ಕನ್ನಡದ ನಟಿ ಶ್ರೀಲೀಲಾ (Sreeleela) ತೆಲುಗು ಚಿತ್ರರಂಗದಲ್ಲಿ (Tollywood) ಭರ್ಜರಿಯಾಗಿ ಮಿಂಚುತ್ತಿದ್ದಾರೆ. ನಟನೆ ಹಾಗೂ ಡ್ಯಾನ್ಸ್ ನಿಂದ ದೊಡ್ಡ ಅಭಿಮಾನಿ ವರ್ಗವನ್ನು ಟಾಲಿವುಡ್ನಲ್ಲಿ ಶ್ರೀಲೀಲಾ ಪಡೆದುಕೊಂಡಿದ್ದಾರೆ. ಒಬ್ಬರ ಮೇಲೊಬ್ಬ ಸ್ಟಾರ್ ನಟರ ಸಿನಿಮಾಗಳಿಗೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗುತ್ತಿದ್ದಾರೆ. ಆಯ್ಕೆಯಾದ ಪ್ರತಿ ಸಿನಿಮಾದಲ್ಲಿಯೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುತ್ತಲೇ ಸಾಗುತ್ತಿದ್ದಾರೆ. ‘ಸ್ಕಂದ’ ಹೆಸರಿನ ತೆಲುಗು ಪ್ಯಾನ್ ಇಂಡಿಯಾ (Pan India) ಸಿನಿಮಾದಲ್ಲಿ ಶ್ರೀಲೀಲಾ ನಟಿಸಿದ್ದು, ಸಿನಿಮಾದ ಹಾಡೊಂದು ಇಂದು (ಆಗಸ್ಟ್ 3) ಬಿಡುಗಡೆ ಆಗಿದೆ. ಹಾಡಿನಲ್ಲಿ ಶ್ರೀಲೀಲಾರ ಡ್ಯಾನ್ಸ್ ಗಮನ ಸೆಳೆಯುತ್ತಿದೆ.
ರಾಮ್ ಪೋತಿನೇನಿ ಹಾಗೂ ಶ್ರೀಲೀಲಾ ‘ಸ್ಕಂದ’ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾವನ್ನು ಬೋಯಾಪಾಟಿ ಶ್ರೀನು ನಿರ್ದೇಶನ ಮಾಡಿದ್ದಾರೆ. ಮಾಸ್ ಆಕ್ಷನ್ ಕತೆಯುಳ್ಳ ‘ಸ್ಕಂದ’ ಸಿನಿಮಾದ ಮೊದಲ ಹಾಡು ಇದೀಗ ಬಿಡುಗಡೆ ಆಗಿದೆ. ‘ನೀ ಚುಟ್ಟು ಚುಟ್ಟು ತಿರಿಗೆ’ ಎಂಬ ತೆಲುಗಿನ ಹಾಡನ್ನು ಕನ್ನಡಕ್ಕೆ ವರದರಾಜ ಚಿಕ್ಕಬಳ್ಳಾಪುರ ‘ನಿನ್ನ ಸುತ್ತ ಸುತ್ತ ತಿರುಗಿದೆ’ ಎಂದು ತರ್ಜುಮೆ ಮಾಡಿದ್ದು. ಸಂತೋಷ್ ವೆಂಕಿ ಹಾಗೂ ಶ್ರೀನಿಧಿ ತಿರುಮಲ ಹಾಡು ಹಾಡಿದ್ದಾರೆ. ಹಾಡಿಗೆ ಸಂಗೀತ ಹೊಸೆದಿರುವುದು ಎಸ್ ಎಸ್ ತಮನ್. ಪಾರ್ಟಿ ಹಾಡಾಗಿರುವ ‘ನಿನ್ನ ಸುತ್ತ ಸುತ್ತ’ ಸಖತ್ ಆಗಿ ಮೂಡಿ ಬಂದಿದ್ದು, ಶ್ರೀಲೀಲಾರ ಲುಕ್ ಮತ್ತು ಡ್ಯಾನ್ಸ್ ಗಮನ ಸೆಳೆಯುವಂತಿದೆ. ಜೊತೆಗೆ ರಾಮ್ ಪೋತಿನೇನಿ ಎನರ್ಜಿ ಸಹ.
ಹಲವು ಸಿನಿಮಾಗಳಲ್ಲಿ ಲವರ್ ಬಾಯ್ ಆಗಿ ಗುರುತಿಸಿಕೊಂಡಿರುವ ನಟ ರಾಮ್ ಪೋತಿನೇನಿ ‘ಸ್ಕಂದ’ ಸಿನಿಮಾದಲ್ಲಿ ಮಾಸ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಕನ್ನಡತಿ ಶ್ರೀಲೀಲಾ ಮೊದಲ ಬಾರಿ ರಾಮ್ಗೆ ಜೋಡಿ ಆಗಿ ನಟನೆ ಮಾಡಿದ್ದಾರೆ. ‘ಸ್ಕಂದ’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಸಿನಿಮಾವನ್ನು ದಸರಾ ಹಬ್ಬಕ್ಕೆ ಬಿಡುಗಡೆ ಮಾಡುವ ಆಲೋಚನೆಯನ್ನು ಚಿತ್ರತಂಡ ಮಾಡಿಕೊಂಡಿತ್ತು. ಆದರೆ ಕಾರಣಾಂತರಗಳಿಂದ ಇನ್ನೂ ಮುಂಚಿತವಾಗಿ ಅಂದರೆ ಸೆಪ್ಟಂಬರ್ 15ರಂದು ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿಯೂ ಬಿಡುಗಡೆ ಆಗಲಿದೆ.
ಇದನ್ನೂ ಓದಿ:ಶ್ರೀಲೀಲಾ ಭವಿಷ್ಯ ಹೇಳಿದ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ: ಆ ನಟಿಯೊಟ್ಟಿಗೆ ಹೋಲಿಕೆ
‘ಸ್ಕಂದ’ ಸಿನಿಮಾ ಮಾತ್ರವೇ ಅಲ್ಲದೆ ರವಿತೇಜ ಜೊತೆ ಎರಡನೇ ಸಿನಿಮಾವನ್ನು ಶ್ರೀಲೀಲಾ ಮಾಡುತ್ತಿದ್ದಾರೆ. ಮಹೇಶ್ ಬಾಬು ನಾಯಕರಾಗಿರುವ ‘ಗುಂಟೂರು ಖಾರಂ’ ಸಿನಿಮಾದಲ್ಲಿಯೂ ಶ್ರೀಲೀಲಾ ನಟಿಸುತ್ತಿದ್ದಾರೆ. ನಂದಮೂರಿ ಬಾಲಕೃಷ್ಣ ಜೊತೆಗೆ ಸಿನಿಮಾ ಒಂದರಲ್ಲಿ ನಟಿಸಿದ್ದು ಆ ಸಿನಿಮಾ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ. ಅದಾದ ಬಳಿಕ ಅಲ್ಲು ಅರ್ಜುನ್ರ ಹೊಸ ಸಿನಿಮಾಕ್ಕೆ ಶ್ರೀಲೀಲಾ ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ. ನಾಗ ಚೈತನ್ಯ ಜೊತೆಗೆ ಒಂದು ಸಿನಿಮಾಕ್ಕೆ ಎಸ್ ಅಂದಿದ್ದಾರೆ. ಒಟ್ಟಾರೆ ಟಾಲಿವುಡ್ನಲ್ಲಿ ಶ್ರೀಲೀಲಾ ಬಹಳ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆಯ ಅವಕಾಶಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುತ್ತಿದ್ದಾರೆ ಶ್ರೀಲೀಲಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