ಪರಭಾಷೆ ಸಿನಿಮಾಗಳ ನಟಿಸುತ್ತಿಲ್ಲವೇಕೆ? ಕಾರಣ ತಿಳಿಸಿದ ಸುದೀಪ್
Kichcha Sudeep: ಕಿಚ್ಚ ಸುದೀಪ್ ಅವರು ಕರ್ನಾಟಕದ ಮೊದಲ ಪ್ಯಾನ್ ಇಂಡಿಯಾ ನಟ. ಹಲವು ವರ್ಷಗಳ ಹಿಂದೆಯೇ ಸುದೀಪ್ ಅವರು ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು. ಅದೂ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಲ್ಲ, ನಾಯಕನ ಪಾತ್ರದಲ್ಲಿಯೇ ನಟಿಸಿ ಗೆದ್ದು ಬಂದಿದ್ದರು. ಆದರೆ ಈಗ ಪರಭಾಷೆ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಅವರ ನಿರ್ಧಾರ ಬದಲಾಗಿದೆ.

ಕಿಚ್ಚ ಸುದೀಪ್ (Sudeep) ಅವರು ಕರ್ನಾಟಕದ ಮೊದಲ ಪ್ಯಾನ್ ಇಂಡಿಯಾ ನಟ. ಹಲವು ವರ್ಷಗಳ ಹಿಂದೆಯೇ ಸುದೀಪ್ ಅವರು ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು. ಅದೂ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಲ್ಲ, ನಾಯಕನ ಪಾತ್ರದಲ್ಲಿಯೇ ನಟಿಸಿ ಗೆದ್ದು ಬಂದಿದ್ದರು. ಅವರ ನಟನೆಯ ‘ರಣ್’, ‘ಈಗ’ ಸಿನಿಮಾಗಳು ಕಲ್ಟ್ ಸಿನಿಮಾಗಳೆನಿಸಿಕೊಂಡಿವೆ. ರಾಜಮೌಳಿ, ಅಮಿತಾಬ್ ಬಚ್ಚನ್ ಅಂಥಹವರೇ ಸುದೀಪ್ ನಟನೆಯನ್ನು ಮೆಚ್ಚಿಕೊಂಡಾಡಿದ್ದಾರೆ. ಈಗಲೂ ಸಹ ಸುದೀಪ್ ಅವರಿಗೆ ಪರ ಭಾಷೆಗಳ ಆಫರ್ಗಳು ಬರುತ್ತಲೇ ಇರುತ್ತವೆ. ಆದರೆ ಪರಭಾಷೆ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ತಮ್ಮದೇ ಒಂದು ನಿಯಮ ಹಾಕಿಕೊಂಡಿದ್ದಾರೆ ಸುದೀಪ್.
ಒಂದು ರಾಜ್ಯದ ನಟರು ಮತ್ತೊಂದು ರಾಜ್ಯದ ಸ್ಟಾರ್ ನಟರ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸುವುದು ಇತ್ತೀಚೆಗಿನ ಪ್ಯಾನ್ ಇಂಡಿಯಾ ಸಂಸ್ಕೃತಿಯಲ್ಲಿ ಸಾಮಾನ್ಯ ಆಗಿಬಿಟ್ಟಿದೆ. ಕನ್ನಡದ ಕೆಲವಾರು ನಟರು ಈಗಾಗಲೇ ಪರ ಭಾಷೆಯಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಬಹಳ ವರ್ಷಗಳಿಂದಲೂ ಕನ್ನಡದ ಜೊತೆಗೆ ಪರಭಾಷೆಯಲ್ಲಿ ನಟಿಸುತ್ತಾ ಬಂದಿರುವ ಸುದೀಪ್ ಅವರು ಇತ್ತೀಚೆಗೆ ಪರ ಭಾಷೆ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿಲ್ಲ. ಇದಕ್ಕೆ ಕಾರಣವೇನು ಎಂಬುದನ್ನು ಸ್ವತಃ ಸುದೀಪ್ ವಿವರಿಸಿದ್ದಾರೆ.
