Sonu Nigam: ‘ಒಂದು ವೇಳೆ ಅವರಿದ್ದಿದ್ದರೆ..’; ಪದ್ಮಶ್ರೀ ಪ್ರಶಸ್ತಿಯನ್ನು ತಾಯಿಗೆ ಅರ್ಪಿಸಿ ಸೋನು ನಿಗಮ್ ಮಾತು
Padma Awards 2022: ಖ್ಯಾತ ಗಾಯಕ ಸೋನು ನಿಗಮ್ಗೆ ಈ ಬಾರಿ ಪದ್ಮ ಶ್ರೀ ಪ್ರಶಸ್ತಿ ಲಭಿಸಿದೆ. ಈ ಕುರಿತು ಗಾಯಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ದೇಶದ 128 ಸಾಧಕರಿಗೆ ಈ ಬಾರಿಯ ಪದ್ಮ ಪ್ರಶಸ್ತಿ ಲಭಿಸಿದೆ. ಅದರಲ್ಲಿ ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ಗೆ (Sonu Nigam) ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಕನ್ನಡ, ಹಿಂದಿ ಸೇರಿದಂತೆ ದೇಶದ ಹತ್ತು ಹಲವು ಭಾಷೆಗಳಲ್ಲಿ ಹಾಡಿ ಜನಮನ ಗೆದ್ದಿರುವ ಅಪರೂಪದ ಪ್ರತಿಭೆ ಸೋನು ನಿಗಮ್. 1990ರ ಆರಂಭದಲ್ಲಿ ಪ್ರಮುಖ ವೇದಿಕೆಗಳಲ್ಲಿ ಹಾಡುಗಾರರಾಗಿ ಕಾಣಿಸಿಕೊಂಡಿದ್ದ ಸೋನು ನಿಗಮ್ ಬಾಲಿವುಡ್ ಪ್ರವೇಶ ಮಾಡಿದ್ದು 1993ರಲ್ಲಿ. ‘ಆಜಾ ಮೇರಿ ಜಾನ್’ ಚಿತ್ರದ ‘ಓ ಆಸ್ಮಾನ್ ವಾಲೆ’ ಹಾಡಿನ ಮೂಲಕ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಇದುವರೆಗೆ ಸುಮಾರು 5000ಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿರುವ ಸೋನು ನಿಗಮ್, 2003ರಲ್ಲಿ ‘ಕಲ್ ಹೋ ನಾ ಹೋ’ ಚಿತ್ರದ ಶೀರ್ಷಿಕೆ ಗೀತೆಗೆ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದರು. ಚಿತ್ರಗೀತೆಗಳಲ್ಲದೇ ಹಲವು ಮ್ಯೂಸಿಕ್ ಆಲ್ಬಂಗಳನ್ನೂ ತೆರೆಗೆ ತಂದಿರುವ ಸೋನು ನಿಗಮ್, ದೀವಾನಾ (1999), ಜಾನ್ (2000), ಚಂದಾ ಕೀ ಡೋಲಿ (2005), ರಫಿ ರೆಸರೆಕ್ಟೆಡ್ (2008) ಮೊದಲಾದವುಗಳಿಂದ ಜನಪ್ರಿಯತೆ ಗಳಿಸಿದರು. ಯುಎಸ್ ಬಿಲ್ಬೋರ್ಡ್ ಚಾರ್ಟ್ಸ್ನಲ್ಲಿ ಎರಡೆರಡು ಬಾರಿ ಕಾಣಿಸಿಕೊಂಡ ಅಪರೂಪದ ಪ್ರತಿಭೆ ಸೋನು ನಿಗಮ್. ಸರಿಗಮಪ ಮೂಲಕ ಕಿರುತೆರೆಗೆ 1995ರಲ್ಲಿ ಪ್ರವೇಶಿಸಿದ ಸೋನು ನಿಗಮ್, ಇಂಡಿಯನ್ ಐಡಲ್ನ ಜಡ್ಜ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.
