ರಾಜಮೌಳಿ ಈಗ ವಿಶ್ವದ ಅತ್ಯುತ್ತಮ ಸಿನಿಮಾ ನಿರ್ದೇಶಕರ ಸಾಲಿಗೆ ಸೇರಿದ್ದಾರೆ. ರಾಜಮೌಳಿ ಕುರಿತು ಕೆಲವೇ ದಿನಗಳಲ್ಲಿ ಡಾಕ್ಯುಮೆಂಟರಿ ಒಂದು ಬಿಡುಗಡೆ ಆಗಲಿದ್ದು, ‘ಟೈಟಾನಿಕ್’ ನಿರ್ದೇಶಕ ಜೇಮ್ಸ್ ಕ್ಯಾಮರನ್ ಸಹ ರಾಜಮೌಳಿಯನ್ನು ಹೊಗಳಿ ಮಾತನಾಡಿದ್ದಾರೆ. ಆದರೆ ರಾಜಮೌಳಿ ಮಾತ್ರ ಮೊದಲಿನಿಂದಲೂ ಬಹಳ ಸರಳ ವ್ಯಕ್ತಿತ್ವದವರು. ತಮಗಿಂತಲೂ ಚಿಕ್ಕವರೊಂದಿಗೆ ಗೆಳೆಯನಂತೆ ಬೆರೆಯುವ ಗುಣ ಹೊಂದಿರುವವರು. ಚಿತ್ರರಂಗದಲ್ಲಿ ರಾಜಮೌಳಿಯ ಅತ್ಯಾಪ್ತ ಸ್ನೇಹಿತ ಎಂದರೆ ಅದು ಜೂ ಎನ್ಟಿಆರ್. ‘ಬಾಹುಬಲಿ’ ಸಿನಿಮಾದ ಪ್ರಚಾರ ಸಂದರ್ಭದಲ್ಲಿ ಇದನ್ನು ಅವರು ಹೇಳಿದ್ದರು. ಜೂ ಎನ್ಟಿಆರ್ ಜೊತೆಗೆ ಮಾತ್ರವೇ ರಾಜಮೌಳಿ ಅತಿ ಹೆಚ್ಚು ಸಿನಿಮಾ ಮಾಡಿರುವುದು. ಆದರೆ ಜೂ ಎನ್ಟಿಆರ್ ಅನ್ನು ಮೊದಲ ಬಾರಿ ಭೇಟಿ ಆದಾಗ ಹಣೆ ಹಣೆ ಚಚ್ಚಿಕೊಂಡಿದ್ದರಂತೆ ರಾಜಮೌಳಿ. ಅದಕ್ಕೆ ಕಾರಣವೂ ಇದೆ.
ಧಾರಾವಾಹಿಗಳಿಗೆ, ಕೆಲವು ಸಿನಿಮಾಗಳಿಗೆ ಅಸಿಸ್ಟೆಂಟ್ ಆಗಿದ್ದ ರಾಜಮೌಳಿ ಮೊದಲ ಬಾರಿ ನಿರ್ದೇಶಕನಾಗಿದ್ದು ‘ಸ್ಟೂಡೆಂಟ್ ನಂಬರ್ 1’ ಸಿನಿಮಾ ಮೂಲಕ. ಆ ಸಿನಿಮಾದ ನಾಯಕ ನಟ ಜೂ ಎನ್ಟಿಆರ್. ರಾಜಮೌಳಿಗೆ ಅದು ಮೊದಲ ಸಿನಿಮಾ ಆದರೆ ಜೂ ಎನ್ಟಿಆರ್ಗೆ ಅದು ನಾಯಕನಾಗಿ ಎರಡನೇ ಸಿನಿಮಾ. ಮೊದಲ ಬಾರಿ ನಿರ್ದೇಶನಕ್ಕೆ ಇಳಿದಿದ್ದ ರಾಜಮೌಳಿ ತಮ್ಮ ಸಿನಿಮಾದ ನಾಯಕ ಹೀಗಿರಬೇಕು, ಹಾಗಿರಬೇಕು ಎಂಬ ಕನಸು ಇಟ್ಟುಕೊಂಡಿದ್ದರಂತೆ. ಆದರೆ ಜೂ ಎನ್ಟಿಆರ್ ಅನ್ನು ನೋಡಿ, ‘ಇಂಥ ನಾಯಕ ಸಿಕ್ಕನಲ್ಲಪ್ಪ’ ಎಂದು ಎಂದು ಹಣೆ ಚಚ್ಚಿಕೊಂಡಿದ್ದರಂತೆ.
ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ಜೂ ಎನ್ಟಿಆರ್ ಈಗಿನಂತಿರಲಿಲ್ಲ. ಬಹಳ ದಪ್ಪಗೆ ಇದ್ದರು, ಅವರ ದೇಹತೂಕ ಆಗಲೆ ಅಳತೆ ಮೀರಿತ್ತು, ಕೆಲವು ವರ್ಷಗಳಾದ ಬಳಿಕ ಜೂ ಎನ್ಟಿಆರ್ ದೇಹತೂಕ ಇನ್ನೂ ಹೆಚ್ಚಾಯ್ತು. ಹಾಗಾಗಿ ದಪ್ಪಗೆ, ಕುಳ್ಳಗೆ ಇದ್ದ ಜೂ ಎನ್ಟಿಆರ್ ಅನ್ನು ನೋಡಿ ರಾಜಮೌಳಿ, ಇದೇನಪ್ಪ ಇಂಥಾ ಹೀರೋ ಸಿಕ್ಕಿದ ಎಂದು ಹಣೆ ಚಚ್ಚಿಕೊಂಡಿದ್ದರಂತೆ. ಆದರೆ ಅವರೊಟ್ಟಿಗೆ ಕೆಲಸ ಮಾಡಲು ಆರಂಭಿಸಿದ ಬಳಿಕ ಜೂ ಎನ್ಟಿಆರ್ಗೆ ಇರುವ ಪ್ರತಿಭೆ ಅವರಿಗೆ ಅರ್ಥವಾಗಿದೆ. ಅವರ ನಟನೆ, ಡ್ಯಾನ್ಸ್ ರಾಜಮೌಳಿಗೆ ಬಹಳ ಹಿಡಿಸಿಬಿಟ್ಟಿತಂತೆ.
ಇದನ್ನೂ ಓದಿ:ಮುಹೂರ್ತ ಕೇಳಿ ಹೊಸ ಸಿನಿಮಾ ಆರಂಭಿಸಲಿದ್ದಾರೆ ರಾಜಮೌಳಿ
‘ಸ್ಟೂಡೆಂಟ್ ನಂಬರ್ 1’ ಸಿನಿಮಾ ಹಿಟ್ ಆಯ್ತು. ಅದಾದ ಬಳಿಕ ತಮ್ಮ ಎರಡನೇ ಸಿನಿಮಾವನ್ನು ಸಹ ಜೂ ಎನ್ಟಿಆರ್ ಜೊತೆಗೇ ತೆಗೆದರು ರಾಜಮೌಳಿ, ಅದುವೇ ಬ್ಲಾಕ್ ಬಸ್ಟರ್ ಸಿನಿಮಾ ‘ಸಿಂಹಾದ್ರಿ’. ಆ ಸಿನಿಮಾ ಅಂತೂ ದಾಖಲೆಗಳನ್ನೇ ಬರೆಯಿತು. ಅದಾದ ಬಳಿಕ ಜೂ ಎನ್ಟಿಆರ್ ತೂಕ ಇನ್ನಷ್ಟು ಮತ್ತಷ್ಟು ಹೆಚ್ಚುತ್ತಲೇ ಹೋಯ್ತು. ಆದರೆ ಜೂ ಎನ್ಟಿಆರ್ ಅನ್ನು ದೇಹದ ತೂಕ ಕಳೆದುಕೊಳ್ಳುವಂತೆ ಮಾಡಿದ್ದು ರಾಜಮೌಳಿಯೇ. ಅವರ ‘ಯಮದೊಂಗ’ ಸಿನಿಮಾಕ್ಕಾಗಿ ಜೂ ಎನ್ಟಿಆರ್ ದೇಹತೂಕ ಇಳಿಸಿಕೊಂಡು ಫಿಟ್ ಆದರು. ಅದಾದ ಬಳಿಕ ಅವರ ವೃತ್ತಿ ಜೀವನದ ಮತ್ತೊಂದು ಅಧ್ಯಾಯವೇ ತೆರೆದು ಕೊಂಡಿತು.
ರಾಜಮೌಳಿ ಮತ್ತು ಜೂ ಎನ್ಟಿಆರ್ ಈವರೆಗೆ ನಾಲ್ಕು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ರಾಜಮೌಳಿ ಅತಿ ಹೆಚ್ಚು ಬಾರಿ ಕೆಲಸ ಮಾಡಿದ ನಟ ಜೂ ಎನ್ಟಿಆರ್. ಪ್ರಭಾಸ್ ಜೊತೆಗೆ ರಾಜಮೌಳಿ ಮೂರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದರೆ, ರಾಮ್ ಚರಣ್ಗಾಗಿ ಎರಡು ಸಿನಿಮಾ ನಿರ್ದೇಶನ ಮಾಡಿದ್ದಾರೆ.
ರಾಜಮೌಳಿ ಪ್ರಸ್ತುತ ಮಹೇಶ್ ಬಾಬು ಗಾಗಿ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಮಹೇಶ್ ಬಾಬು ಹಾಗೂ ರಾಜಮೌಳಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಇನ್ನು ಜೂ ಎನ್ಟಿಆರ್, ‘ದೇವರ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಮತ್ತೆ ಈ ಇಬ್ಬರು ನಟರು ಒಟ್ಟಿಗೆ ಕೆಲಸ ಮಾಡುತ್ತಾರಾ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