ನಟಿ-ರಾಜಕಾರಣಿ ಸೋನಾಲಿ ಪೋಗಟ್ (Sonali Phogat) ಅವರ ನಿಧನದ ಪ್ರಕರಣ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. 43ನೇ ವಯಸ್ಸಿಗೆ ಅವರು ಇಹಲೋಕ ತ್ಯಜಿಸಿರುವುದು ನೋವಿನ ಸಂಗತಿ. ಅವರ ಆಪ್ತರಿಗೆ ಮತ್ತು ಕುಟುಂಬದವರಿಗೆ ಈ ಘಟನೆಯಿಂದ ತೀವ್ರ ಆಘಾತ ಆಗಿದೆ. ಗೋವಾದಲ್ಲಿ ಆಗಸ್ಟ್ 23ರಂದು ಅವರು ಹೃದಯಾಘಾತದಿಂದ ಮೃತರಾದರು ಎಂದು ಸುದ್ದಿ ಆಗಿತ್ತು. ಆದರೆ ಈಗ ಅವರ ಸಾವಿನ (Sonali Phogat Death) ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕುಟುಂಬದವರೇ ಹೊಸ ಆರೋಪ ಮಾಡುತ್ತಿದ್ದಾರೆ. ಸೋನಾಲಿ ಪೋಗಟ್ ಸಾವಿಗೆ ಹಾರ್ಟ್ ಅಟ್ಯಾಕ್ (Heart Attack) ಕಾರಣ ಅಲ್ಲ, ಅವರನ್ನು ಕೊಲೆ ಮಾಡಲಾಗಿದೆ ಎಂದು ಅವರ ಪುತ್ರಿ ಆರೋಪಿಸಿದ್ದಾರೆ. ತಾಯಿಯ ಸಾವಿಗೆ ನ್ಯಾಯ ಸಿಗಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ. ಸೋನಾಲಿ ಪೋಗಟ್ ಅವರ ಪರ್ಸನಲ್ ಮ್ಯಾನೇಜರ್ ಸುಧೀರ್ ಸಂಗ್ವಾನ್ ಹಾಗೂ ಸಹಾಯಕ ಸುಖ್ವಿಂದರ್ ಸಿಂಗ್ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂಬುದು ಕುಟುಂಬದವರ ಆರೋಪ.
ಸೋಶಿಯಲ್ ಮೀಡಿಯಾದಲ್ಲಿ ಸೋನಾಲಿ ಪೋಗಟ್ ಫೇಮಸ್ ಆಗಿದ್ದರು. ಟಿಕ್ ಟಾಕ್ ಬ್ಯಾನ್ ಆಗುವುದಕ್ಕೂ ಮುನ್ನ ಅವರು ಅನೇಕ ವಿಡಿಯೋಗಳನ್ನು ಮಾಡಿ ಜನಪ್ರಿಯತೆ ಪಡೆದಿದ್ದರು. 2020ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ‘ಹಿಂದಿ ಬಿಗ್ ಬಾಸ್’ ಪ್ರವೇಶಿಸಿದ್ದರು. ಅಲ್ಲಿಯೂ ಅವರು ಗಮನ ಸೆಳೆದಿದ್ದರು. 2019ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಕುಲದೀಪ್ ಬಿಷ್ಣೋಯ್ ವಿರುದ್ಧ ಹರ್ಯಾಣದ ಆದಂಪುರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋನಾಲಿ ಕಣಕ್ಕಿಳಿದಿದ್ದರು. ಈಗ ಅವರ ಸಾವಿನ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.
‘ಸೂಕ್ತ ತನಿಖೆ ಆಗಬೇಕು. ನನ್ನ ತಾಯಿಯ ಸಾವಿಗೆ ನ್ಯಾಯ ಸಿಗಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಬೇಕು’ ಎಂದು ಸೋನಾಲಿ ಪೋಗಟ್ ಅವರ ಪುತ್ರಿ ಹೇಳಿದ್ದಾರೆ. ಎಎನ್ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ ಎಂದು ವರದಿ ಆಗಿದೆ. ‘ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸದ ಹೊರತು ನಾವು ಮರಣೋತ್ತರ ಪರೀಕ್ಷೆ ನಡೆಸಲು ಒಪ್ಪಿಗೆ ನೀಡುವುದಿಲ್ಲ’ ಎಂದು ಸೋನಾಲಿ ಪೋಗಟ್ ಸಹೋದರ ರಿಂಕು ಧಾಕಾ ಹೇಳಿದ್ದರು.
ಕುಟುಂಬದವರು ಒತ್ತಾಯಿಸಿದ ಬಳಿಕ ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದಾರಾದರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸೋನಾಲಿ ಪೋಗಟ್ ಕುಟುಂಬದವರು ಆರೋಪಿಸುತ್ತಿದ್ದಾರೆ. ‘ಗೋವಾ ಪೊಲೀಸರು ತುಂಬ ಆರಾಮಾಗಿ ಇದ್ದಾರೆ. ಕುಟುಂಬದವರ ಜೊತೆ ಅವರು ಸಹಕರಿಸುತ್ತಿಲ್ಲ. ಕೇಸ್ ತೆಗೆದುಕೊಂಡಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿ ಸರಿಯಾಗಿ ತನಿಖೆ ನಡೆಯದಿದ್ದರೆ ನಾವು ಹೊಸದಾಗಿ ಮರಣೋತ್ತರ ಪರೀಕ್ಷೆ ಮಾಡಿಸುತ್ತೇವೆ’ ಎಂದು ಸಹೋದರ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.