Sivan Death: ಹಿರಿಯ ಛಾಯಾಗ್ರಾಹಕ, ನಿರ್ದೇಶಕ ಶಿವನ್ ನಿಧನ; ಕಂಬನಿ ಮಿಡಿದ ಗಣ್ಯರು
Sivan: ಪತ್ರಿಕಾ ಛಾಯಾಗ್ರಾಹಕನಾಗಿ, ಸಿನಿಮಾಗಳ ಸ್ಟಿಲ್ ಫೋಟೋಗ್ರಾಫರ್ ಆಗಿ, ಸಿನಿಮಾ ಕ್ಯಾಮರಾಮ್ಯಾನ್ ಆಗಿ, ನಿರ್ದೇಶಕನಾಗಿ ಶಿವನ್ ಕೆಲಸ ಮಾಡಿದ್ದರು. ಯಾಗಂ, ಅಭಯಂ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದರು.
ಮಲಯಾಳಂ ಚಿತ್ರರಂಗದ ಹಿರಿಯ ಛಾಯಾಗ್ರಾಹಕ, ನಿರ್ದೇಶಕ ಶಿವನ್ ಅವರು ಗುರುವಾರ (ಜೂ.24) ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಶಿವನ್ ನಿಧನದ ಸುದ್ದಿಯನ್ನು ಅವರ ಪುತ್ರ ಸಂಗೀತ್ ಶಿವನ್ ಖಚಿತಪಡಿಸಿದ್ದಾರೆ. ‘ನಮ್ಮ ತಂದೆ ಕೊನೆಯುಸಿರೆಳೆದರು ಎಂಬ ಸುದ್ದಿಯನ್ನು ತುಂಬ ನೋವಿನಿಂದ ನಿಮಗೆಲ್ಲ ತಿಳಿಸುತ್ತಿದ್ದೇನೆ. ಅವರೇ ನಮಗೆ ಸ್ಫೂರ್ತಿ ಮತ್ತು ಮಾದರಿ ಆಗಿದ್ದರು. ಪರಿಶ್ರಮ, ಬದ್ಧತೆ, ಶಿಸ್ತಿನಿಂದ ಅವರು ಎಲ್ಲವನ್ನೂ ಸಂಪಾದಿಸಿದ್ದರು’ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಂಗೀತ್ ಶಿವನ್ ಬರೆದುಕೊಂಡಿದ್ದಾರೆ.
‘ಮುಂದೆಯೂ ಕೂಡ ಅವರು ನಮಗೆ ದಾರಿ ತೋರಿಸುತ್ತಾರೆ. ಅವರಿಗೆ ನಾವು ಯಾವಾಗಲೂ ಋಣಿ ಆಗಿರುತ್ತೇನೆ. ಅವರು ನಮ್ಮ ಹೃದಯದಲ್ಲೇ ಇರುತ್ತಾರೆ. ಲವ್ ಯೂ ಅಪ್ಪ. ಮೋಡ ಮತ್ತು ನಕ್ಷತ್ರಗಳ ಜೊತೆ ಇದ್ದುಕೊಂಡು ನೀವು ನಮ್ಮನ್ನು ನೋಡುತ್ತಿರುತ್ತೀರಿ ಎಂದು ನಾನು ನಂಬಿದ್ದೇನೆ. ಓಂ ಶಾಂತಿ’ ಎಂದು ಸಂಗೀತ್ ಶಿವನ್ ಪೋಸ್ಟ್ ಮಾಡಿದ್ದಾರೆ.
ಪತ್ರಿಕಾ ಛಾಯಾಗ್ರಾಹಕನಾಗಿ, ಸಿನಿಮಾಗಳಿಗೆ ಸ್ಟಿಲ್ ಫೋಟೋಗ್ರಾಫರ್ ಆಗಿ, ಸಿನಿಮಾ ಕ್ಯಾಮರಾಮ್ಯಾನ್ ಆಗಿ, ನಿರ್ದೇಶಕನಾಗಿ ಶಿವನ್ ಕೆಲಸ ಮಾಡಿದ್ದರು. ಯಾಗಂ, ಅಭಯಂ, ಒರು ಯಾತ್ರ ಮುಂತಾದ ಸಿನಿಮಾಗಳಿಗೆ ಅವರು ನಿರ್ದೇಶನ ಮಾಡಿದ್ದರು. ಶಿವನ್ ಅವರ ಪುತ್ರರಾದ ಸಂತೋಷ್, ಸಂಗೀತ್ ಹಾಗೂ ಸಂಜೀವ್ ಅವರು ಕೂಡ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಮೂವರು ಪುತ್ರರು ಮತ್ತು ಓರ್ವ ಪುತ್ರಿಯನ್ನು (ಸರಿತಾ) ಶಿವನ್ ಅಗಲಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯ್, ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿಯಾಳ್, ಸ್ಪೀಕರ್ ಎಂ.ಬಿ. ರಾಜೇಶ್ ಸೇರಿದಂತೆ ಅನೇಕರು ಶಿವನ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ‘ಶಿವನ್ ಅವರು ತಿರುವನಂತಪುರಂನ ಮೊದಲ ಪ್ರೆಸ್ ಫೋಟೋಗ್ರಾಫರ್ ಆಗಿದ್ದರು. ಅವರು ಅನೇಕ ಐತಿಹಾಸಿಕ ಕ್ಷಣಗಳನ್ನು ಸೆರೆಹಿಡಿದಿದ್ದರು. ರಾಜ್ಯ ರಾಜಧಾನಿಯ ಸಾಂಸ್ಕೃತಿಕ ವಲಯದಲ್ಲಿ ಅವರು ತುಂಬ ಸಕ್ರಿಯರಾಗಿದ್ದರು’ ಎಂದು ರಾಜೇಶ್ ಹೇಳಿದ್ದಾರೆ. ಚಿತ್ರರಂಗದ ಅನೇಕರು ಕೂಡ ಶಿವನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ:
ನಿಧನರಾದ ಮೇಲೂ ಸಂಚಾರಿ ವಿಜಯ್ಗೆ ಅಗೌರವ; ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಎಡವಟ್ಟು
Milkha Singh Death: ‘ನೀವು ಸದಾ ಜೀವಂತವಾಗಿರುತ್ತೀರಿ’; ಮಿಲ್ಖಾ ಸಿಂಗ್ ನಿಧನಕ್ಕೆ ಫರ್ಹಾನ್ ಅಖ್ತರ್ ಸಂತಾಪ