಿಕೊಂಡು, ‘ನಿಮ್ಮೊಂದಿಗೆ ಕಳೆದ ಅನೇಕ ಉತ್ತಮ ಕ್ಷಣಗಳು ನೆನಪಿನಲ್ಲಿವೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸಹೋದರ’ ಎಂದು ಕಂಬನಿ ಮಿಡಿದಿದ್ದಾರೆ. ಅನೇಕ ಸೆಲೆಬ್ರಿಟಿಗಳು ಪ್ರದೀಪ್ ರಾವತ್ ಅವರ ವ್ಯಕ್ತಿತ್ವದ ಗುಣಗಾನ ಮಾಡಿದ್ದಾರೆ.

ಪ್ರಮುಖ ನಟರ ಸಂತಾಪ:

ನಟ ಯಶ್‌ಪಾಲ್ ಶರ್ಮಾ ಅವರು ಪ್ರದೀಪ್ ರಾವತ್ ಅಗಲಿಕೆಗೆ ಕಂಬನಿ ಮಿಡಿದಿದ್ದು, ‘ನನ್ನ ಬಳಿ ಹೇಳಲು ಮಾತುಗಳೇ ಸಿಗುತ್ತಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರು ನಮ್ಮ ನೆನಪುಗಳಲ್ಲಿ ಎಂದೆಂದಿಗೂ ಜೀವಂತವಾಗಿರುತ್ತಾರೆ’ ಎಂದಿದ್ದಾರೆ. ಹಿರಿಯ ನಟ ಸುರೇಂದ್ರ ಪಾಲ್ ಮಾತನಾಡಿ, ‘ಪ್ರದೀಪ್ ನನಗೆ ಅತ್ಯಂತ ಆಪ್ತರಾಗಿದ್ದರು. ನಾವಿಬ್ಬರೂ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದೆವು. ಅವರು ಕೇವಲ ಅದ್ಭುತ ನಟನಷ್ಟೇ ಅಲ್ಲ, ಉತ್ತಮ ಮನುಷ್ಯರಾಗಿದ್ದರು’ ಎಂದು ಸ್ಮರಿಸಿದರು.

ಇದನ್ನೂ ಓದಿ: ಸಲ್ಲುಗೆ ಹೋಗಿದ್ದ ‘ಘಜಿನಿ’ ಆಫರ್ ಆಮಿರ್​​ಗೆ ಕೊಡಿಸಿದ್ದ ಪ್ರದೀಪ್ ರಾವತ್

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಕೂಡ ಸಂತಾಪ ಸೂಚಿಸಿದ್ದು, ತಮ್ಮ ‘ಸರ್ದಾರ್ ಗಬ್ಬರ್ ಸಿಂಗ್’ ಮತ್ತು ‘ಕಾಟಮರಾಯುಡು’ ಚಿತ್ರಗಳಲ್ಲಿ ಪ್ರದೀಪ್ ರಾವತ್ ಅವರು ವಹಿಸಿದ್ದ ಪ್ರಮುಖ ಪಾತ್ರಗಳನ್ನು ನೆನಪಿಸಿಕೊಂಡಿದ್ದಾರೆ. ಪ್ರದೀಪ್ ರಾವತ್ ಅವರು ಪತ್ನಿ ಕಲ್ಯಾಣಿ ರಾವತ್ ಮತ್ತು ಮಗ ವಿಕ್ರಮಾದಿತ್ಯ ಅವರನ್ನು ಅಗಲಿದ್ದಾರೆ. ‘ಮಹಾಭಾರತ’ ಧಾರಾವಾಹಿಯ ಅಶ್ವತ್ಥಾಮ ಪಾತ್ರದ ಮೂಲಕ ಮನೆಮಾತಾಗಿದ್ದ ಅವರು, ‘ಸರ್ಫರೋಷ್’, ‘ಲಗಾನ್’, ‘ಸೈ’, ‘ನಾಯಕ್’ ಹಾಗೂ ಘಜಿನಿ’ಯಂತಹ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿ ದಕ್ಷಿಣ ಭಾರತ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us