ಪ್ರಶಸ್ತಿ ಕುರಿತು ಸೋನು ನಿಗಮ್ ಪ್ರತಿಕ್ರಿಯೆ ಏನು? ಪ್ರಶಸ್ತಿ ಪಡೆದ ಕುರಿತಂತೆ ಸೋನು ನಿಗಮ್ ಪ್ರತಿಕ್ರಿಯೆಯನ್ನು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಪದ್ಮಶ್ರೀ ಗೌರವ ಲಭಿಸಿದ ಸಂತಸ ಹಂಚಿಕೊಂಡ ಸೋನು ನಿಗಮ್, ‘‘ಜನವರಿ 25 ನನಗೆ ಹಾಗೂ ನನ್ನ ಕುಟುಂಬದ ಪಾಲಿಗೆ ವಿಶೇಷ ದಿನ. ನನ್ನನ್ನು ಪದ್ಮ ಪ್ರಶಸ್ತಿಗೆ ಅರ್ಹ ಎಂದು ಭಾವಿಸಿದ್ದಕ್ಕೆ ಭಾರತ ಸರ್ಕಾರಕ್ಕೆ ಧನ್ಯವಾದಗಳು. ಈ ದೊಡ್ಡ ಗೌರವಕ್ಕೆ ಹೆಸರನ್ನು ನಿರ್ದೇಶಿಸಿದ ಹಾಗೂ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಸೋನು ನುಡಿದಿದ್ದಾರೆ.
ತಾಯಿಗೆ ಪ್ರಶಸ್ತಿ ಅರ್ಪಿಸಿದ ಸೋನು ನಿಗಮ್: ಪದ್ಮ ಪ್ರಶಸ್ತಿಯನ್ನು ಅಗಲಿರುವ ತಮ್ಮ ತಾಯಿಗೆ ಅರ್ಪಿಸುವುದಾಗಿ ಸೋನು ನಿಗಮ್ ನುಡಿದಿದ್ದಾರೆ. ‘‘ಈ ಸಂದರ್ಭದಲ್ಲಿ ನನ್ನ ತಾಯಿ ಶೋಭಾ ನಿಗಮ್ ಹಾಗೂ ತಂದೆ ಅಗಮ್ ಕುಮಾರ್ ನಿಗಮ್ ಅವರಿಗೂ ಧನ್ಯವಾದ ಸಲ್ಲಿಸುತ್ತೇನೆ. ಹಾಗೆಯೇ ಈ ಪ್ರಶಸ್ತಿಯನ್ನು ತಾಯಿಗೆ ಅರ್ಪಿಸಲು ಇಚ್ಛಿಸುತ್ತೇನೆ. ಒಂದು ವೇಳೆ ಅವರಿದ್ದಿದ್ದರೆ ಬಹಳ ಭಾವುಕರಾಗುತ್ತಿದ್ದರು’’ ಎಂದು ಸೋನು ನಿಗಮ್ ಹೇಳಿದ್ದಾರೆ. ಇದೇ ವೇಳೆ ಸಂಗೀತ ಕಲಿಸಿದ ಗುರುಗಳಿಗೆ ಸೋನು ನಿಗಮ್ ನಮಿಸಿದ್ದಾರೆ. ಹಾಗೆಯೇ ಸಹದ್ಯೋಗಿಗಳು, ಕುಟುಂಬ ಹಾಗೂ ಸ್ನೇಹಿತರಿಗೆ ಸೋನು ನಿಗಮ್ ವಂದನೆ ಸಲ್ಲಿಸಿದ್ದಾರೆ.
ಮೆಲೋಡಿ ಕಿಂಗ್, ಆಧುನಿಕ ಮಹಮ್ಮದ್ ರಫಿ ಮೊದಲಾದ ಖ್ಯಾತಿ ಗಳಿಸಿರುವ ಸೋನು ನಿಗಮ್ ತಮ್ಮ ಮಾಧುರ್ಯ ಗೀತೆಗಳ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದವರು. ಅವರಿಗೆ ಪ್ರಶಸ್ತಿ ಲಭಿಸಿದ್ದಕ್ಕೆ ದೇಶಾದ್ಯಂತ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ:
Sonu Nigam: ಖ್ಯಾತ ಗಾಯಕ ಸೋನು ನಿಗಮ್ ಸಾಧನೆಗೆ ಒಲಿಯಿತು ಪದ್ಮಶ್ರೀ ಪ್ರಶಸ್ತಿಯ ಗರಿ
‘ಮೆಗಾ ಸ್ಟಾರ್’ ಚಿರಂಜೀವಿಗೆ ಕೊರೊನಾ ಪಾಸಿಟಿವ್; ಮನೆಯಲ್ಲೇ ಕ್ವಾರಂಟೈನ್ ಆದ ನಟ