ತಾಪ್ಸಿ ಪನ್ನು ಬಾಲಿವುಡ್ನ ಸ್ಟಾರ್ ನಟಿಯರಲ್ಲಿ ಒಬ್ಬರು. ಇತರೆ ನಟಿಯರಂತೆ ಕೇವಲ ಕಮರ್ಶಿಯಲ್ ಸಿನಿಮಾಗಳಲ್ಲಿ ನಟಿಸದೇ ಗಟ್ಟಿ ಪಾತ್ರಗಳಲ್ಲಿ ಮಾತ್ರವೇ ನಟಿಸುತ್ತಾರೆ ಅವರು. ಒಳ್ಳೆಯ ನಟಿ ಆಗಿರುವ ಜೊತೆಗೆ ಸಾಮಾಜಿಕ ವಿಷಯಗಳ ಬಗ್ಗೆ ದಿಟ್ಟತನದಿಂದ ಮಾತನಾಡುತ್ತಾರೆ. ಈ ಹಿಂದೆ ಕೋಮುದ್ವೇಷ ಇನ್ನಿತರೆ ವಿಷಯಗಳ ಬಗ್ಗೆ ತಮ್ಮ ನಿಲವನ್ನು ವ್ಯಕ್ತಪಡಿಸಿದ್ದರು. ಮಹಿಳಾ ಸುರಕ್ಷತೆ, ಸಮಾನತೆಯ ಬಗ್ಗೆಯೂ ಸಹ ತಾಪ್ಸಿ ಪನ್ನು ಗಟ್ಟಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇತ್ತೀಚೆಗಷ್ಟೆ ಚಿತ್ರರಂಗದಲ್ಲಿ ಮಹಿಳೆ ಹಾಗೂ ಪುರುಷರ ನಡುವೆ ಇರುವ ಪಾವತಿ ಅಸಮತೋಲನ (ಪೇ ಡಿಫರೆನ್ಸ್)ದ ಬಗ್ಗೆ ತಾಪ್ಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲವಾರು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿರುವ ತಾಪ್ಸಿ ಪನ್ನು, ತಮಗೆ ಮಹಿಳಾ ಪ್ರಧಾನ ಸಿನಿಮಾಗಳಿಂದಲೇ ಹೆಚ್ಚು ಸಂಭಾವನೆ ಬರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ಸೂಪರ್ ಸ್ಟಾರ್ ನಟರು ಇರುವ ಭಾರಿ ಬಜೆಟ್ನ ಪುರುಷ ಪ್ರಧಾನ ಸಿನಿಮಾಗಳಿಂದ ತಮಗೆ ಕಡಿಮೆ ಸಂಭಾವನೆ ಸಿಕ್ಕಿದೆ ಎಂದಿದ್ದಾರೆ. ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾದಲ್ಲಿ ನಟಿಸಿದ್ದಕ್ಕೆ ತಮಗೆ ಕಡಿಮೆ ಸಂಭಾವನೆ ಸಿಕ್ಕಿತ್ತು ಎಂದು ಅವರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ:ಟಿವಿ ಶೋಗಳಲ್ಲಿ ನಟಿಸಿದ್ದ ಶಾರುಖ್ ಖಾನ್; ಅವುಗಳು ಯಾವವು?
ಅಲ್ಲದೆ, ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವಾಗ, ಅವರು (ಚಿತ್ರ ನಿರ್ಮಾಪಕರು) ನಮ್ಮ ಮೇಲೆ ಏನೋ ಕರುಣೆ ತೋರಿಸುತ್ತಿರುವಂತೆ ವರ್ತಿಸುತ್ತಾರೆ. ಈಗಾಗಲೇ ನಮ್ಮ ಬಳಿ ಸ್ಟಾರ್ ನಟ ಇದ್ದಾನೆ, ನಾಯಕಿ ಅವಶ್ಯಕತೆಯೇ ನಮಗೆ ಇಲ್ಲ, ಆದರೆ ಅವರಿಗೆ (ನಾಯಕಿಯರಿಗೆ) ಅನುಕೂಲ ಆಗುತ್ತದೆ, ಅವರ ವೃತ್ತಿಗೆ ಏಳ್ಗೆ ಸಿಗುತ್ತದೆ ಎಂಬ ಕಾರಣಕ್ಕೆ ಅವರನ್ನು ಹಾಕಿಕೊಳ್ಳುತ್ತಿದ್ದೇವೆ ಆ ಮೂಲಕ ನಾಯಕಿಯರಿಗೆ ಸಹಾಯ ಮಾಡುತ್ತಿದ್ದೇವೆ ಎಂಬ ಧೋರಣೆಯನ್ನು ದೊಡ್ಡ ನಿರ್ಮಾಣ ಸಂಸ್ಥೆಗಳು ತೋರಿಸುತ್ತವೆ ಎಂದಿದ್ದಾರೆ ತಾಪ್ಸಿ ಪನ್ನು.
ತಾಪ್ಸಿ ಪನ್ನು ಹೇಳಿಕೊಂಡಿರುವಂತೆ ಅವರಿಗೆ ಪುರುಷ ಪ್ರಧಾನ ಸಿನಿಮಾಗಳಿಗಿಂತಲೂ ಮಹಿಳಾ ಪ್ರಧಾನ ಸಿನಿಮಾಗಳಲ್ಲಿಯೇ ಹೆಚ್ಚು ಸಂಭಾವನೆ ಸಿಗುತ್ತದೆಯಂತೆ. ‘ಹಸೀನ ದಿಲ್ರುಬಾ’, ‘ದಖ್-ದಖ್’, ‘ದೊಬಾರ’, ‘ಬ್ಲರ್’, ‘ಶಭಾಶ್ ಮಿಥು’, ‘ರಶ್ಮಿ ರಾಕೆಟ್’, ‘ಮನ್ಮರ್ಜಿಯಾ’ ಇನ್ನೂ ಹಲವು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ‘ಖೇಲ್ ಖೇಲ್ ಮೆ’ ಹಾಗೂ ‘ವೋಹ್ ಲಡ್ಕಿ ಹೇ ಕಹಾ’ ಸಿನಿಮಾಗಳಲ್ಲಿ ತಾಪ್ಸಿ ಪನ್ನು ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