ನಟ ಸೋನು ಸೂದ್ ಮಾಡುತ್ತಿರುವ ಸಹಾಯಗಳು ಒಂದೆರಡಲ್ಲ. ದಿನದಿಂದ ದಿನಕ್ಕೆ ಅವರ ಸಮಾಜಸೇವೆ ಕಾರ್ಯಗಳು ಹೆಚ್ಚುತ್ತಲೇ ಇವೆ. ಲಾಕ್ಡೌನ್ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಎಷ್ಟೋ ಜನರಿಗೆ ಅವರು ಸಹಾಯ ಮಾಡಿದ್ದಾರೆ. ಈಗ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಲು ಅವರು ಮುಂದಾಗಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳು ಐಎಎಸ್ ಪರೀಕ್ಷೆ ಬರೆಯಬೇಕು ಎಂಬ ಕನಸು ಇಟ್ಟುಕೊಂಡಿರುತ್ತಾರೆ. ಆದರೆ ಅವರಿಗೆ ಕೋಚಿಂಗ್ ಪಡೆಯಲು ಹಣ ಇರುವುದಿಲ್ಲ. ಈಗ ಅಂಥವರಿಗೆ ಸೋನು ಸೂದ್ ಸಹಾಯ ಮಾಡಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಸ್ವತಃ ಸೋನು ಸೂದ್ ತಮ್ಮ ಟ್ವಿಟರ್ ಖಾತೆ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ‘ಸೂದ್ ಚಾರಿಟಿ ಫೌಂಡೇಶನ್’ ವತಿಯಿಂದ ಈ ಸಹಾಯ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಅವರು ‘ಸಂಭವಂ’ ಎಂದು ಹೆಸರು ಇಟ್ಟಿದ್ದಾರೆ. ಈ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ತುಂಬ ಖುಷಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
‘ಮಾಡಬೇಕಿದೆಯೇ ಐಎಎಸ್ ತಯಾರಿ? ನಾವು ಹೊತ್ತುಕೊಳ್ಳುತ್ತೇವೆ ನಿಮ್ಮ ಜವಾಬ್ದಾರಿ’ ಎಂದು ಖುಷಿಯ ಸಮಾಚಾರವನ್ನು ಸೋನು ಸೂದ್ ತಿಳಿದಿದ್ದಾರೆ. ಈ ಸುದ್ದಿ ಕೇಳಿ ಸಾವಿರಾರು ಐಎಎಸ್ ಆಕಾಂಕ್ಷಿಗಳು ಖುಷಿ ಆಗಿದ್ದಾರೆ. ಅಂದಹಾಗೆ, ಈ ಸೌಲಭ್ಯ ಪಡೆಯಲು ಜೂ.30ರವರೆಗೆ ಮಾತ್ರ ಅವಕಾಶ ಇದೆ. ತಮ್ಮ ಹೆಸರನ್ನು www.soodcharityfoundation.org ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸೋನು ಸೂದ್ ಮಾಹಿತಿ ನೀಡಿದ್ದಾರೆ.
ಈ ಅವಕಾಶ ಕಲ್ಪಿಸಿರುವುದಕ್ಕೆ ಸಾವಿರಾರು ಜನರು ಧನ್ಯವಾದ ತಿಳಿಸಿದ್ದಾರೆ. ‘ಸಂಪಾದಿಸಿದ ಹಣವನ್ನು ಈ ರೀತಿ ಉಪಯೋಗಿಸಿದ ಏಕೈಕ ಬಾಲಿವುಡ್ ನಟ ಇವರು. ಆ ಕಾರಣಕ್ಕಾಗಿ ಇವರೇ ನಂಬರ್ ಒನ್’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಒಟ್ಟಾರೆ ಇಂಥ ನೂರಾರು ಜನಪರ ಕೆಲಸಗಳ ಮೂಲಕ ತಾವೊಬ್ಬ ರಿಯಲ್ ಹೀರೋ ಎಂಬುದನ್ನು ಸೋನು ಸೂದ್ ಮತ್ತೆ ಮತ್ತೆ ಸಾಬೀತು ಪಡಿಸುತ್ತಿದ್ದಾರೆ.
Karni hai IAS ki tayyari ✍️
Hum lenge aapki zimmedari ??Thrilled to announce the launch of ‘SAMBHAVAM’.
A @SoodFoundation & @diyanewdelhi initiative.Details on https://t.co/YO6UJqRIR5 pic.twitter.com/NvFgpL1Llj
— sonu sood (@SonuSood) June 11, 2021
ಕಳೆದ ವರ್ಷ ಲಾಕ್ಡೌನ್ ಜಾರಿ ಆದಾಗ ಲಕ್ಷಾಂತರ ಜನರಿಗೆ ಅವರವರ ಊರಿಗೆ ತೆರಳಲು ಸೋನು ಸೂದ್ ಸಾರಿಗೆ ವ್ಯವಸ್ಥೆ ಮಾಡಿದ್ದರು. ವಲಸೆ ಕಾರ್ಮಿಕರನ್ನು ವಿಮಾನದಲ್ಲಿ ತಲುಪಿಸಿದ ಅವರ ಹೃದಯ ಶ್ರೀಮಂತಿಕೆಯನ್ನು ಮರೆಯಲು ಸಾಧ್ಯವಿಲ್ಲ. ಎಷ್ಟೋ ಬಡವರ ಮನೆಯಲ್ಲಿ ಸೋನು ಫೋಟೋ ಇಟ್ಟು ಪೂಜೆ ಮಾಡುತ್ತಿದ್ದಾರೆ. ಹುಟ್ಟಿದ ಮಕ್ಕಳಿಗೆ ಅವರ ಹೆಸರು ಇಡುವ ಮೂಲಕ ಅನೇಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:
ಸೋನು ಸೂದ್ ದುಡ್ಡಿಗಾಗಿ ಹಪಾಹಪಿಸುವ ವ್ಯಕ್ತಿ ಆಗಿದ್ದರು; ಇನ್ನೊಂದು ಮುಖ ತೆರೆದಿಟ್ಟ ನಿರ್ಮಾಪಕ
ಸೋನು ಸೂದ್ ಪ್ರಧಾನಮಂತ್ರಿ ಅಭ್ಯರ್ಥಿ? ಮುಂದಿನ ಚುನಾವಣೆ ಬಗ್ಗೆ ಮಾತನಾಡಿದ ಸ್ಟಾರ್ ನಟಿ