ವಿಜಯ್ ವಾರ್ಷಿಕ ಆದಾಯ ಎಷ್ಟು ಕೋಟಿ? ಇರುವ ಕಾರುಗಳೆಷ್ಟು? ಬಂಗ್ಲೆಯ ವಿಶೇಷತೆ ಏನು?
Thalapathy Vijay Birthday: ತಮಿಳು ಸ್ಟಾರ್ ನಟ ವಿಜಯ್ ಹುಟ್ಟುಹಬ್ಬ ಇಂದು. ಅವರ ವಾರ್ಷಿಕ ಆದಾಯ ಎಷ್ಟು? ಅವರ ಬಳಿ ಇರುವ ಕಾರುಗಳು ಯಾವುವು? ಅವರ ಬಂಗ್ಲೆಯ ವಿಶೇಷತೆ ಏನು? ಇಲ್ಲಿದೆ ಮಾಹಿತಿ.
ಭಾರತದಲ್ಲಿ ಸಿನಿಮಾ ಒಂದಕ್ಕೆ ಅತಿ ಹೆಚ್ಚು ಸಂಭಾವನೆ ಪಡೆವ ಮೊದಲ ಐದು ನಟರಲ್ಲಿ ಒಂದು ಸ್ಥಾನ ತಮಿಳು ಸೂಪರ್ ಸ್ಟಾರ್ ವಿಜಯ್ಗೆ (Vijay) ಮೀಸಲು. ವರ್ಷಕ್ಕೆ ಒಂದು ಅಥವಾ ಎರಡು ಸಿನಿಮಾಗಳನ್ನು ಮಾಡುವ ವಿಜಯ್ ಸಿನಿಮಾ ಒಂದಕ್ಕೆ ನೂರು ಕೋಟಿಗೂ ಹೆಚ್ಚು ಸಂಭಾವನೆ (Remuneration) ಪಡೆಯುತ್ತಾರೆ. ಸಂಭಾವನೆಗೆ ತಕ್ಕಂತೆ ಅವರ ಸಿನಿಮಾಗಳು ಗಳಿಕೆಯನ್ನೂ ಮಾಡುತ್ತವೆ. ನೂರು ಕೋಟಿ ಕಲೆಕ್ಷನ್ ಎಂಬುದು ವಿಜಯ್ಗೆ ತೀರ ಸುಲಭ. ಪ್ರತಿ ಸಿನಿಮಾಕ್ಕೆ ಕೋಟ್ಯಂತರ ಸಂಭಾವನೆ ಪಡೆವ ವಿಜಯ್ರ ವಾರ್ಷಿಕ ಆದಾಯ ಎಷ್ಟು?
ಭಾರತದಲ್ಲಿ ದೊಡ್ಡ ತಾರಾಮೌಲ್ಯ ಇರುವ ನಟರಲ್ಲಿ ವಿಜಯ್ ಸಹ ಒಬ್ಬರು. ವಿಜಯ್ರ ನೆಟ್ವರ್ತ್ 2023 ರಲ್ಲಿ ಸುಮಾರು 500 ಕೋಟಿಗೂ ಹೆಚ್ಚು ಎನ್ನಲಾಗುತ್ತದೆ. ಸಿನಿಮಾಗಳ ಹೊರತಾಗಿ ಇತರೆ ಉದ್ಯಮಗಳಲ್ಲಿಯೂ ಹಣ ತೊಡಗಿಸಿರುವ ವಿಜಯ್ರ ವಾರ್ಷಿಕ ಆದಾಯ ಸುಮಾರು 300 ಕೋಟಿ ರೂಪಾಯಿಗಳು. ಈ ಹಣವನ್ನು ಇತರೆ ಉದ್ಯಮಗಳ ಜೊತೆಗೆ ಸಾಮಾಜಿಕ ಕಾರ್ಯಗಳಿಗೂ ವಿಜಯ್ ಬಳಸುತ್ತಾರೆ. ಕಷ್ಟದಲ್ಲಿರುವ ಅಭಿಮಾನಿಗಳಿಗೆ ಸಹಾಯ ಮಾಡುತ್ತಾರೆ. ವಿದ್ಯಾರ್ಥಿಗಳ ಬಗ್ಗೆ ವಿಶೇಷ ಅಕ್ಕರೆ ಇರುವ ವಿಜಯ್ ವಿದ್ಯಾರ್ಥಿ ನಿಧಿಯನ್ನು ಸ್ಥಾಪಿಸಿ ಅಂಗವಿಕಲ ವಿದ್ಯಾರ್ಥಿಗಳಿಗೆ ಹಾಗೂ ರಾಜ್ಯದ ಪ್ರತಿಭಾವಂತ ಮಕ್ಕಳಿಗೆ ಧನ ಸಹಾಯ ಮಾಡುತ್ತಾ ಬಂದಿದ್ದಾರೆ.
