ಸಲ್ಮಾನ್ ಖಾನ್ರ ಕೊಲ್ಲುವ ಯತ್ನದಲ್ಲಿರುವ ಪಾತಕಿಗಳ ಬಳಿ ಮಾಜಿ ಗರ್ಲ್ಫ್ರೆಂಡ್ ಮನವಿ
ಸಲ್ಮಾನ್ ಖಾನ್ ಜೀವ ಅಪಾಯದಲ್ಲಿದೆ. ಸಲ್ಮಾನ್ ಅನ್ನು ಕೊಲ್ಲಲು ಭೂಗತ ಪಾತಕಿಗಳು ಸತತ ಪ್ರಯತ್ನ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ರ ಮಾಜಿ ಪ್ರೇಯಸಿಯೊಬ್ಬರು ಭೂಗತ ಪಾತಕಿಗಳ ಬಳಿ ಮನವಿಯೊಂದನ್ನು ಮಾಡಿದ್ದಾರೆ.

ಸಲ್ಮಾನ್ ಖಾನ್ಗೆ (Salman Khan) ಜೀವ ಬೆದರಿಕೆ ಇದೆ. ಭೂಗತ ಪಾತಕಿಗಳ ದೊಡ್ಡ ಗುಂಪೊಂದು ಸಲ್ಮಾನ್ ಖಾನ್ರನ್ನು ಕೊಲ್ಲುವ ಸತತ ಪ್ರಯತ್ನದಲ್ಲಿ ತೊಡಗಿದೆ. ಈಗಾಗಲೇ ಕೆಲವು ಬಾರಿ ಪ್ರಯತ್ನಗಳನ್ನು ಸಹ ಮಾಡಲಾಗಿದ್ದು, ಪ್ರಯತ್ನಗಳೆಲ್ಲ ವಿಫಲವಾಗಿವೆ. ಕೆಲವು ದಿನಗಳ ಹಿಂದೆಯಷ್ಟೆ ಸಲ್ಮಾನ್ ಖಾನ್ರ ಮನೆಯ ಮೇಲೆ ಗುಂಡಿನ ದಾಳಿಯನ್ನು ಸಹ ಮಾಡಲಾಗಿತ್ತು. ಗುಂಡಿನ ದಾಳಿ ಮಾಡಿದವರ ಬಂಧನವಾಗಿದೆ. ಆದರೂ ಸಹ ಭೂಗತ ಪಾತಕಿಗಳು ಸಲ್ಮಾನ್ ಖಾನ್ರನ್ನು ಕೊಂದೇ ಸಿದ್ದ ಎಂದು ಹಠ ಹಿಡಿದಿದ್ದಾರೆ. ಈ ನಡುವೆ ಸಲ್ಮಾನ್ ಖಾನ್ರ ಮಾಜಿ ಪ್ರೇಯಸಿ, ಭೂಗತ ಪಾತಕಿಗಳ ಬಳಿ ಮನವಿ ಮಾಡಿದ್ದಾರೆ.
ಸಲ್ಮಾನ್ ಖಾನ್ರ ಮಾಜಿ ಪ್ರೇಯಸಿ ಎನ್ನಲಾಗುವ ಸೋಮಿ ಅಲಿ, ಸಲ್ಮಾನ್ ಖಾನ್ರನ್ನು ಕೊಲ್ಲಲು ನಿಶ್ಚಯಿಸಿರುವ ಲಾರೆನ್ಸ್ ಬಿಶ್ಣೋಯಿ ಹಾಗೂ ಗೋಲ್ಡಿ ಬ್ರಾರ್ ಇನ್ನಿತರೆ ಪಾತಕಿಗಳ ಬಳಿ ಮನವಿ ಮಾಡಿರುವ ಸೋಮಿ ಅಲಿ, ‘ಸಲ್ಮಾನ್ ಈಗ ಅನುಭವಿಸುತ್ತಿರುವ ಸ್ಥಿತಿ ನನ್ನ ಶತ್ರುವಿಗೂ ಬೇಡ. ಅವರಿಗೆ ಆಗುತ್ತಿರುವ ಸಮಸ್ಯೆ ಇನ್ಯಾರಿಗೂ ಆಗುವುದು ಬೇಡ. ಹಲವರು ಹಲವು ರೀತಿ ಮಾತನಾಡಿದ್ದಾರೆ, ಆರೋಪಗಳನ್ನು ಮಾಡಿದ್ದಾರೆ. ಇರಲಿ, ನಿಂದಕರು, ನಿಂದನೆ ಮಾಡುತ್ತಲೇ ಇರಲಿ. ಸಲ್ಮಾನ್ಗೆ ಎದುರಿಸಬೇಕಾಗಿ ಬಂದ ಸಮಸ್ಯೆಗಳು ಇನ್ಯಾರಿಗೂ ಬರದೇ ಇರಲಿ. ಸಲ್ಮಾನ್ ಖಾನ್, ಶಾರುಖ್ ಖಾನ್ ನನ್ನ ಶತ್ರುವಿಗೂ ಸಹ ಅಂಥಹಾ ಸಮಸ್ಯೆಗಳು ಬರುವುದು ಬೇಡ. ನನ್ನ ಪ್ರಾರ್ಥನೆ ಎಂದಿಗೂ ಸಲ್ಮಾನ್ ಖಾನ್ ಜೊತೆಗಿದೆ’ ಎಂದಿದ್ದಾರೆ ಸೋಮಿ ಅಲಿ.
