ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಗಂಭೀರವಾಗಿ ಗಾಯಗೊಂಡ ತಮಿಳಿನ ಖ್ಯಾತ ನಟ!

Vishal: ತಮಿಳಿನ ಖ್ಯಾತ ನಟ ವಿಶಾಲ್ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣದ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದು, ಕೆಲ ದಿನಗಳವರೆಗೆ ವಿಶ್ರಾಂತಿಯಲ್ಲಿರುತ್ತಾರೆ ಎಂದು ಮೂಲಗಳು ಹೇಳಿವೆ.

ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಗಂಭೀರವಾಗಿ ಗಾಯಗೊಂಡ ತಮಿಳಿನ ಖ್ಯಾತ ನಟ!
ನಟ ವಿಶಾಲ್ (ಸಾಂದರ್ಭಿಕ ಚಿತ್ರ)

ತಮಿಳಿನ ಖ್ಯಾತ ನಟ ವಿಶಾಲ್ ಅವರು ಇನ್ನೂ ಹೆಸರಿಡದ ತಮ್ಮ ಮೂವತ್ತೊಂದನೇ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ವಿಶಾಲ್ ಚಿತ್ರೀಕರಣದ ವೇಳೆ ಗೋಡೆಯತ್ತ ನೂಕಲ್ಪಡುತ್ತಾರೆ. ಅವರ ಬೆನ್ನಿನ ಭಾಗಕ್ಕೆ ಇದರಿಂದ ಗಂಭೀರವಾಗಿ ಗಾಯಗಳಾಗಿವೆ. ಮೂಲಗಳ ಪ್ರಕಾರ ವಿಶಾಲ್ ಗಂಭೀರ ಅಪಾಯದಿಂದ ಪಾರಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ.

ವಿಶಾಲ್ ಅವರು ಆಕ್ಷನ್ ದೃಶ್ಯಗಳು ನೈಜವಾಗಿ ಮೂಡಿಬರಲು ರಿಸ್ಕ್ ತೆಗೆದುಕೊಳ್ಳುತ್ತಾರೆ. ಅವರು ಡ್ಯೂಪ್​ಗಳನ್ನು ಬಳಸಲು ಸಾಮಾನ್ಯವಾಗಿ ಒಪ್ಪುವುದಿಲ್ಲ. ತಮ್ಮ ಅಭಿಮಾನಿಗಳಿಗೆ ಅವರು ನೈಜವಾದ ದೃಶ್ಯಗಳನ್ನು ನೀಡಲು ಹೆಚ್ಚು ಕಾತರರಾಗಿರುತ್ತಾರೆ. ಆದ್ದರಿಂದಲೇ ಅವರು ಅಪಾಯಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಮುನ್ನುಗ್ಗುತ್ತಾರೆ. ಅದೇ ಮಾದರಿಯಲ್ಲೇ ಅವರು ತಮ್ಮ 31ನೇ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರದ ಶೂಟಿಂಗ್​ನಲ್ಲೂ ಭಾಗವಹಿಸಿದ್ದಾರೆ ಎನ್ನಲಾಗಿದೆ.

ಈ ಮೊದಲೂ ಸಹ ವಿಶಾಲ್ ಅಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದರು. ಈ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವು ಚಿತ್ರದ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ಉಸಿರು ಬಿಗಿ ಹಿಡಿದು ನೋಡಬಹುದಾದ ಆಕ್ಷನ್ ದೃಶ್ಯಗಳನ್ನು ಒಳಗೊಂಡಿದೆ. ಫಿಸಿಯೋಥೆರಪಿಸ್ಟ್ ವರ್ಮಾ ಅವರು ಚಿತ್ರೀಕರಣದಲ್ಲಿ ಉಂಟಾದ ಅವಘಡದ ವೇಳೆ ತಕ್ಷಣ ಸ್ಥಳಕ್ಕೆ ಬಂದು, ಉಪಚರಿಸಿದ್ದಾರೆ. ಕೆಲ ದಿನಗಳವರೆಗೆ ವಿಶಾಲ್ ವಿಶ್ರಾಂತಿಯಲ್ಲಿರುತ್ತಾರೆ ಎಂದು ವರದಿಗಳು ತಿಳಿಸಿವೆ. ಚಿತ್ರೀಕರಣದಲ್ಲಿ ದೃಶ್ಯಗಳನ್ನು ವೀಕ್ಷಿಸಲು ಬಳಸಲ್ಪಡುವ ಮಾನಿಟರ್​ನಲ್ಲಿ ಆಕ್ಷನ್ ದೃಶ್ಯದ ವಿಡಿಯೊವನ್ನು ಸೆರೆಹಿಡಿಯಲಾಗಿದ್ದು, ಆ ವಿಡಿಯೊ ಇಲ್ಲಿದೆ.

ಈ ನಡುವೆ ವಿಶಾಲ್, ‘ಎನಿಮಿ’ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದರಲ್ಲಿ ತಮಿಳಿನ ಮತ್ತೊಬ್ಬ ಖ್ಯಾತ ನಟ ಆರ್ಯ ಪ್ರತಿನಾಯಕನಾಗಿ ನಟಿಸಿದ್ದಾರೆ. ಅದರ ಪೋಸ್ಟರ್ ಬಿಡುಗಡೆಯಾಗಿದ್ದು ಚಿತ್ರಪ್ರಿಯರ ಗಮನ ಸೆಳೆದಿದೆ.

ಇದನ್ನೂ ಓದಿ: ಬದಲಾಯ್ತು ಚೈತ್ರಾ ಕೋಟೂರ್​ ಹೆಸರು; ಮಾ ಪ್ರಗ್ಯಾ ಭಾರತಿ ಆಗಿ ಅಧ್ಯಾತ್ಮಕ್ಕೆ ಜಾರಿದ ನಟಿ

ಇದನ್ನೂ ಓದಿ: ಬಂಧನಕ್ಕೆ ಒಳಗಾಗದಿರಲು ಅಧಿಕಾರಿಗಳಿಗೆ 25 ಲಕ್ಷ ಲಂಚ ನೀಡಿದ್ದ ರಾಜ್ ಕುಂದ್ರಾ: ವರದಿ

(Tamil actor Vishal severely injured during his 31st movie climax shoot)