ರಾಜಮೌಳಿಯ ಮೊದಲ ಸಿನಿಮಾ ಬಿಡುಗಡೆಯೇ ಆಗಲಿಲ್ಲ ಏಕೆ?
ಎಸ್ಎಸ್ ರಾಜಮೌಳಿ ನಿರ್ದೇಶಕನಾಗಿ ಇಡೀ ವಿಶ್ವಕ್ಕೆ ಚಿರಪರಿಚಿತ. ಅವರ ಮೊದಲ ಸಿನಿಮಾ ‘ಸ್ಟೂಡೆಂಟ್ ನಂಬರ್ 1’ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಇದು ಪೂರ್ತಿ ಸತ್ಯವಲ್ಲ. ಅಸಲಿಗೆ ರಾಜಮೌಳಿಯ ಮೊದಲ ಸಿನಿಮಾ ಬಿಡುಗಡೆ ಸಹ ಆಗಲಿಲ್ಲ. ಯಾವುದದು?
ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಭಾರತದ ಸೂಪರ್ ಸ್ಟಾರ್ ನಿರ್ದೇಶಕ ರಾಜಮೌಳಿ. ಇವರು ನಿರ್ದೇಶನ ಮಾಡಿರುವ ಒಂದೇ ಒಂದು ಸಿನಿಮಾ ಸಹ ಈ ವರೆಗೆ ಫ್ಲಾಪ್ ಆಗಿಲ್ಲ. ಮಾಡಿರುವ ಸಿನಿಮಾಗಳೆಲ್ಲವೂ ಹಿಟ್, ಸೂಪರ್ ಹಿಟ್, ಬ್ಲಾಕ್ ಬಸ್ಟರ್ಗಳೇ. ಆದರೆ ರಾಜಮೌಳಿಯ ಆರಂಭದ ದಿನಗಳು ಸುಲಭವಾಗಿಯೇನೂ ಇರಲಿಲ್ಲ. ರಾಜಮೌಳಿಯ ಮೊದಲ ಸಿನಿಮಾ ‘ಸ್ಟುಡೆಂಟ್ ನಂಬರ್ 1’ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಇದು ಪೂರ್ತಿ ಸತ್ಯವಲ್ಲ. ರಾಜಮೌಳಿಯ ಮೊದಲ ಸಿನಿಮಾ ಬೇರೆಯೇ ಇದೆ. ಆದರೆ ಅದು ಬಿಡುಗಡೆ ಆಗಲೇ ಇಲ್ಲ.
ರಾಜಮೌಳಿ ನಿರ್ದೇಶನ ಮಾಡಿರುವ ಮೊದಲ ಸಿನಿಮಾ ‘ಸ್ಟುಡೆಂಟ್ ನಂಬರ್ 1’ ಆದರೆ ರಾಜಮೌಳಿ ನಿರ್ದೇಶನ ಮಾಡುವುದಕ್ಕೆ ಅಥವಾ ನಿರ್ದೇಶನ ಕ್ಷೇತ್ರಕ್ಕೆ ಇಳಿಯುವ ಎಷ್ಟೋ ವರ್ಷಗಳ ಮುಂಚೆ ಸಿನಿಮಾ ವೃತ್ತಿಗೆ ಎಂಟ್ರಿ ಕೊಟ್ಟಿದ್ದು ನಟನಾಗಿ. ಹೌದು, ರಾಜಮೌಳಿ 12-13 ವರ್ಷದ ಬಾಲಕನಾಗಿದ್ದಾಗ ‘ಪಿಲ್ಲನ ಗ್ರೋವಿ’ ಹೆಸರಿನ ಸಿನಿಮಾದಲ್ಲಿ ರಾಜಮೌಳಿ, ಬಾಲಕೃಷ್ಣನ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾವನ್ನು ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದು ಅವರ ತಂದೆ ಹಾಗೂ ಅವರ ಸಹೋದರರೇ.
