Vijayalakshmi Darshan: ವಿಜಯಲಕ್ಷ್ಮಿ ದರ್ಶನ್ ಭೇಟಿ ಬಳಿಕ ಡಿಕೆ ಶಿವಕುಮಾರ್ ಹೇಳಿದ್ದೇನು?
Vijayalakshmi Darshan: ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ರೇಣುಕಾ ಸ್ವಾಮಿ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಿದ್ಧವಾಗುತ್ತಿರುವ ಹೊತ್ತಿನಲ್ಲಿಯೇ ವಿಜಯಲಕ್ಷ್ಮಿ ದರ್ಶನ್ ಅವರು ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಆಗಿದ್ದಾರೆ. ಭೇಟಿಯ ಬಳಿಕ ಡಿಕೆಶಿ, ಮಾಧ್ಯಮಗಳ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ತನಿಖಾಧಿಕಾರಿಗಳು ಚಾರ್ಜ್ ಶೀಟ್ ಸಿದ್ಧಪಡಿಸುತ್ತಿದ್ದು ಆಗಸ್ಟ್ ಎರಡನೇ ವಾರದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಆಗಲಿದೆ. ಈ ನಡುವೆ ಇಂದು (ಜುಲೈ 24) ವಿಜಯಲಕ್ಷ್ಮಿ ದರ್ಶನ್ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿವಾಸಕ್ಕೆ ತೆರಳಿ ಭೇಟಿ ಮಾಡಿದ್ದಾರೆ. ಜೊತೆಗೆ ದರ್ಶನ್ ಸಹೋದರ ದಿನಕರ್ ತೂಗುದೀಪ ಸಹ ಇದ್ದರು. ರೇಣುಕಾ ಸ್ವಾಮಿ ಕೊಲೆ ವಿಚಾರವಾಗಿ ಚರ್ಚಿಸಲೆಂದೇ ವಿಜಯಲಕ್ಷ್ಮಿ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಆಗಿದ್ದಾರೆ ಎನ್ನಲಾಗಿತ್ತು. ಆದರೆ ಭೇಟಿಯ ಬಳಿಕ ಮಾತನಾಡಿರುವ ಶಿವಕುಮಾರ್, ಮಗನ ವಿಷಯವಾಗಿ ಮಾತನಾಡಲು ಬಂದಿದ್ದರು ಎಂದಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ ಭೇಟಿ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ ಡಿಕೆ ಶಿವಕುಮಾರ್, ‘ನಿನ್ನೆ ನಾನು ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಹೋಗಿದ್ದೆ, ಅಲ್ಲಿ ಭೇಟಿ ಮಾಡಲು ಬಂದಿದ್ದರು, ಅಲ್ಲಿ ಭೇಟಿ ಮಾಡೋಕೆ ಆಗಲಿಲ್ಲ, ನಾಳೆ ಮನಗೆ ಬನ್ನಿ ಅಂತ ಹೇಳಿದ್ದೆ. ಹಾಗಾಗಿ ಬಂದಿದ್ದರು. ಅವರ ಮಗ ವಿನೀಷ್ ನಮ್ಮ ಶಾಲೆಯಲ್ಲಿ ಓದುತ್ತಿದ್ದ, ಆ ನಂತರ ಬೇರೆ ಶಾಲೆಗೆ ಸೇರಿಸಿದ್ದರು. ಈಗ ಮತ್ತೆ ನಮ್ಮ ಶಾಲೆಗೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ನಾನು ಫ್ರಿನ್ಸಿಫಲ್ ಗೆ ಹೇಳುತ್ತೇನೆ ಎಂದು ಭರವಸೆ ಕೊಟ್ಟಿದ್ದೀನಿ, ಕೇಸ್ ವಿಚಾರವಾಗಿ ಮಾತನಾಡಲು ಅವರು ಬಂದಿರಲಿಲ್ಲ’ ಎಂದಿದ್ದಾರೆ.