ಮುಂದುವರೆದು, ‘ಸಲ್ಮಾನ್ ಖಾನ್ ಮನೆ ಮೇಲೆ ಆದ ದಾಳಿ ಸುದ್ದಿ ಕೇಳಿ ನನಗೆ ಮಾತ್ರವಲ್ಲ ನನ್ನ ತಾಯಿಗೂ ಬಹಳ ಆಘಾತವಾಯ್ತು. ನೋಡಿ ಎಲ್ಲರೂ ತಮ್ಮ ತಮ್ಮ ಇಮೇಜ್ ಉಳಿಸಿಕೊಳ್ಳಲು ಏನಾದರೂ ಮಾಡುತ್ತಾರೆ. ಅದು ನಾನೇ ಇರಲಿ, ಸಲ್ಮಾನ್, ಶಾರುಖ್ ಯಾರೇ ಆಗಿರಲಿ. ಹಾಗೆಯೇ ಸಲ್ಮಾನ್ ಖಾನ್ ತನ್ ಇಮೇಜು ಉಳಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಆದರೆ ಈಗ ನನ್ನ ಆತಂಕ ಇರುವುದು ಸಲ್ಮಾನ್ ಅನುಭವಿಸುತ್ತಿರುವ ಆತಂಕದ ಬಗ್ಗೆ. ಆತನಂತೆ ದುಃಖದ ಸಮಯ ಯಾರಿಗೂ ಬರುವುದು ಬೇಡ’ ಎಂದಿದ್ದಾರೆ.
ಇದನ್ನೂ ಓದಿ:ಸಲ್ಮಾನ್ ಖಾನ್ ಜೊತೆ ನಟಿಸಲು ಭಾರಿ ಸಂಭಾವನೆ ಪಡೆಯಲಿದ್ದಾರೆ ರಶ್ಮಿಕಾ ಮಂದಣ್ಣ
ಸಲ್ಮಾನ್ ಖಾನ್ ಅನ್ನು ಕೊಲ್ಲುವ ಮಾತನಾಡುತ್ತಿರುವವರ ಬಗ್ಗೆ ಮಾತನಾಡಿದ ಸೋಮಿ ಅಲಿ, ‘ಯಾರದ್ದಾದರೂ ಜೀವ ತೆಗೆಯುವುದು ಸ್ವೀಕಾರಾರ್ಹವಲ್ಲ. ಅದು ಸಲ್ಮಾನ್ ಖಾನ್ ಆಗಿರಲಿ ಅಥವಾ ಯಾವುದಾದರೂ ಸಾಮಾನ್ಯ ವ್ಯಕ್ತಿಯೇ ಆಗಿರಲಿ. ನಿಮಗೆ ನ್ಯಾಯ ಬೇಕು ಎಂದಾದರೆ ನೀವು ನ್ಯಾಯಾಲಯಕ್ಕೆ ಹೋಗಬಹುದು. ನಾನು ಬಿಶ್ಣೋಯಿ ಬಳಿ ಮನವಿ ಮಾಡುತ್ತೇನೆ, ಸಲ್ಮಾನ್ ಖಾನ್ ಜೀವ ತೆಗೆಯುವುದರಿಂದ ಕೃಷ್ಣಮೃಗದ ಜೀವ ಮರಳಿ ಬರುವುದಿಲ್ಲ. ನನ್ನ ವಿಷಯದಲ್ಲಿಯೂ ಅಷ್ಟೆ, ನನಗೇನು ನಡೆಯಿತೊ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಏನು ನಡೆದಿದೆಯೋ ಅದು ನಡೆದುಬಿಟ್ಟಿದೆ. ಈಗ ನಾನು ಶಾಂತಿ ಸಾಧಿಸಿದ್ದೇನೆ. ಕಣ್ಣೀರು ರಹಿತ ಜೀವನ ನಡೆಸಲು ನಿರ್ಧರಿಸಿದ್ದೇನೆ’ ಎಂದಿದ್ದಾರೆ.
ಸೋಮಿ ಅಲಿ 1990 ರಲ್ಲಿ ಬಾಲಿವುಡ್ನ ಜನಪ್ರಿಯ ನಟಿಯಾಗಿದ್ದರು. ಸಲ್ಮಾನ್ ಖಾನ್ ಸೇರಿದಂತೆ ಹಲವು ನಟರೊಟ್ಟಿಗೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಲ್ಮಾನ್ ಖಾನ್ ಜೊತೆಗೆ ಸೋಮಿ ಅಲಿ ಹೆಸರು ಜೋರಾಗಿಯೇ ಕೇಳಿ ಬಂದಿತ್ತು. ಆದರೆ ಸಲ್ಮಾನ್ ಜೊತೆಗೆ ಬ್ರೇಕ್ ಅಪ್ ಮಾಡಿಕೊಂಡು ಸೋಮಿ ಅಲಿ ಅಮೆರಿಕಕ್ಕೆ ಹೊರಟು ಹೋದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




