ವಿಶ್ವಾದ್ಯಂತ ಇರುವ ಸಿನಿಪ್ರಿಯರ ಗಮನವೆಲ್ಲ ಈಗ ‘ಆಸ್ಕರ್’ ಪ್ರಶಸ್ತಿ (Oscar Award) ಮೇಲಿದೆ. ಮಾರ್ಚ್ 13ರ ಮುಂಜಾನೆ ಲಾಸ್ ಏಂಜಲಿಸ್ನ ಡಾಲ್ಬಿ ಥಿಯೇಟರ್ನಲ್ಲಿ 95ನೇ ಸಾಲಿನ ಆಸ್ಕರ್ ಅವಾರ್ಡ್ಸ್ (95th Academy Awards) ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಈ ಬಾರಿ ಭಾರತದ ಸಿನಿಮಾಗಳು 3 ವಿಭಾಗದಲ್ಲಿ ನಾಮಿನೇಟ್ ಆಗಿರುವುದರಿಂದ ಯಾರಿಗೆ ಪ್ರತಿಷ್ಠಿತ ಪ್ರಶಸ್ತಿ ಒಲಿಯಲಿದೆ ಎಂಬುದುನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ. ಈ ನಡುವೆ ತಮಿಳಿನ ಖ್ಯಾತ ನಟ ಸೂರ್ಯ (Suriya) ಅವರು ಆಸ್ಕರ್ ಸ್ಪರ್ಧೆಗೆ ತಮ್ಮ ಮತ ಚಲಾಯಿಸಿದ್ದಾರೆ. ಆಸ್ಕರ್ ಪ್ರಶಸ್ತಿಯ ಕಮಿಟಿಯಲ್ಲಿ ಸದಸ್ಯತ್ವ ಹೊಂದಿರುವ ದಕ್ಷಿಣ ಭಾರತದ ಏಕೈಕ ನಟ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಹೆಮ್ಮೆ ತಂದಿದೆ.
ತಾವು ಆಸ್ಕರ್ ಸ್ಪರ್ಧೆಗೆ ವೋಟ್ ಮಾಡಿರುವ ವಿಷಯವನ್ನು ಟ್ವಿಟರ್ ಮೂಲಕ ಸೂರ್ಯ ಅವರು ಖಚಿತಪಡಿಸಿದ್ದಾರೆ. ಅದಕ್ಕೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಸೂರ್ಯ ಅವರು ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಅವರಿಗೆ ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸಸ್’ ಸದಸ್ಯತ್ವ ನೀಡಲಾಗಿದೆ. ಈ ಬಾರಿ ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡು ಸ್ಪರ್ಧೆಯಲ್ಲಿದೆ. ಆ ಕಾರಣದಿಂದ ಹೆಚ್ಚು ನಿರೀಕ್ಷೆ ಮೂಡಿದೆ.
Oscar 2023: ‘ಆಸ್ಕರ್ ಪ್ರಶಸ್ತಿ ನನಗೆ ಮುಟ್ಟಲು ಕೊಡಿ ಪ್ಲೀಸ್’: ರಾಮ್ ಚರಣ್ ಬಳಿ ಶಾರುಖ್ ಖಾನ್ ಮನವಿ
ವೃತ್ತಿಜೀವನದಲ್ಲಿ ಸೂರ್ಯ ಅವರು ಗೆಲುವಿನ ಓಟ ಮುಂದುವರಿಸಿದ್ದಾರೆ. ಅವರು ನಟಿಸಿದ ‘ಸೂರರೈ ಪೋಟ್ರು’ ಹಾಗೂ ‘ಜೈ ಭೀಮ್’ ಸಿನಿಮಾಗಳಿಗೆ ಅಪಾರ ಜನಮೆಚ್ಚುಗೆ ಸಿಕ್ಕಿದೆ. ಕಳೆದ ವರ್ಷ ತೆರೆಕಂಡ ‘ವಿಕ್ರಮ್’ ಸಿನಿಮಾದಲ್ಲಿ ರೋಲೆಕ್ಸ್ ಪಾತ್ರದ ಮೂಲಕ ಸೂರ್ಯ ಮಿಂಚು ಹರಿಸಿದ್ದಾರೆ. ಹಲವು ಆಫರ್ಗಳನ್ನು ಕೈಯಲ್ಲಿ ಇಟ್ಟುಕೊಂಡು ಅವರು ಮುನ್ನುಗ್ಗುತ್ತಿದ್ದಾರೆ. ಆಗ ಆಸ್ಕರ್ ಸ್ಪರ್ಧೆಗೆ ಮತ ಚಲಾಯಿಸುವ ಮೂಲಕ ಸುದ್ದಿ ಆಗಿದ್ದಾರೆ.
Voting done! #Oscars95 @TheAcademy pic.twitter.com/Aob1ldYD2p
— Suriya Sivakumar (@Suriya_offl) March 8, 2023
95ನೇ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದವರಿಗೆ ನಟಿ ದೀಪಿಕಾ ಪಡುಕೋಣೆ ಅವರು ಟ್ರೋಫಿ ನೀಡಲಿದ್ದಾರೆ. ಹಲವು ಹಾಲಿವುಡ್ ಸೆಲೆಬ್ರಿಟಿಗಳ ಜೊತೆ ಇಂಥ ಅವಕಾಶ ಪಡೆದ ಭಾರತದ ಸೆಲೆಬ್ರಿಟಿ ಎಂಬ ಖ್ಯಾತಿಗೆ ಅವರು ಪಾತ್ರರಾಗುತ್ತಿದ್ದಾರೆ. ಈ ಸುದ್ದಿ ಕೇಳಿ ದೀಪಿಕಾ ಪಡುಕೋಣೆ ಫ್ಯಾನ್ಸ್ ಖುಷಿ ಆಗಿದ್ದಾರೆ. ಈ ಹಿಂದೆ ನಟಿ ಪ್ರಿಯಾಂಕಾ ಚೋಪ್ರಾ ಅವರು ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಿದ್ದರು. ಈಗ ದೀಪಿಕಾ ಪಡುಕೋಣೆ ಅವರಿಗೆ ಆ ಅವಕಾಶ ಸಿಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.