‘ತೆಲುಗು ಬಿಗ್ ಬಾಸ್ ಸೀಸನ್ 6’ ಪೂರ್ಣಗೊಂಡಿದೆ. ಗಾಯಕ ಎಲ್.ವಿ. ರೇವಂತ್ (LV Revanth) ಅವರು ಟ್ರೋಫಿ ಗೆದ್ದಿದ್ದಾರೆ. ಕನ್ನಡದ ಕೀರ್ತಿ ಭಟ್ ಅವರು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಶೋನ ನಡೆಸಿಕೊಟ್ಟಿದ್ದು ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರು. ಈಗ ಅವರು ಆಡಿದ ಮಾತಿನಿಂದ ಫ್ಯಾನ್ಸ್ಗೆ ಬೇಸರ ಶುರುವಾಗಿದೆ. ಅವರು ಬಿಗ್ ಬಾಸ್ ತೊರೆಯೋದು ಖಚಿತ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಆಗುತ್ತಿವೆ.
ತೆಲುಗಿನಲ್ಲಿ ಮೊದಲು ‘ಬಿಗ್ ಬಾಸ್ ಒಟಿಟಿ’ ಆರಂಭ ಆಯಿತು. ಆ ಬಳಿಕ ಟಿವಿ ಸೀಸನ್ ಶುರುವಾಯಿತು. 21 ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರಿದ್ದರು. ಇದರಲ್ಲಿ ಸಾಕಷ್ಟು ಜನಪ್ರಿಯತೆ ಪಡೆದ ಸ್ಪರ್ಧಿಗಳು ಇರಲಿಲ್ಲ. ಈ ಕಾರಣಕ್ಕೆ ಶೋಗೆ ಹೇಳಿಕೊಳ್ಳುವಂತಹ ಟಿಆರ್ಪಿ ಸಿಕ್ಕಿಲ್ಲ. ಇನ್ನು, ತೆಲುಗು ಮಂದಿಗೆ ಅಕ್ಕಿನೇನಿ ನಾಗಾರ್ಜುನ ಅವರ ನಿರೂಪಣೆ ದಿನಕಳೆದಂತೆ ಸಪ್ಪೆ ಎನಿಸತೊಡಗಿದೆ. ಈ ಕಾರಣಕ್ಕೆ ಮುಂದಿನ ವರ್ಷದಿಂದ ನಿರೂಪಕರು ಬದಲಾಗಲಿದ್ದಾರೆ ಎಂದು ವರದಿ ಆಗಿತ್ತು. ಈಗ ಬಿಗ್ ಬಾಸ್ ಫಿನಾಲೆ ವೇಳೆ ಅಕ್ಕಿನೇನಿ ನಾಗಾರ್ಜುನ ಆಡಿದ ಮಾತುಗಳನ್ನು ಇದಕ್ಕೆ ಲಿಂಕ್ ಮಾಡಲಾಗುತ್ತಿದೆ.
ಈ ಮೊದಲು ನಾಗಾರ್ಜುನ ಅವರು ಸಖತ್ ಜೋಶ್ನಲ್ಲಿ ಶೋ ಪೂರ್ಣಗೊಳಿಸುತ್ತಿದ್ದರು. ‘ಈ 100 ದಿನಗಳ ಪಯಣ ಅದ್ಭುತವಾಗಿತ್ತು. ಇದು ಸೈನ್ ಆಫ್ ಮಾಡುವ ಸಮಯ. ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡುತ್ತೇವೆ. ನಾನು ನಾಗಾರ್ಜುನ’ ಎಂದು ಶೋ ಮುಗಿಸುತ್ತಿದ್ದರು. ಆದರೆ, ಈ ಬಾರಿ ಆ ರೀತಿ ಹೇಳಿಲ್ಲ. ‘ದಾಟ್ಸ್ ಆಲ್, ಗುಡ್ ನೈಟ್’ ಎಂದು ಶೋನ ಅಂತ್ಯ ಮಾಡಿದ್ದಾರೆ. ನಾಗಾರ್ಜುನ ಅವರ ಈ ಮಾತು ಫ್ಯಾನ್ಸ್ ಬೇಸರಕ್ಕೆ ಕಾರಣ ಆಗಿದೆ.
ರೇವಂತ್ ವಿನ್ನರ್
ಭಾನುವಾರ (ಡಿಸೆಂಬರ್ 18) ಬಿಗ್ ಬಾಸ್ ಫಿನಾಲೆ ನಡೆದಿದೆ. ಎಲ್.ವಿ. ರೇವಂತ್, ಶ್ರೀಹಾನ್, ಆದಿ ರೆಡ್ಡಿ, ಕೀರ್ತಿ ಭಟ್ ಹಾಗೂ ರೋಹಿತ್ ಸಾಹ್ನಿ ಫಿನಾಲೆ ತಲುಪಿದ್ದರು. ಹೆಚ್ಚು ವೋಟ್ ಪಡೆದು ರೇವಂತ್ ಗೆದ್ದಿದ್ದಾರೆ. ಅವರಿಗೆ ಟ್ರೋಫಿ ಜತೆ 10 ಲಕ್ಷ ರೂಪಾಯಿ ನಗದು, 25 ಲಕ್ಷ ರೂಪಾಯಿ ಮೌಲ್ಯದ ಪ್ರಾಪರ್ಟಿ ಹಾಗೂ ಕಾರು ಬಹುಮಾನವಾಗಿ ಸಿಕ್ಕಿದೆ.
ರೇವಂತ್ ಅವರು ವೃತ್ತಿಯಲ್ಲಿ ಗಾಯಕ. ಅವರು ಕನ್ನಡ ಹಾಗೂ ತಮಿಳು ಹಾಡುಗಳನ್ನು ಹಾಡಿದ್ದಾರೆ. ‘ಇಂಡಿಯನ್ ಐಡಲ್ 9’ರ ವಿನ್ನರ್ ಕೂಡ ಹೌದು. ‘ಬಾಹುಬಲಿ 1’ ಚಿತ್ರದ ‘ಮನೋಹರಿ..’ ಹಾಡನ್ನು ಇವರೇ ಹಾಡಿದ್ದರು. ‘ಕಾಫಿ ವಿಥ್ ಮೈ ವೈಫ್’ ಸೇರಿ ಕೆಲವು ಕನ್ನಡದ ಸಿನಿಮಾದ ಹಾಡುಗಳಿಗೆ ಅವರು ಧ್ವನಿಯಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