‘ಜೈ ಭೀಮ್​’ ಎನ್ನುತ್ತ ಕರ್ನಾಟಕದಲ್ಲೂ ಸದ್ದು ಮಾಡಲು ಸಜ್ಜಾದ ತಮಿಳು ಸ್ಟಾರ್​ ನಟ ಸೂರ್ಯ

‘ಜೈ ಭೀಮ್​’ ಮೂಲ ತಮಿಳಿನ ಸಿನಿಮಾ ಆದರೂ ಸಹ ಕನ್ನಡದಲ್ಲೂ ರಿಲೀಸ್​ ಆಗಲಿದೆ. ಹಾಗಾಗಿ ಕನ್ನಡದಲ್ಲೂ ಈ ಸಿನಿಮಾದ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ.

‘ಜೈ ಭೀಮ್​’ ಎನ್ನುತ್ತ ಕರ್ನಾಟಕದಲ್ಲೂ ಸದ್ದು ಮಾಡಲು ಸಜ್ಜಾದ ತಮಿಳು ಸ್ಟಾರ್​ ನಟ ಸೂರ್ಯ
‘ಜೈ ಭೀಮ್​’ ಚಿತ್ರದಲ್ಲಿ ನಟ ಸೂರ್ಯ
Edited By:

Updated on: Jul 24, 2021 | 8:08 AM

ತಮಿಳು ಚಿತ್ರರಂಗದ ಖ್ಯಾತ ನಟ ಸೂರ್ಯ (Suriya) ಅವರಿಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಮನಸೆಳೆಯುವ ಸಿನಿಮಾಗಳ ಮೂಲಕ ಅವರು ದೇಶಾದ್ಯಂತ ತಮ್ಮ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಕಳೆದ ವರ್ಷ ತೆರೆಕಂಡ ‘ಸೂರರೈ ಪೋಟ್ರು’ (Soorarai Pottru) ಸಿನಿಮಾ ಮೂಲಕ ಅವರು ಕನ್ನಡದ ಸಿನಿಪ್ರಿಯರಿಗೆ ಹೆಚ್ಚು ಹತ್ತಿರ ಆಗಿದ್ದರು. ಈಗ ‘ಜೈ ಭೀಮ್​’ (Jai Bheem) ಎನ್ನುತ್ತ ಮತ್ತೆ ಸದ್ದು ಮಾಡಲು ಸಜ್ಜಾಗಿದ್ದಾರೆ. ಏನಿದು ‘ಜೈ ಭೀಮ್’​? ಅವರ ಹೊಸ ಸಿನಿಮಾದ ಶೀರ್ಷಿಕೆ. ಹೌದು, ಸೂರ್ಯ ನಟಿಸಲಿರುವ ಹೊಸ ಚಿತ್ರಕ್ಕೆ ಈ ರೀತಿಯ ಪವರ್​ಫುಲ್​ ಟೈಟಲ್​ ಇಡಲಾಗಿದೆ. ಇದು ಅಭಿಮಾನಿಗಳಲ್ಲಿ ಭಾರಿ ಕೌತುಕ ಮೂಡಿಸಿದೆ. 

‘ಜೈ ಭೀಮ್​’ ಮೂಲ ತಮಿಳಿನ ಸಿನಿಮಾ ಆದರೂ ಸಹ ಕನ್ನಡದಲ್ಲೂ ರಿಲೀಸ್​ ಆಗಲಿದೆ. ಹಾಗಾಗಿ ಕನ್ನಡದಲ್ಲೂ ಈ ಸಿನಿಮಾದ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಹೆಸರೇ ಸೂಚಿಸುವಂತೆ ಇದರಲ್ಲಿ ಜಾತಿ ತಾರತಮ್ಯಕ್ಕೆ ಸೇರಿದ ವಿಷಯ ಇರಬಹುದು ಎಂದು ಸಿನಿಪ್ರಿಯರು ಊಹಿಸುತ್ತಿದ್ದಾರೆ. ಆದರೆ ಸಿನಿಮಾದ ಕಥೆಯ ಬಗ್ಗೆ ಚಿತ್ರತಂಡದಿಂದ ಸದ್ಯಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ.

ಫಸ್ಟ್​ಲುಕ್​ ಪೋಸ್ಟರ್​ನಲ್ಲಿ ಸೂರ್ಯ ಅವರ ಗೆಟಪ್​ ಗಮನ ಸೆಳೆಯುತ್ತಿದೆ. ಕಪ್ಪು ಕೋಟು ಧರಿಸಿ, ವಕೀಲನ ಲುಕ್​ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಪೋಸ್ಟರ್​ನ ಹಿನ್ನೆಲೆಯಲ್ಲಿ ನ್ಯಾಯಾಲಯ ಕಟ್ಟಡ, ಮುನ್ನೆಲೆಯಲ್ಲಿ ಬುಡಕಟ್ಟು ಜನರು ಹೈಲೈಟ್​ ಆಗಿರುವುದರಿಂದ ಸಿನಿಮಾದ ಕಥೆ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಇದು ಸೂರ್ಯ ನಟಿಸುತ್ತಿರುವ 39ನೇ ಸಿನಿಮಾ. ಜು.23ರಂದು ಸೂರ್ಯ ಜನ್ಮದಿನ. ಆ ಪ್ರಯುಕ್ತ ಶೀರ್ಷಿಕೆ ಮತ್ತು ಫಸ್ಟ್​ಲುಕ್ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಗಿಫ್ಟ್​ ನೀಡಲಾಗಿದೆ. ಈ ಚಿತ್ರಕ್ಕೆ ಜ್ಞಾನವೇಲ್​ ನಿರ್ದೇಶನ ಮಾಡಲಿದ್ದಾರೆ.

2ಡಿ ಎಂಟರ್​ಟೇನ್​ಮೆಂಟ್​ ಸಂಸ್ಥೆ ಮೂಲಕ ‘ಜೈ ಭೀಮ್​’ ಸಿನಿಮಾ ಮೂಡಿಬರಲಿದೆ. ತಮಿಳು, ಕನ್ನಡ ಹಾಗೂ ತೆಲುಗಿನಲ್ಲಿ ಚಿತ್ರ ಬಿಡುಗಡೆ ಆಗಲಿದೆ. ಕಳೆದ ವರ್ಷ ಓಟಿಟಿಯಲ್ಲಿ ಬಿಡುಗಡೆಯಾಗಿ ಭಾರಿ ಯಶಸ್ಸು ಕಂಡ ಸೂರ್ಯ ನಟನೆಯ ‘ಸೂರರೈ ಪೋಟ್ರು’ ಚಿತ್ರ ಕೂಡ ಕನ್ನಡ ಸೇರಿ ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ಸೂಪರ್​ ಹಿಟ್​ ಆಗಿತ್ತು.

ಇದನ್ನೂ ಓದಿ:

ಆಸ್ಕರ್ ಸ್ಪರ್ಧೆಯಲ್ಲಿ ಸುಧಾ ಕೊಂಗರ ನಿರ್ದೇಶನದ ತಮಿಳು ಸಿನಿಮಾ ಸೂರರೈ ಪೊಟ್ರು;

ಕಾಲಿವುಡ್​ನಲ್ಲಿ ಭರ್ಜರಿ ಸುದ್ದಿ ಮಾಡುತ್ತಿದ್ದಾಳೆ ಖ್ಯಾತ ನಟಿ ಶ್ರೀದೇವಿ ಮಗಳು!