ಮಾಜಿ ಕ್ರಿಕೆಟಿಗ, ಬಿಸಿಸಿಐ ಅಧ್ಯಕ್ಷರೂ ಆಗಿದ್ದ ಸೌರವ್ ಗಂಗೂಲಿ ಈಗ ಆಗಾಗ್ಗೆ ಕ್ರಿಕೆಟ್ ವೀಕ್ಷಣ ವಿವರಣೆ ನೀಡುತ್ತಿರುತ್ತಾರೆ. ಇದರ ಜೊತೆಗೆ ಬೆಂಗಾಲಿ ಟಿವಿ ಚಾನೆಲ್ನಲ್ಲಿ ಒಂದು ರಿಯಾಲಿಟಿ ಶೋ ಸಹ ನಡೆಸಿಕೊಡುತ್ತಾರೆ. 2009 ರಿಂದಲೂ ಸೌರವ್ ಗಂಗೂಲಿ ಈ ರಿಯಾಲಿಟಿ ಶೋ ನಡೆಸಿಕೊಂಡು ಬರುತ್ತಿದ್ದು, ಇದೀಗ ರಿಯಾಲಿಟಿ ಶೋನ ಹತ್ತನೇ ಸೀಸನ್ ನಡೆಸಿಕೊಡುತ್ತಿದ್ದಾರೆ. ಬಂಗಾಳದಲ್ಲಿ ಸಿನಿಮಾ ನಟರಿಗಿಂತಲೂ ಜನಪ್ರಿಯವಾಗಿರುವ ಗಂಗೂಲಿ ಅವರ ರಿಯಾಲಿಟಿ ಶೋಗೆ ಸಹಜವಾಗಿಯೇ ಟಿಆರ್ಪಿ ಹೆಚ್ಚಿಗಿದ್ದು, ಅದಕ್ಕೆ ತಕ್ಕಂತೆ ಭಾರಿ ಸಂಭಾವನೆಯನ್ನೇ ಗಂಗೂಲಿ ಅವರು ಶೋ ನಡೆಸಿಕೊಡಲು ಪಡೆಯುತ್ತಾರೆ. ಈ ಶೋ ಹೆಸರು ‘ದಾದಾಗಿರಿ’.
2009 ರಿಂದಲೂ ‘ದಾದಾಗಿರಿ’ ರಿಯಾಲಿಟಿ ಶೋ ಅನ್ನು ಸೌರವ್ ಗಂಗೂಲಿ ನಿರೂಪಣೆ ಮಾಡುತ್ತಿದ್ದಾರೆ. ಇದೊಂದು ಕ್ವಿಜ್ ಶೋ ಆಗಿದ್ದು, ಪಶ್ಚಿಮ ಬಂಗಾಳದ ವಿವಿಧ ಜಿಲ್ಲೆಗಳಿಂದ ಸ್ಪರ್ಧೆಗಳನ್ನು ಆಯ್ಕೆ ಮಾಡಲಾಗಿರುತ್ತದೆ. ಈ ಕ್ವಿಜ್ ಶೋಗೆ ತಮಾಷೆಯ ಆಂಗಲ್ ಅನ್ನು ಸಹ ನೀಡಲಾಗಿದ್ದು, ‘ಕೌನ್ ಬನೇಗಾ ಕರೋಡ್ಪತಿ’ ರೀತಿ ಗಂಭೀರವಾಗಿ ಅಲ್ಲದೆ ಗಂಭೀರ ಮತ್ತು ಹಾಸ್ಯ ಎರಡರ ಮಿಶ್ರಣದ ಮಾದರಿಯಲ್ಲಿ ಶೋ ಅನ್ನು ನಡೆಸಿಕೊಡಲಾಗುತ್ತದೆ. ಹಲವು ಸುತ್ತುಗಳಿರುವ ಈ ಶೋನಲ್ಲಿ ಬಹುಮಾನದ ಮೊತ್ತವೂ ದೊಡ್ಡದಾಗಿಯೇ ಇದೆ. ಆದರೆ ಶೋನಲ್ಲಿ ಭಾಗವಹಿಸುವ ಎಲ್ಲರಿಗಿಂತಲೂ ಹೆಚ್ಚು ಗಳಿಸುವುದು ಸೌರವ್ ಗಂಗೂಲಿ.
ಹತ್ತನೇ ಸೀಸನ್ಗೆ ಸೌರವ್ ಗಂಗೂಲಿ ಭಾರಿ ದೊಡ್ಡ ಮೊತ್ತವನ್ನೇ ಈ ಶೋನಿಂದ ಗಳಿಸುತ್ತಿದ್ದಾರೆ. ಗಂಗೂಲಿ ಪ್ರತಿ ಎಪಿಸೋಡ್ ನಡೆಸಿಕೊಡಲು 50 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅಲ್ಲಿಗೆ ಒಂದು ತಿಂಗಳಿಗೆ ಸುಮಾರು ನಾಲ್ಕು ಕೋಟಿ ರೂಪಾಯಿ ಸಂಭಾವನೆಯನ್ನು ಸೌರವ್ ಗಂಗೂಲಿ ಈ ಶೋನಿಂದಾಗಿ ಜೇಬಿಗೆ ಇಳಿಸುತ್ತಾರೆ. ಬಂಗಾಳದ ಅತಿ ಜನಪ್ರಿಯ ಶೋ ಇದಾಗಿದ್ದು, ವಾರದಲ್ಲಿ ಎರಡು ದಿನ ಮಾತ್ರವೇ ಪ್ರಸಾರವಾಗುತ್ತದೆಯಂತೆ.
ಇದನ್ನೂ ಓದಿ:Happy Birthday Sourav Ganguly: 52ನೇ ವಸಂತಕ್ಕೆ ಕಾಲಿರಿಸಿದ ಸೌರವ್ ಗಂಗೂಲಿ ಎಷ್ಟು ಕೋಟಿಯ ಒಡೆಯ ಗೊತ್ತಾ?
2009 ರಿಂದಲೂ ಸೌರವ್ ಗಂಗೂಲಿ ಈ ಶೋ ನಿರೂಪಣೆ ಮಾಡುತ್ತಿದ್ದಾರಾದರೂ ಮೂರನೇ ಸೀಸನ್ನಲ್ಲಿ ಗಂಗೂಲಿಯ ಬದಲಾಗಿ ಬೆಂಗಾಲದವರೇ ಆದ ಬಾಲಿವುಡ್ ಸ್ಟಾರ್ ನಟ ಮಿಥುನ್ ಚಕ್ರವರ್ತಿ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಆದರೆ ಒಂದೇ ಸೀಸನ್ಗೆ ಅವರನ್ನು ತೆಗೆದು ಮತ್ತೆ ಗಂಗೂಲಿನಲ್ಲಿ ಹಾಕಿಕೊಳ್ಳಲಾಯ್ತು. ಗಂಗೂಲಿ, ತುಸು ಗಂಭೀರ ಸ್ವರೂಪದವರಾದರೂ ಸಹ ಸ್ಪರ್ಧಿಗಳೊಂದಿಗೆ ಲಘು ಹಾಸ್ಯ ಮಾಡುತ್ತಾ, ಅವರು ಕೇಳು ಪ್ರಶ್ನೆಗಳಿಗೆ ಉತ್ತರಿಸುತ್ತಾ, ತಾವೂ ಸಹ ಪ್ರಶ್ನೆ ಕೇಳುತ್ತಾ ಅದ್ಭುತವಾಗಿ ಶೋ ನಡೆಸಿಕೊಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