ಸುಶಾಂತ್​ ಸಿಂಗ್​ ರಜಪೂತ್​ ಮನೆ ಕೆಲಸದವರಿಗೆ ಗೊತ್ತಿದೆಯಾ ಡ್ರಗ್ಸ್​ ಸತ್ಯ? ಎನ್​ಸಿಬಿಯಿಂದ ವಿಚಾರಣೆ

| Updated By: ರಾಜೇಶ್ ದುಗ್ಗುಮನೆ

Updated on: May 31, 2021 | 4:32 PM

Sushant Singh Rajput: ಈ ಪ್ರಕರಣದಲ್ಲಿ ಅನೇಕ ಬಾಲಿವುಡ್​ ಸೆಲೆಬ್ರಿಟಿಗಳೂ ಸೇರಿದಂತೆ ಒಟ್ಟು 35ಕ್ಕೂ ಅಧಿಕ ಜನರನ್ನು ಇಲ್ಲಿಯವರೆಗೆ ವಿಚಾರಣೆಗೆ ಒಳಪಡಿಸಲಾಗಿದೆ. ಈಗ ಮನೆ ಕೆಲಸದವರಿಂದ ಮಹತ್ವದ ಮಾಹಿತಿ ಹೊರಬೀಳಲಿದೆಯೇ ಎಂಬ ಕುತೂಹಲ ಮೂಡಿದೆ.

ಸುಶಾಂತ್​ ಸಿಂಗ್​ ರಜಪೂತ್​ ಮನೆ ಕೆಲಸದವರಿಗೆ ಗೊತ್ತಿದೆಯಾ ಡ್ರಗ್ಸ್​ ಸತ್ಯ? ಎನ್​ಸಿಬಿಯಿಂದ ವಿಚಾರಣೆ
ಸುಶಾಂತ್ ಸಿಂಗ್ ರಜಪೂತ್
Follow us on

ಕಳೆದ ವರ್ಷ ಜೂ.14ರಂದು ಬಾಲಿವುಡ್​ ಸ್ಟಾರ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರು ನಿಧನರಾದ ಸುದ್ದಿ ಇಡೀ ಚಿತ್ರರಂಗಕ್ಕೆ ಆಘಾತ ಉಂಟು ಮಾಡಿತ್ತು. ಅವರು ಅನುಮಾನಾಸ್ಪದವಾಗಿ ಮೃತರಾಗಿ ಒಂದು ವರ್ಷ ಕಳೆಯುತ್ತಿದ್ದರೂ ಕೂಡ ಸಾವಿಗೆ ಅಸಲಿ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ. ಸುಶಾಂತ್​ ಸಾವಿನ ಬಗ್ಗೆ ತನಿಖೆ ಕೈಗೊಂಡ ಅಧಿಕಾರಿಗಳಿಗೆ ಮಾದಕವಸ್ತು ಜಾಲದ ನಂಟಿನ ಬಗ್ಗೆ ವಾಸನೆ ಬಡಿದಿತ್ತು. ಬಳಿಕ ಮಾದಕವಸ್ತು ನಿಯಂತ್ರಣ ಬ್ಯುರೋ (ಎನ್​ಸಿಬಿ) ಕೂಡ ತನಿಖೆ ಆರಂಭಿಸಿತ್ತು. ಈಗ ಸುಶಾಂತ್​ ಸಿಂಗ್​ ರಜಪೂತ್​ ಮನೆ ಕೆಲಸದವರನ್ನು ಎನ್​ಸಿಬಿ ವಿಚಾರಣೆಗೆ ಒಳಪಡಿಸಿದೆ.

ಸುಶಾಂತ್​ ಜೊತೆ ಫ್ಲಾಟ್​ಮೇಟ್​ ಆಗಿದ್ದ ಸಿದ್ಧಾರ್ಥ್​ ಪಿಠಾನಿಯನ್ನು ಇತ್ತೀಚೆಗೆ ಹೈದರಾಬಾದ್​ನಲ್ಲಿ ಬಂಧಿಸಲಾಗಿತ್ತು. ಆ ಸಂಬಂಧ ತನಿಖೆ ಮುಂದುವರಿದಿದ್ದು, ಹೆಚ್ಚಿನ ವಿಚಾರಣೆಗಾಗಿ ಸುಶಾಂತ್​ ಮನೆಕೆಲಸದವರಾಗಿದ್ದ ನೀರಜ್​ ಮತ್ತು ಕೇಶವ್​ ಎಂಬುವವರನ್ನು ಭಾನುವಾರ (ಮೇ 30) ಎನ್​ಸಿಬಿ ಕಚೇರಿಗೆ ಕರೆಸಿಕೊಂಡು ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಭಾನುವಾರ ತಡರಾತ್ರಿವರೆಗೂ ವಿಚಾರಣೆ ಮುಂದುವರಿದಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣದಲ್ಲಿ ಅನೇಕ ಬಾಲಿವುಡ್​ ಸೆಲೆಬ್ರಿಟಿಗಳೂ ಸೇರಿದಂತೆ 35ಕ್ಕೂ ಅಧಿಕ ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈಗ ಮನೆ ಕೆಲಸದವರಿಂದ ಮಹತ್ವದ ಮಾಹಿತಿ ಹೊರಬೀಳಲಿದೆಯೇ ಎಂಬ ಕುತೂಹಲ ಮೂಡಿದೆ.

