‘ಮೆಗಾ ಸ್ಟಾರ್’ ಚಿರಂಜೀವಿಗೆ ಕೊರೊನಾ ಪಾಸಿಟಿವ್; ಮನೆಯಲ್ಲೇ ಕ್ವಾರಂಟೈನ್ ಆದ ನಟ
‘ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ಸಹ ನನಗೆ ಕೊರೊನಾ ಪಾಸಿಟಿವ್ ಆಗಿದೆ. ನಿನ್ನೆ ರಾತ್ರಿಯಿಂದ ಕೊವಿಡ್ ಲಕ್ಷಣಗಳು ಕಾಣಿಸಿವೆ’ ಎಂದು ‘ಮೆಗಾ ಸ್ಟಾರ್’ ಜಿರಂಜೀವಿ ಹೇಳಿದ್ದಾರೆ.
ಕೊರೊನಾ ವೈರಸ್ (Coronavirus) ಹಾವಳಿಗೆ ಎಲ್ಲರೂ ಬೇಸತ್ತಿದ್ದಾರೆ. ಕೊವಿಡ್ ಮೂರನೇ ಅಲೆಯಿಂದಾಗಿ ಅನೇಕ ಉದ್ಯಮಗಳು ಸೊರಗಿವೆ. ಚಿತ್ರೋದ್ಯಮದ ವಹಿವಾಟು ಕೂಡ ಕುಸಿದಿದೆ. ಹಲವು ಸೆಲೆಬ್ರಿಟಿಗಳಿಗೆ ಕೊರೊನಾ ಪಾಸಿಟಿವ್ (Corona Positive) ಆಗಿದೆ. ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕು ತಗುಲಿಸಿಕೊಂಡ ಸೆಲೆಬ್ರಿಟಿಗಳ ಸಂಖ್ಯೆ ಹೆಚ್ಚಿದೆ. ಕೆಲವೇ ದಿನಗಳ ಹಿಂದೆ ಲತಾ ಮಂಗೇಶ್ಕರ್, ಕರೀನಾ ಕಪೂರ್ ಖಾನ್, ಜಾನ್ ಅಬ್ರಾಹಂ, ಏಕ್ತಾ ಕಪೂರ್ ಸೇರಿದಂತೆ ಅನೇಕರಿಗೆ ಕೊವಿಡ್ ಪಾಸಿಟಿವ್ ಆಗಿರುವುದು ತಿಳಿದು ಬಂತು. ಈಗ ಟಾಲಿವುಡ್ ನಟ, ‘ಮೆಗಾ ಸ್ಟಾರ್’ ಚಿರಂಜೀವಿ (Megastar Chiranjeevi) ಅವರಿಗೂ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಅವರು ಟ್ವೀಟ್ ಮಾಡಿದ್ದು, ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಅವರ ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಸದ್ಯ ತಮ್ಮ ಆರೋಗ್ಯದ ಸ್ಥಿತಿ ಹೇಗಿದೆ ಎಂಬುದನ್ನು ಚಿರಂಜೀವಿ ತಿಳಿಸಿದ್ದಾರೆ.
‘ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ಸಹ ನನಗೆ ಕೊರೊನಾ ಪಾಸಿಟಿವ್ ಆಗಿದೆ. ನಿನ್ನೆ ರಾತ್ರಿಯಿಂದ ಕೊವಿಡ್ ಲಕ್ಷಣಗಳು ಕಾಣಿಸಿವೆ. ಹಾಗಾಗಿ ನಾನು ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ ಅಂತ ವಿನಂತಿಸುತ್ತೇನೆ. ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತೇನೆ’ ಎಂದು ಮೆಗಾ ಸ್ಟಾರ್ ಜಿರಂಜೀವಿ ಟ್ವೀಟ್ ಮಾಡಿದ್ದಾರೆ.
Dear All,
Despite all precautions, I have tested Covid 19 Positive with mild symptoms last night and am quarantining at home.
I request all who came in contact with me over the last few days to get tested too.
