RRR ತಂಡ 60 ಲಕ್ಷ ರೂ. ಕೊಟ್ಟು ಆಸ್ಕರ್ ಸಮಾರಂಭದ ಟಿಕೆಟ್ ಪಡೆಯಿತಾ? ಬಯಲಾಯ್ತು ಬೇರೆ ಸತ್ಯ
ಎಂಎಂ ಕೀರವಾಣಿ ಮತ್ತು ಚಂದ್ರಬೋಸ್ ಅವರಿಗೆ ಮಾತ್ರ ಉಚಿತ ಪಾಸ್ ನೀಡಲಾಯಿತು. ಇನ್ನುಳಿದವರು ಸ್ವಂತ ಹಣ ಖರ್ಚು ಮಾಡಿ ಪಾಸ್ ಪಡೆದಿದ್ದು ನಿಜ ಎಂದು ಕಾರ್ತಿಕೇಯ ಹೇಳಿದ್ದಾರೆ. ಆದರೆ..
ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ (RRR Movie) ಸಿನಿಮಾದಲ್ಲಿನ ‘ನಾಟು ನಾಟು..’ ಹಾಡು ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಭಾರತಕ್ಕೆ ಆಸ್ಕರ್ ತಂದುಕೊಟ್ಟ ಈ ಸಾಂಗ್ ಎಲ್ಲರಿಗೂ ಅಚ್ಚುಮೆಚ್ಚು. ಆಸ್ಕರ್ ಸಮಾರಂಭ ಮುಗಿದು ಹಲವು ದಿನ ಕಳೆದಿದೆ. ಆದರೆ ಅದರ ಸುತ್ತ ಹಬ್ಬಿರುವ ಗಾಸಿಪ್ಗಳು ಇನ್ನೂ ನಿಂತಿಲ್ಲ. ಆಸ್ಕರ್ (Oscar Awards) ಪಡೆಯಲು ‘ಆರ್ಆರ್ಆರ್’ ತಂಡದವರು 80 ಕೋಟಿ ರೂಪಾಯಿ ಖರ್ಚು ಮಾಡಿದ್ದರು ಎನ್ನಲಾಗಿತ್ತು. ಆದರೆ ಆ ಮಾಹಿತಿಯನ್ನು ಚಿತ್ರತಂಡ ತಳ್ಳಿಹಾಕಿದೆ. ಅಷ್ಟೇ ಅಲ್ಲ, ಆಸ್ಕರ್ ಕಾರ್ಯಕ್ರಮದ ಟಿಕೆಟ್ ಪಡೆಯಲು ರಾಮ್ ಚರಣ್ ಅವರು ಬರೋಬ್ಬರಿ 60 ಲಕ್ಷ ರೂಪಾಯಿ ವ್ಯಯಿಸಿದ್ದರು ಎಂಬ ಗಾಸಿಪ್ ಕೂಡ ಕೇಳಿಬಂದಿತ್ತು. ಆ ಬಗ್ಗೆ ರಾಜಮೌಳಿ ಅವರ ಪುತ್ರ ಎಸ್ಎಸ್ ಕಾರ್ತಿಕೇಯ (SS Karthikeya) ಮೌನ ಮುರಿದಿದ್ದಾರೆ.