ಆದರೆ ಆ ಸಿನಿಮಾ ಪೂರ್ತಿಯಾಗಲಿಲ್ಲವಂತೆ. ಹಣದ ಕೊರತೆಯಿಂದ ಸಿನಿಮಾದ ಶೂಟಿಂಗ್ ಏನೋ ಮುಗಿಯಿತು ಆದರೆ ಸಿನಿಮಾದ ಡಬ್ಬಿಂಗ್ ಮಾಡಿ, ಬಿಡುಗಡೆ ಮಾಡುವಷ್ಟು ಹಣ ಇವರ ಬಳಿ ಇರಲಿಲ್ಲ. ಹಾಗಾಗಿ ಆ ಸಿನಿಮಾ ಬಿಡುಗಡೆಯೇ ಆಗಲಿಲ್ಲ. ಆ ಸಿನಿಮಾ ಡಬ್ಬಿಂಗ್ ಸಹ ಮಾಡಲಾಗದೆ ಚೆನ್ನೈನ ಪ್ರೀವ್ಯೂ ಚಿತ್ರಮಂದಿರ ಒಂದನ್ನು ಬುಕ್ ಮಾಡಿ ವಿತರಕರನ್ನು ಕರೆದು ಆ ಸಿನಿಮಾವನ್ನು ರಾಜಮೌಳಿಯ ತಂದೆ ಮತ್ತು ಸಹೋದರರು ತೋರಿಸಿದ್ದರಂತೆ. ಹಾಗೆ ತೋರಿಸುವಾಗ ಸಂಭಾಷಣೆ ಇದ್ದ ಕಡೆಗಳಲ್ಲೆಲ್ಲ ರಾಜಮೌಳಿಯ ತಂದೆ ಮತ್ತು ಸಹೋದರರು ಮತ್ತು ರಾಜಮೌಳಿ ಪರದೆ ಮುಂದೆ ನಿಂತುಕೊಂಡು ತಾವೇ ಜೋರಾಗಿ ಸಂಭಾಷಣೆ ಓದುತ್ತಿದ್ದರಂತೆ. ಇನ್ನು ಹಾಡುಗಳ ಸಂದರ್ಭದಲ್ಲಿ ಸಿನಿಮಾದ ಇಡೀ ಹಾಡನ್ನು ಸಿನಿಮಾ ಪ್ರದರ್ಶನವಾಗುತ್ತಿದ್ದ ಪರದೆ ಮುಂದೆ ನಿಂತು ಹಾಡುತ್ತಿದ್ದರಂತೆ ಎಂಎಂ ಕೀರವಾಣಿ. ಏನೇ ಸಾಹಸ ಮಾಡಿದರೂ ಆ ಸಿನಿಮಾವನ್ನು ಬಿಡುಗಡೆ ಮಾಡಲಾಗಲಿಲ್ಲ. ಮಾತ್ರವಲ್ಲ ಆ ಸಿನಿಮಾಕ್ಕೆ ಡಬ್ಬಿಂಗ್ ಸಹ ಮಾಡಲಾಗಲಿಲ್ಲವಂತೆ. ಆ ಸಿನಿಮಾ ಮೂಕಿ ಸಿನಿಮಾ ಆಗಿ ಡಬ್ಬದಲ್ಲೇ ಉಳಿದಿದೆ ಈಗಲೂ.
ಇದನ್ನೂ ಓದಿ:ರಾಜಮೌಳಿ ಸಿನಿಮಾ ಮಾಡಲ್ಲ ಎಂದು ಹೊರನಡೆದಿದ್ದ ಈ ಸ್ಟಾರ್ ನಟ
ಆ ಬಳಿಕ ರಾಜಮೌಳಿಯ ತಂದೆ ಸ್ವತಂತ್ರ್ಯವಾಗಿ ನಿರ್ದೇಶಿಸಿದ ಮೊದಲ ಸಿನಿಮಾಕ್ಕೆ ರಾಜಮೌಳಿ ಅಸಿಸ್ಟೆಂಟ್ ಆಗಿ ದುಡಿದರು. ಆದರೆ ಆ ಸಿನಿಮಾ ಸಹ ಫ್ಲಾಪ್ ಆಯ್ತು. ಆ ಸಿನಿಮಾದ ಬಳಿಕವಂತೂ ರಾಜಮೌಳಿಯವರ ಕುಟುಂಬ ತೀರ ಸಂಕಷ್ಟಕ್ಕೆ ಸಿಲುಕಿತಂತೆ. ಆಗಲೇ ರಾಜಮೌಳಿ ಚೆನ್ನೈ ಬಿಟ್ಟು ಕೆಲಸ ಹುಡುಕಿಕೊಂಡು ಹೈದರಾಬಾದ್ಗೆ ಬಂದರು. ಇಲ್ಲಿ ಖ್ಯಾತ ನಿರ್ದೇಶಕ ರಾಘವೇಂದ್ರ ಬಳಿ ಅಸಿಸ್ಟೆಂಟ್ ಆಗಿ ಸೇರಿಕೊಂಡರು, ಅಮೃತಂ ಧಾರಾವಾಹಿಯ ಎಪಿಸೋಡ್ ನಿರ್ದೇಶಕರಾದರು. ಕೊನೆಗೊಂದು ದಿನ ‘ಸ್ಟೂಡೆಂಟ್ ನಂಬರ್ 1’ ಸಿನಿಮಾ ಮೂಲಕ ನಿರ್ದೇಶಕರಾದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