Can’t wait to see you all back soon!
— Chiranjeevi Konidela (@KChiruTweets) January 26, 2022
ಕೊರೊನಾ ಹಾವಳಿಯಿಂದಾಗಿ ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾದ ಬಿಡುಗಡೆ ದಿನಾಂಕ ಕೂಡ ಮುಂದಕ್ಕೆ ಹೋಗಿದೆ. ಆ ಕುರಿತು ಇತ್ತೀಚೆಗೆ ಅನೌನ್ಸ್ ಮಾಡಲಾಗಿತ್ತು. ಪರಿಸ್ಥಿತಿ ಚೆನ್ನಾಗಿ ಇದ್ದರೆ ಫೆ.4ರಂದು ‘ಆಚಾರ್ಯ’ ಚಿತ್ರವನ್ನು ತೆರೆಕಾಣಿಸಲು ನಿರ್ಮಾಪಕರು ಸಜ್ಜಾಗಿದ್ದರು. ಆದರೆ ಕೊರೊನಾ ಹಾವಳಿಯಿಂದ ಇನ್ನೂ ಅನೇಕ ಕಡೆಗಳಲ್ಲಿ ಕಠಿಣ ನಿಯಮಗಳು ಜಾರಿಯಲ್ಲಿವೆ. ಬಹುತೇಕ ರಾಜ್ಯಗಳ ಚಿತ್ರಮಂದಿರಗಳಲ್ಲಿ ಶೇ.50 ಆಸನ ಭರ್ತಿಗೆ ಮಾತ್ರ ಅವಕಾಶ ಇದೆ. ಈ ಎಲ್ಲ ಕಾರಣಗಳಿಂದಾಗಿ ‘ಆಚಾರ್ಯ’ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಯಿತು.
ಕೊರೊನಾದ ಕಣ್ಣಾಮುಚ್ಚಾಲೆಯಿಂದಾಗಿ ಎಲ್ಲ ಉದ್ಯಮಗಳಿಗೂ ತೊಂದರೆ ಆಗಿದೆ. ನಾಳೆ ಏನಾಗಲಿದೆ ಎಂಬ ಅನಿಶ್ಚಿತತೆ ಕಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರಿಲೀಸ್ ಡೇಟ್ಗಾಗಿ ಸ್ಟಾರ್ ನಟರ ನಡುವೆ ಪೈಪೋಟಿ ಇದೆ. ಫೆ.4ರಂದು ಬಿಡುಗಡೆ ಆಗಬೇಕಿದ್ದ ‘ಆಚಾರ್ಯ’ ಚಿತ್ರವನ್ನು ಈಗ ಏಪ್ರಿಲ್ 1ರಂದು ತೆರೆಕಾಣಿಸಲು ನಿರ್ಧರಿಸಲಾಗಿದೆ. ಏಪ್ರಿಲ್ 2ರಂದು ಯುಗಾದಿ ಹಬ್ಬ ಇದೆ. ಆ ಸಮಯದಲ್ಲಿ ಸಿನಿಮಾ ಬಿಡುಗಡೆಯಾದರೆ ಒಳ್ಳೆಯ ಕಲೆಕ್ಷನ್ ಆಗಲಿದೆ. ಆ ಕಾರಣದಿಂದಲೇ ‘ಆಚಾರ್ಯ’ ತಂಡ ಏ.1ರ ದಿನಾಂಕದ ಮೇಲೆ ಕಣ್ಣಿಟ್ಟಿದೆ. ಈ ಚಿತ್ರದಲ್ಲಿ ರಾಮ್ ಚರಣ್ ಕೂಡ ನಟಿಸಿದ್ದಾರೆ. ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ:
‘ಮಹಾಭಾರತ’ ಸೀರಿಯಲ್ ಅರ್ಜುನ ಪಾತ್ರಧಾರಿ ಶಾಹೀರ್ ಶೇಖ್ ತಂದೆ ಕೊವಿಡ್ನಿಂದ ನಿಧನ