ಆಸ್ಕರ್ನ ಹಲವು ವಿಭಾಗಗಳಲ್ಲಿ ನಾಮಿನೇಟ್ ಆಗಬೇಕು ಎಂಬುದು ‘ಆರ್ಆರ್ಆರ್’ ತಂಡದ ಉದ್ದೇಶ ಆಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ‘ನಾಟು ನಾಟು..’ ಹಾಡು ಮಾತ್ರ ನಾಮಿನೇಟ್ ಆಯಿತು. ಹಾಗಾಗಿ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಮತ್ತು ಗೀತರಚನಕಾರ ಚಂದ್ರಬೋಸ್ ಹಾಗೂ ಅವರ ಪತ್ನಿಯರಿಗೆ ಮಾತ್ರ ಉಚಿತ ಪಾಸ್ ನೀಡಲಾಯಿತು. ಇನ್ನುಳಿದವರು ಸ್ವಂತ ಹಣ ಖರ್ಚು ಮಾಡಿ ಪಾಸ್ ಪಡೆದಿದ್ದು ನಿಜ ಎಂದು ಕಾರ್ತಿಕೇಯ ಹೇಳಿದ್ದಾರೆ. ಆದರೆ 60 ಲಕ್ಷ ಖರ್ಚು ಮಾಡಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: MM Keeravani: ‘ನನಗೆ ಆಸ್ಕರ್ ಸಿಕ್ಕಿದ್ದು ಇದೇ ಮೊದಲೇನಲ್ಲ’: 30 ವರ್ಷದ ಹಿಂದಿನ ವಿಷಯ ತೆರೆದಿಟ್ಟ ಎಂಎಂ ಕೀರವಾಣಿ
ರಾಜಮೌಳಿ, ಜೂನಿಯರ್ ಎನ್ಟಿಆರ್, ರಾಮ್ ಚರಣ್ ಹಾಗೂ ಅವರ ಕುಟುಂಬದವರಿಗೆ ಉಚಿತ ಪಾಸ್ ಸಿಗಲಿಲ್ಲ. ಹಾಗಾಗಿ ತಲಾ 1.2 ಲಕ್ಷ ರೂಪಾಯಿ ಹಣ ನೀಡಿ ಪಾಸ್ ಪಡೆಯಲಾಯಿತು. ಅದಕ್ಕಾಗಿ 60 ಲಕ್ಷ ರೂಪಾಯಿ ಖರ್ಚು ಮಾಡಿದ್ದು ನಿಜವಲ್ಲ ಎಂದು ಕಾರ್ತಿಕೇಯ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಇದನ್ನೂ ಓದಿ: DVV Danayya: ‘ಆಸ್ಕರ್ಗಾಗಿ ನಾನು ದುಡ್ಡು ಕೊಟ್ಟಿಲ್ಲ, ಅಲ್ಲಿ ಏನಾಯ್ತೋ ಗೊತ್ತಿಲ್ಲ’: ‘ಆರ್ಆರ್ಆರ್’ ನಿರ್ಮಾಪಕ ದಾನಯ್ಯ
80 ಕೋಟಿ ರೂಪಾಯಿ ಸುರಿದು ಪ್ರಚಾರ ಮಾಡುವ ಮೂಲಕ ಆಸ್ಕರ್ ಪಡೆಯಲು ರಾಜಮೌಳಿ ಪ್ರಯತ್ನಿಸಿದ್ದಾರೆ ಎಂದು ತೆಲುಗಿನ ನಿರ್ಮಾಪಕ ತಮ್ಮಾರೆಡ್ಡಿ ಭಾರದ್ವಜ ಅವರು ಈ ಹಿಂದೆ ಆರೋಪಿಸಿದ್ದರು. ಆದರೆ ಅವರ ಮಾತನ್ನು ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರು ತಳ್ಳಿಹಾಕಿದ್ದರು. ‘ನಲ್ಮೆಯ ಸ್ನೇಹಿತ ಭಾರದ್ವಜ ಅವರೇ.. ತೆಲುಗು ಸಿನಿಮಾ, ಸಾಹಿತ್ಯ, ನಟರು ಮತ್ತು ನಿರ್ದೇಶಕರಿಗೆ ಆರ್ಆರ್ಆರ್ ಚಿತ್ರವು ಕೀರ್ತಿ ತಂದುಕೊಟ್ಟಿದ್ದಕ್ಕಾಗಿ ನಾವೆಲ್ಲರೂ ಹೆಮ್ಮೆಪಡಬೇಕು. ಖರ್ಚು ಮಾಡಿದ ಹಣದ ಬಗ್ಗೆ ನಿಮ್ಮ ಬಳಿ ಲೆಕ್ಕ ಇದೆಯಾ? ಲೆಜೆಂಡರಿ ನಿರ್ದೇಶಕರಾದ ಜೇಮ್ಸ್ ಕ್ಯಾಮೆರಾನ್ ಮತ್ತು ಸ್ಟೀವಲ್ ಸ್ಪೀಲ್ಬರ್ಗ್ ಅವರು ಹಣ ತೆಗೆದುಕೊಂಡು ಆರ್ಆರ್ಆರ್ ಸಿನಿಮಾವನ್ನು ಹೊಗಳಿದರು ಎಂಬುದು ನಿಮ್ಮ ಅಭಿಪ್ರಾಯವೇ?’ ಎಂದು ಕೆ. ರಾಘವೇಂದ್ರ ರಾವ್ ಅವರು ಟ್ವೀಟ್ ಮಾಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:05 am, Tue, 28 March 23