‘ಹೆಣ್ಣು ಮಗಳು ಏನಾದರೂ ಅನ್ಯಾಯ ಆಗಿದ್ರೆ ಅವರಿಗೆ ಸಹಾಯ ಮಾಡಿರುತ್ತಿದ್ದೆ. ಆದರೆ ಈಗ ಕಾನೂನು ಕ್ರಮ ನಡೆಯುತ್ತಿದೆ. ಇಂಥಹಾ ಸಮಯದಲ್ಲಿ ಮಧ್ಯೆ ಪ್ರವೇಶ ಮಾಡಲು ಆಗುವುದಿಲ್ಲ. ಕಾನೂನು ಚೌಕಟ್ಟು ಅಡಿ ಏನಾದರೂ ಮಾಡೋಣ ಅಂತ ನಿನ್ನೆ ಹೇಳಿದ್ದೆ, ಹುಡುಗರು ನಿನ್ನೆ ಒತ್ತಾಯ ಮಾಡಿದ್ದರು. ನಾನು ಈ ವಿಚಾರದಲ್ಲಿ ಮಧ್ಯ ಬರೋದಿಲ್ಲ, ಸ್ಕೂಲ್ ವಿಚಾರದಲ್ಲಿ ಅಷ್ಟೇ ನಾನು ಮಾತನಾಡುತ್ತೇವೆ, ಸಹಾಯ ಮಾಡುತ್ತೇನೆ’ ಎಂದಿದ್ದಾರೆ.
ಇದನ್ನೂ ಓದಿ:ಮೈದುನ ದಿನಕರ್ ಜೊತೆ ಡಿಕೆ ಶಿವಕುಮಾರ್ ಭೇಟಿಗೆ ಆಗಮಿಸಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ
ಇದೇ ಸಮಯಕ್ಕೆ ಡಿಕೆ ಶಿವಕುಮಾರ್ ಮನೆಗೆ ಬಂದಿದ್ದ ನಿರ್ದೇಶಕ ಪ್ರೇಮ್ ಸಹ ಇದನ್ನೇ ಹೇಳಿದರು. ‘ನಾನು ಆಗಾಗ ಡಿಸಿಎಂ ಅವರನ್ನು ಭೇಟಿ ಮಾಡೊಕೆ ಬರ್ತಾ ಇರ್ತೀನಿ. ದರ್ಶನ್ ವಿಚಾರಕ್ಕೂ ನನಗೂ ಸಂಬಂಧ ಇಲ್ಲ. ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ಭೇಟಿ ಮಾಡೋಕೆ ಬಂದಿದ್ದಾರೆ. ದರ್ಶನ್ ಮಗ ವಿನೀಶ್ ಸ್ಕೂಲ್ ವಿಚಾರ ಮಾತಾಡೋಕೆ ಬಂದಿದ್ದರು. ನನ್ನ ಮಗ ಅವರ ಮಗ ಇಬ್ಬರು ಒಂದೇ ಕಡೆ ಓದುತ್ತಾ ಇದ್ದರು. ಆದರೆ ಅವರು ಬೇರೆ ಶಾಲೆಗೆ ಮಗನನ್ನು ಶಿಫ್ಟ್ ಮಾಡಿಸಿದ್ದರು. ಈಗ ಮತ್ತೆ ಶಾಲೆಗೆ ಸೇರಿಸಬೇಕಂತೆ ಅದನ್ನೇ ಕೇಳಲು ಬಂದಿದ್ದಾರೆ’ ಎಂದರು.
ಆದರೆ ಶಾಲೆಗೆ ಸೇರಿಸುವ ವಿಷಯ ಮಾತನಾಡಲು ಮನೆ ವರೆಗೂ ಏಕೆ ಬಂದರು, ಅದೂ ಜೊತೆಯಲ್ಲಿ ದರ್ಶನ್ ಸಹೋದರ ದಿನಕರ್ ಅವರನ್ನೂ ಸಹ ಏಕೆ ಕರೆದುಕೊಂಡು ಬಂದರು ಎಂಬ ಅನುಮಾನಗಳು ವ್ಯಕ್ತವಾಗಿವೆ. ಅಲ್ಲದೆ, ಸ್ವತಃ ಡಿಕೆ ಶಿವಕುಮಾರ್ ಹೇಳಿರುವಂತೆ, ‘ಕಾನೂನು ಅಡಿಯಲ್ಲಿ ಸಹಾಯ ಮಾಡುವುದಾದರೆ ನೋಡೋಣ’ ಎಂಬ ಭರವಸೆ ಕೊಟ್ಟಿದ್ದೆ ಎಂದು ಸಹ ಹೇಳಿದ್ದಾರೆ. ಚಾರ್ಜ್ ಶೀಟ್ ತಯಾರಾಗುತ್ತಿರುವ ಹೊತ್ತಿನಲ್ಲಿ ವಿಜಯಲಕ್ಷ್ಮಿ ದರ್ಶನ್, ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ಪ್ರಕರಣದ ಮೇಲೆ ಪ್ರಭಾವ ಬೀರಲಿದೆಯೇ ಎಂಬ ಅನುಮಾನ ಹುಟ್ಟುಹಾಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