ಸುಶಾಂತ್​ ಸಿಂಗ್​ ರಜಪೂತ್​ಗೆ ಮಾದಕವಸ್ತು ಪೂರೈಕೆ ಮಾಡುತ್ತಿದ್ದ ಜಾಲದಲ್ಲಿ ಸಿದ್ಧಾರ್ಥ್​ ಪಿಠಾನಿ ಕೂಡ ಭಾಗಿಯಾಗಿದ್ದ ಎಂಬ ಆರೋಪ ಇದೆ. ಹಾಗಾಗಿ ಹೈದರಾಬಾದ್​ನಲ್ಲಿ ಆತನನ್ನು ಬಂಧಿಸಿ, ಮುಂಬೈಗೆ ಕರೆತರಲಾಯಿತು. ಕೋರ್ಟ್​ಗೆ ಹಾಜರುಪಡಿಸಿ, ಜೂನ್​ 1ರವರೆಗೆ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಒಂದು ವರ್ಷದಿಂದ ಈಚೆಗೆ ಹಲವು ಬಾಲಿವುಡ್​ ಕಲಾವಿದರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಸಿಬಿ ಅಧಿಕಾರಿಗಳಿಂದ ವಿಚಾರಣೆ ಎದುರಿಸಿದ್ದಾರೆ. ರಿಯಾ ಚಕ್ರವರ್ತಿ, ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್​, ಶ್ರದ್ಧಾ ಕಪೂರ್​, ರಾಕುಲ್​ ಪ್ರೀತ್​ ಸಿಂಗ್​ ಮುಂತಾದವರು ಎನ್​ಸಿಬಿ ಕಚೇರಿಯ ಮೆಟ್ಟಿಲು ಹತ್ತಿಬಂದಿದ್ದಾರೆ.

ಸುಶಾಂತ್​ ಸಾವಿನ ತನಿಖೆಯನ್ನು ಮೂರು ಆಯಾಮದಿಂದ ಮಾಡಲಾಗುತ್ತಿದೆ. ಕೊಲೆಗೆ ಕಾರಣ ಏನು ಎಂಬುದನ್ನು ಸಿಬಿಐ ತನಿಖಾ ತಂಡ ಕಂಡುಹಿಡಿಯುತ್ತಿದೆ. ಸುಶಾಂತ್​ಗೆ ಇದ್ದ ಡ್ರಗ್ಸ್​ ಜಾಲದ ನಂಟಿನ ಬಗ್ಗೆ ಎನ್​ಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸುಶಾಂತ್​ ಹಣಕಾಸು ವ್ಯವಹಾರದಲ್ಲಿ ಅನುಮಾನ ಕಂಡುಬಂದಿರುವ ಕಾರಣ ಜಾರಿ ನಿರ್ದೇಶನಾಲಯ ಕೂಡ ತನಿಖೆ ನಡೆಸುತ್ತಿದೆ. ಒಟ್ಟಾರೆ ಪ್ರಕರಣದ ಅಂತಿಮ ವರದಿಗಾಗಿ ಸುಶಾಂತ್​ ಅಭಿಮಾನಿಗಳು ಕಾದಿದ್ದಾರೆ. ಅವರ ಸಾವಿಗೆ ನ್ಯಾಯ ಸಿಗಬೇಕು ಎಂದು ಸೋಶಿಯಲ್​ ಮೀಡಿಯಾದಲ್ಲಿ ಇಂದಿಗೂ ಕೂಗು ಕೇಳಿಬರುತ್ತಿದೆ.

ಇದನ್ನೂ ಓದಿ:

ಸುಶಾಂತ್​ ಸಿಂಗ್​ ರಜಪೂತ್​ ಸಾವು ಪ್ರಕರಣ ಮತ್ತೆ ಜೀವಂತ; ಹೈದರಾಬಾದ್​​ನಲ್ಲಿ ನಟ ಸುಶಾಂತ್​ ಅಪಾರ್ಟ್​ಮೆಂಟ್​ ವಾಸಿ ಅರೆಸ್ಟ್

ಸುಶಾಂತ್​ ಸಿಂಗ್​ ರಜಪೂತ್ ರೀತಿಯೇ ಕಾರ್ತಿಕ್​ ಆರ್ಯನ್​ಗೆ ಅನ್ಯಾಯ ಆಗಲು ಕತ್ರಿನಾ ಕಾರಣವೇ?