ಟಿವಿ9 ಜೊತೆಗಿನ ಸಂದರ್ಶನದಲ್ಲಿ ಈ ವಿಷಯವಾಗಿ ಮಾತನಾಡಿರುವ ಸುದೀಪ್, ‘ಪರಭಾಷೆ ಸಿನಿಮಾ ಅವಕಾಶಗಳು ಬರುತ್ತಲೇ ಇರುತ್ತವೆ ಆದರೆ ನಾನೊಂದು ನಿರ್ಣಯ ಮಾಡಿದ್ದೀನಿ, ಪರ ಭಾಷೆ ಸಿನಿಮಾ ಒಪ್ಪಿಕೊಂಡು ಆ ಚಿತ್ರೀಕರಣಕ್ಕೆ 50-100 ದಿನಗಳನ್ನು ನೀಡುವ ಬದಲಿಗೆ ನಮ್ಮ ಕನ್ನಡ ಸಿನಿಮಾಗಳ ಮೇಲೆ ಹೆಚ್ಚು ಗಮನ ಹರಿಸುವ ನಿರ್ಧಾರ ಮಾಡಿದ್ದೀನಿ. ಪರಭಾಷೆ ಸಿನಿಮಾಗಳಿಗೆ 50-100 ದಿನ ನೀಡಿದರೂ ಸಹ ಅದು ನಮ್ಮ ಸಿನಿಮಾ ಆಗಿರುವುದಿಲ್ಲ, ಅಲ್ಲಿ ಬೇರೆ ಯಾರೋ ಹೀರೋ ಆಗಿರುತ್ತಾರೆ, ಪೋಷಕ ಪಾತ್ರಗಳಲ್ಲಿ ನಟಿಸಲು ಅಷ್ಟು ಶ್ರಮ, ಸಮಯ ಏಕೆ ವ್ಯರ್ಥ ಮಾಡಿಕೊಳ್ಳಬೇಕು, ಅದರ ಬದಲು ಆ ಸಮಯವನ್ನು ಕನ್ನಡ ಸಿನಿಮಾಗಳಿಗೆ ನೀಡಬಹುದಲ್ಲ’ ಎಂದಿದ್ದಾರೆ ಸುದೀಪ್.
ಇದನ್ನೂ ಓದಿ:ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ನಮ್ಮ ಭಾಷೆಯವರೇ ಆದ ಕೆಲವು ಆತ್ಮೀಯರು ಕರೆದಾಗ, ಜೂನಿಯರ್ಗಳು ಕರೆದಾಗ ಹೋಗಿ ನಟಿಸಿದ್ದೀನಿ, ವಾಯ್ಸ್ ಓವರ್ ಕೊಡುತ್ತೀನಿ, ಹಾಡುಗಳನ್ನಬು ಹಾಡಿದ್ದು ಸಹ ಇದೆ. ವಿಶ್ವಾಸಕ್ಕೆ, ಬೆಂಬಲ ನೀಡಬೇಕಾಗುತ್ತದೆ. ಆದರೆ ಪರ ಭಾಷೆ ಸಿನಿಮಾಗಳಲ್ಲಿ ಎಷ್ಟು ಮಾಡಿದರೂ ಸಹ ಅದು ನಮ್ಮ ಸಿನಿಮಾ ಆಗುವುದಿಲ್ಲ’ ಎಂದಿದ್ದಾರೆ ಸುದೀಪ್.
ಸುದೀಪ್ ಅವರು 2008 ರಲ್ಲಿ ಮೊದಲ ಬಾರಿಗೆ ಹಿಂದಿಯ ‘ಫೂಂಕ್’ ಸಿನಿಮಾನಲ್ಲಿ ನಟಿಸಿದರು. ಅದಾದ ಬಳಿಕ ಅಮಿತಾಬ್ ಬಚ್ಚನ್ ಜೊತೆಗೆ ‘ರಣ್’, ‘ಫೂಂಕ್ 2’ ತೆಲುಗಿನ ‘ರಕ್ತ ಚರಿತ್ರ’, ‘ರಕ್ತ ಚರಿತ್ರ 2’, ‘ಈಗ’, ‘ಬಾಹುಬಲಿ: ದಿ ಬಿಗಿನಿಂಗ್’, ತಮಿಳಿನ ‘ಪುಲಿ’, 2019 ರಲ್ಲಿ ಬಿಡುಗಡೆ ಆದ ತೆಲುಗಿನ ‘ಸೈರಾ ನರಸಿಂಹ ರೆಡ್ಡಿ’ ಮತ್ತು ಹಿಂದಿಯ ‘ದಬಂಗ್ 3’ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ದಬಂಗ್ 3’ ಸಿನಿಮಾದ ಬಳಿಕ ಸುದೀಪ್ ಅವರು ಯಾವುದೇ ಪರಭಾಷೆ ಸಿನಿಮಾನಲ್ಲಿ ನಟಿಸಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:02 pm, Sun, 14 December 25




