ಭಾರತದ ಹಲವು ರಾಜ್ಯಗಳು ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಭಾರೀ ತೊಂದರೆ ಅನುಭವಿಸಿವೆ. ಆರಂಭದಲ್ಲಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿ ಅಬ್ಬರ ತೋರಿದ್ದ ಈ ಚಂಡಮಾರುತ ನಂತರ ಮಹಾರಾಷ್ಟ್ರದತ್ತ ತಿರುಗಿತ್ತು. ಅಲ್ಲಿ ಈ ಚಂಡಮಾರುತ ಸಾಕಷ್ಟು ಹಾನಿ ಉಂಟು ಮಾಡಿದೆ. ಈ ವೇಳೆ ಸಲ್ಮಾನ್ ಖಾನ್ ನಟನೆಯ ಟೈಗರ್ 3 ಸಿನಿಮಾ ಸೆಟ್ ಕೂಡ ಹಾನಿಗೆ ಒಳಗಾಗಿದೆ.
ಮುಂಬೈನಲ್ಲಿ ಸಹ ತೌಕ್ತೆ ಅಬ್ಬರ ಹೆಚ್ಚಿತ್ತು. ಈ ಚಂಡಮಾರುತಕ್ಕೆ ಮಹಾರಾಷ್ಟ್ರದಲ್ಲಿ ಈಗಾಗಲೇ 6 ಮಂದಿ ಸಾವನ್ನಪ್ಪಿದ್ದು, 9 ಜನರು ಗಾಯಗೊಂಡಿದ್ದಾರೆ. ಅನೇಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಕೆಲಸವನ್ನು ಸರ್ಕಾರ ಮಾಡಿದೆ. ಟೈಗರ್-3 ಸೆಟ್ ಕೂಡ ಈ ಚಂಡಮಾರುತದ ಅಬ್ಬರಕ್ಕೆ ಸಿಲುಕಿದೆ.
ಗೋರೆಗಾಂವ್ನಲ್ಲಿರುವ ಸ್ಟುಡಿಯೋದಲ್ಲಿ ದುಬೈ ಮಾರುಕಟ್ಟೆಯ ಸೆಟ್ ಒಂದನ್ನು ಹಾಕಲಾಗಿತ್ತು. ಕೆಲವು ದೃಶ್ಯಗಳನ್ನು ಇಲ್ಲಿ ಶೂಟ್ ಕೂಡ ಮಾಡಲಾಗಿತ್ತು. ಆದರೆ, ಕೊವಿಡ್ನಿಂದಾಗಿ ಶೂಟಿಂಗ್ ಅರ್ಧಕ್ಕೆ ನಿಂತಿದೆ. ಆದರೆ, ಈಗ ಚಂಡಮಾರುತದ ಅಬ್ಬರಕ್ಕೆ ಸೆಟ್ ಕುಸಿದಿದೆ. ಈ ವೇಳೆ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ ಎಂದು ತಿಳಿದು ಬಂದಿದೆ.
ಅಜಯ್ ದೇವಗನ್ ನಟನೆಯ ಮೈದಾನ್ ಸಿನಿಮಾದ ಸೆಟ್ ಮುಂಬೈನ ಹೊರಭಾಗದಲ್ಲಿ ನಿರ್ಮಾಣ ಮಾಡಲಾಗಿತ್ತು. ಇದು ಕೂಡ ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಕ್ಕು ನಾಶವಾಗಿದೆ. ಇದರ ಜತೆಗೆ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದ ಸೆಟ್ ಸ್ವಲ್ಪವೇ ಹಾನಿಗೆ ಒಳಗಾಗಿದೆ. ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಕಳೆದ ವರ್ಷ ಸೆಟ್ ಅನ್ನು ಸಂಪೂರ್ಣವಾಗಿ ಮುಚ್ಚಿದ್ದರು. ಈ ಮೂಲಕ ಚಂಡಮಾರುತದಂತೆ ಸಮಸ್ಯೆ ಎದುರಾದರೆ ಅದನ್ನು ರಕ್ಷಿಸಬಹುದು ಎಂಬುದು ಅವರ ಪ್ಲ್ಯಾನ್ ಆಗಿತ್ತು.
ಕೊವಿಡ್ ಕಾರಣದಿಂದ ಮಹಾರಾಷ್ಟ್ರದಲ್ಲಿ ಶೂಟಿಂಗ್ ಸಂಪೂರ್ಣವಾಗಿ ನಿಂತಿದೆ. ಜೂನ್ ವೇಳೆಗೆ ಮತ್ತೆ ಶೂಟಿಂಗ್ ಆರಂಭಿಸುವ ಆಲೋಚನೆ ಚಿತ್ರತಂಡದ್ದಾಗಿತ್ತು. ಆದರೆ, ಈಗ ಸೈಕ್ಲೋನ್ ಕಾರಣದಿಂದ ಸಾಕಷ್ಟು ಸೆಟ್ಗಳು ಹಾನಿಗೆ ಒಳಗಾಗಿದ್ದು, ಶೂಟಿಂಗ್ ಮತ್ತೆ ವಿಳಂಬವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Salman Khan: ಕಳಪೆ ವಿಮರ್ಶೆ ಸಿಕ್ಕರೂ ದಾಖಲೆ ಬರೆದ ‘ರಾಧೆ’; ಒಟಿಟಿಯಲ್ಲಿ ಸಲ್ಮಾನ್ ಖಾನ್ ಹೊಸ ರೆಕಾರ್ಡ್
Radhe: ಸಲ್ಮಾನ್ ಖಾನ್ ಬಾಡಿ ಡಬಲ್ ಕಲಾವಿದನ ಫೋಟೋ ವೈರಲ್; ಫ್ಯಾನ್ಸ್ಗೆ ಅಚ್ಚರಿಯೋ ಅಚ್ಚರಿ