ಕಾರ್ಯಕ್ರಮಗಳಲ್ಲಿ ಸರಳವಾಗಿ ಕಾಣಿಸಿಕೊಳ್ಳುವ, ಸರಳವಾದ ಭೋಜನ ಇಷ್ಟಪಡುವ ವಿಜಯ್ ಐಶಾರಾಮಿ ಕಾರುಗಳನ್ನೇ ಹೊಂದಿದ್ದಾರೆ. ವಿಜಯ್ ಬಳಿ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿದೆ. ಈ ಕಾರಿನ ತೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಛೀಮಾರಿ ಹಾಕಿದ್ದು ನೆನಪಿರಬಹುದು. ಬಿಎಂಡಬ್ಲು 5 ಸೀರೀಸ್ ಕಾರು, ಫೋರ್ಡ್ ಮಸ್ತಾಂಗ್, ಆಡಿ ಎ8, ಬಿಎಂಡಬ್ಲು 7 ಸೀರೀಸ್, ಬಿಎಂಡಬ್ಲು ಎಕ್ಸ್ 6, ಬೆಂಜ್ ಜಿಎಲ್ಎ, ವೋಲ್ವೋ ಎಕ್ಸಿ 90, ಮಿನಿ ಕೂಪರ್, ನಿಸ್ಸಾನ್, ಟೊಯೊಟಾ ಇನ್ನೋವಾ ಹಾಗೂ ವೆಲ್ಫೈರ್ ಕಾರುಗಳು ಸಹ ಇವೆ.
ಇದನ್ನೂ ಓದಿ:Vijay Devarakonda: ಏಕಕಾಲಕ್ಕೆ ಮೂರು ಸಿನಿಮಾಗಳಲ್ಲಿ ಬ್ಯುಸಿ ಆದ ಟಾಲಿವುಡ್ ನಟ ವಿಜಯ್ ದೇವರಕೊಂಡ
ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿರುವ ವಿಜಯ್ ವಾಸಕ್ಕೆ ಅದ್ಭುತವಾದ ಮನೆ ನಿರ್ಮಿಸಿಕೊಂಡಿದ್ದಾರೆ. ಅದರಲ್ಲಿಯೂ ಹಾಲಿವುಡ್ ನಟ ಟಾಮ್ ಕ್ರೂಸ್ರ ಅಮೆರಿಕದಲ್ಲಿರು ಬೀಚ್ ಸೈಡ್ ಬಂಗ್ಲೆ ನೋಡಿ ಸ್ಪೂರ್ತಿ ಪಡೆದು ಅದೇ ಮಾದರಿಯ ಮನೆಯನ್ನು ವಿಜಯ್ ಕಟ್ಟಿಸಿಕೊಂಡಿದ್ದಾರೆ. ವಿಜಯ್ರ ಸೀಸೈಡ್ ಬಂಗ್ಲೆ ಚೆನ್ನೈನ ಕಾಸುವರೈನ್ ಡ್ರೈವ್ ರಸ್ತೆಯಲ್ಲಿದೆ. 2020 ರಲ್ಲಿ ವಿಜಯ್ರ ಇದೇ ಮನೆಯ ಮೇಲೆ ಹಾಗೂ ಇನ್ನೂ ಕೆಲವೆಡೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು.
ವಿಜಯ್ ತಮ್ಮ 49ನೇ ಹುಟ್ಟುಹಬ್ಬ ಜೂನ್ 22 ರಂದು ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಇದೇ ದಿನ ಅವರ ನಟನೆಯ ಹೊಸ ಸಿನಿಮಾ ಲಿಯೋದ ಲುಕ್ ಹಾಗೂ ಟೀಸರ್ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಲಿಯೋ ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ವಿಜಯ್ಗಾಗಿ ಮಾಸ್ಟರ್ ಸಿನಿಮಾವನ್ನು ಲೋಕೇಶ್ ನಿರ್ದೇಶನ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:00 am, Thu, 22 June 23