
ಸೃಜನ್ ಲೋಕೇಶ್ (Srujan Lokesh) ಅವರು ಹೀರೋ ಆಗಿ, ನಿರೂಪಕರಾಗಿ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಸೃಜನ್ ಅವರು ಚಿತ್ರರಂಗಕ್ಕಿಂತ ಕಿರುತೆರೆಯಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಸಿನಿಮಾಗಳನ್ನು ಅವರು ಅಳೆದು ತೂಗಿ ಒಪ್ಪಿಕೊಳ್ಳುತ್ತಿದ್ದಾರೆ. ಈಗ ಅವರು ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ಜತೆ ಸೇರಿ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಅವರು ನಿರ್ದೇಶಕರಾಗಿಯೂ ಬಡ್ತಿ ಪಡೆಯುತ್ತಿದ್ದಾರೆ. ಈ ಕಾರಣದಿಂದಲೂ ಸೃಜನ್ ಅವರ ಹೊಸ ಸಿನಿಮಾ ಗಮನ ಸೆಳೆದಿದೆ.
ಸಂದೇಶ್ ನಾಗರಾಜ್ ಅವರು ಈಗಾಗಲೇ ಹಲವು ಚಿತ್ರಗಳನ್ನು ನಿರ್ಮಿಸಿ ಭೇಷ್ ಎನಿಸಿಕೊಂಡಿದ್ದಾರೆ. ಹಲವು ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಇತ್ತೀಚೆಗೆ ತೆರೆಗೆ ಬಂದ ‘ಹರಿಕಥೆ ಅಲ್ಲ ಗಿರಿ ಕಥೆ’ ಚಿತ್ರ ಮೂಡಿ ಬಂದಿದ್ದು ಸಂದೇಶ್ ಪ್ರೊಡಕ್ಷನ್ಸ್ ಮೂಲಕವೇ. ಈಗ ಈ ಅನುಭವಿ ನಿರ್ಮಾಪಕನ ಜತೆ ಸೃಜನ್ ಕೈ ಜೋಡಿಸಿದ್ದಾರೆ.
ಈ ಬಗ್ಗೆ ಬರೆದುಕೊಂಡಿರುವ ಸೃಜನ್, ‘ಹಿರಿಯ ನಿರ್ಮಾಪಕ ಸಂದೇಶ ನಾಗರಾಜ್ ಅವರ ಆಶೀರ್ವಾದದೊಂದಿಗೆ ಹೊಸ ಪ್ರಯತ್ನಕ್ಕೆ ಶುಭಾರಂಭ. ‘ಲೋಕೇಶ್ ಪ್ರೊಡಕ್ಷನ್ಸ್’ ಹಾಗೂ ‘ಸಂದೇಶ ಪ್ರೊಡಕ್ಷನ್ಸ್’ ಸಂಸ್ಥೆ ಅಡಿಯಲ್ಲಿ ಹೊಸ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಮತ್ತಷ್ಟು ವಿವರಗಳು ಅತಿ ಶೀಘ್ರದಲ್ಲಿ. ನಿರ್ದೇಶಕನಾಗಿ ನನ್ನ ಮೊದಲ ಪ್ರಯತ್ನ ನಿಮ್ಮ ಹಾರೈಕೆ ಸದಾ ನಮ್ಮ ಮೇಲೆ ಇರಲಿ’ ಎಂದು ಸೃಜನ್ ಬರೆದುಕೊಂಡಿದ್ದಾರೆ.
ಮೂಲಗಳ ಪ್ರಕಾರ ಈ ಚಿತ್ರಕ್ಕೆ ಸೃಜನ್ ಅವರೇ ಹೀರೋ ಎನ್ನಲಾಗುತ್ತಿದೆ. ನಿರ್ದೇಶನ, ನಿರ್ಮಾಣದ ಜತೆಗೆ ಈ ಸಿನಿಮಾಗೆ ಅವರು ಹೀರೋ ಕೂಡ ಹೌದು ಎಂಬ ವಿಚಾರ ಕೇಳಿ ಸೃಜನ್ ಲೋಕೇಶ್ ಫ್ಯಾನ್ಸ್ ಖುಷಿಯಾಗಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಇದನ್ನೂ ಓದಿ: ನಿಮ್ಮನ್ನು ನಕ್ಕು ನಲಿಸುತ್ತಿರುವ ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ ತೀರ್ಪುಗಾರಾಗಿರುವ ಸೃಜನ್ ಮತ್ತು ಶೃತಿಯ ಮನದಾಳದ ಮಾತು!
‘ಗಿಚ್ಚಿ ಗಿಲಿ ಗಿಲಿ’ ಶೋನಲ್ಲಿ ಸೃಜನ್ ಲೋಕೇಶ್ ಜಡ್ಜ್ ಆಗಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಈ ಶೋನ ಫಿನಾಲೆ ಕಳೆದ ವಾರ ಪೂರ್ಣಗೊಂಡಿದೆ. ಈಗ ಸೃಜನ್ ಲೋಕೇಶ್ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಲಿದ್ದಾರೆ ಎನ್ನಲಾಗುತ್ತಿದೆ. ನಿರ್ಮಾಪಕನಾಗಿ ಹಲವು ಶೋಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿರುವುದು ವಿಶೇಷ.
Published On - 10:07 pm, Wed, 7 September 22