ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಗ್ಯಾರಂಟಿ ಎಂಬುದಕ್ಕೆ ಈಗಾಗಲೇ ಅನೇಕ ನಿದರ್ಶನಗಳಿವೆ. ಅಂಥ ಒಂದು ದುರ್ಘಟನೆ ಈಗ ಮತ್ತೆ ಸಂಭವಿಸಿದೆ. ತಮಿಳು ಸಿನಿಮಾವೊಂದರ (Tamil Cinema) ಶೂಟಿಂಗ್ ಸಮಯದಲ್ಲಿ ಹಿರಿಯ ಸಾಹಸ ನಿರ್ದೇಶಕರೊಬ್ಬರು ನಿಧನರಾಗಿದ್ದಾರೆ. ಕ್ರೇನ್ ವೈಫಲ್ಯದಿಂದಾಗಿ ಈ ಘಟನೆ ನಡೆದಿದೆ. 20 ಅಡಿ ಮೇಲಿಂದ ಬಿದ್ದ ಪರಿಣಾಮ ಸ್ಟಂಟ್ ಮಾಸ್ಟರ್ ಸಾವು (Stunt Master Death) ಸಂಭವಿಸಿದೆ. ಕಳೆದ ಹಲವಾರು ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ಸಾಹಸ ನಿರ್ದೇಶಕರಾಗಿದ್ದ ಸುರೇಶ್ ಅವರೇ ಮೃತ ದುರ್ದೈವಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅನೇಕರು ಪ್ರಾರ್ಥಿಸುತ್ತಿದ್ದಾರೆ. ಸುರೇಶ್ (Stunt Master Suresh) ಅವರಿಗೆ 54 ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ಮಕ್ಕಳನ್ನು ಅವರು ಅಗಲಿದ್ದಾರೆ.
ಶನಿವಾರ (ಡಿ.3) ಮುಂಜಾನೆ 10 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿತು ಎಂದು ವರದಿ ಆಗಿದೆ. ಖ್ಯಾತ ನಿರ್ದೇಶಕ ವೆಟ್ರಿಮಾರನ್ ಅವರು ‘ವಿದುತಲೈ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಸೂರಿ ಮುಖ್ಯಭೂಮಿಕೆ ನಿಭಾಯಿಸುತ್ತಿರುವ, ವಿಜಯ್ ಸೇತುಪತಿ ಅತಿಥಿ ಪಾತ್ರ ಮಾಡುತ್ತಿರುವ ಈ ಸಿನಿಮಾದ ಶೂಟಿಂಗ್ ವಂದಲೂರ್ ಸಮೀಪ ನಡೆಯುತ್ತಿತ್ತು. ಮುಖ್ಯ ಸಾಹಸ ನಿರ್ದೇಶಕರ ಜೊತೆ ಸುರೇಶ್ ಕೆಲಸ ಮಾಡುತ್ತಿದ್ದರು. ದೃಶ್ಯವೊಂದರ ಚಿತ್ರೀಕರಣಕ್ಕಾಗಿ ಸ್ಟಂಟ್ಸ್ ಕಲಾವಿದರಿಗೆ ಹಗ್ಗ ಕಟ್ಟಿ ಕ್ರೇನ್ಗೆ ನೇತು ಹಾಕಲಾಗಿತ್ತು. ಸುರೇಶ್ ಅವರು ನಟಿಸುವಾಗ ಹಗ್ಗ ತುಂಡಾಗಿದ್ದರಿಂದ ಅವರು ಕ್ರೇನ್ನಿಂದ ಕೆಳಗೆ ಬಿದ್ದರು ಎಂದು ತಿಳಿದುಬಂದಿದೆ.
ಕೂಡಲೇ ಸುರೇಶ್ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಇನ್ನೊರ್ವ ಸ್ಟಂಟ್ ಕಲಾವಿದನಿಗೆ ತೀವ್ರ ಗಾಯಗಳಾಗಿವೆ. ಕಳೆದ 25 ವರ್ಷಗಳಿಂದ ಸುರೇಶ್ ಅವರು ಸ್ಟಂಟ್ ಮಾಸ್ಟರ್ ಆಗಿದ್ದರು. ಅವರ ನಿಧನಕ್ಕೆ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ.
ರೈಲು ಅಪಘಾತದ ಶೂಟಿಂಗ್:
‘ವಿದುತಲೈ’ ಚಿತ್ರದಲ್ಲಿ ಬರುವ ರೈಲು ಅಪಘಾತದ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು. ಅದಕ್ಕಾಗಿ ಬೃಹತ್ ಸೆಟ್ ನಿರ್ಮಾಣ ಮಾಡಲಾಗಿತ್ತು. ಹಳಿ ತಪ್ಪಿ ಬಿದ್ದ ರೈಲು ಬೋಗಿಗಳ ಮೇಲೆ ನಟರು ಓಡಿ ಹೋಗುವ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು. ಅದರಲ್ಲಿ ಭಾಗ ವಹಿಸಿದ್ದ ಸುರೇಶ್ ಅವರು ಈ ಅವಘಡದಿಂದ ಕೊನೆಯುಸಿರು ಎಳೆದರು.
ಈ ದುರ್ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯಾರ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂಬುದು ತನಿಖೆ ಬಳಿಕ ಗೊತ್ತಾಗಲಿದೆ. ಸುರೇಶ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅನೇಕರು ಪ್ರಾರ್ಥಿಸುತ್ತಿದ್ದಾರೆ. ಕನ್ನಡದ ‘ಲವ್ ಯೂ ರಚ್ಚು’, ‘ಮಾಸ್ತಿ ಗುಡಿ’ ಸಿನಿಮಾಗಳ ಶೂಟಿಂಗ್ ಸಂದರ್ಭದಲ್ಲೂ ಇಂಥ ಕಹಿ ಘಟನೆ ನಡೆದಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:44 am, Mon, 5 December 22