ಧಮ್ಕಿಗಳಿಗೆ ಬಗ್ಗದೇ ‘ಸೂರ್ಯವಂಶ’ ಧಾರಾವಾಹಿ ಶುರು ಮಾಡಿದ ಅನಿರುದ್ಧ್; ಉದಯ ಟಿವಿಯಲ್ಲಿ ಪ್ರಸಾರ
ಉದಯ ಟಿವಿಯಲ್ಲಿ ‘ಸೂರ್ಯವಂಶ’ ಧಾರಾವಾಹಿ ಮಾರ್ಚ್ 11ರಿಂದ ಪ್ರಸಾರ ಆರಂಭಿಸಲಿದೆ. ಸೋಮವಾರದಿಂದ ಶನಿವಾರದ ತನಕ ಪ್ರತಿ ರಾತ್ರಿ 8 ಗಂಟೆಗೆ ಈ ಸೀರಿಯಲ್ ಬಿತ್ತರ ಆಗಲಿದೆ. ಪದ್ಮನಾಭ್ ಅವರು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಪ್ರೋಮೋ ನೋಡಿದ ವೀಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದವರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ನಟ ಅನಿರುದ್ಧ್ ಜತ್ಕರ್ (Anirudh Jatkar) ಅವರು ಈ ಮೊದಲು ‘ಜೊತೆಜೊತೆಯಲಿ’ ಸೀರಿಯಲ್ನಿಂದ ಹೊರಬಂದಾಗ ಕೆಲವು ಕಾಂಟ್ರವರ್ಸಿ ಎದುರಾಗಿದ್ದವು. ಅನಿರುದ್ಧ್ ಅವರನ್ನು ಕಿರುತೆರೆಯಿಂದ ಬ್ಯಾನ್ ಮಾಡಬೇಕು ಎಂಬ ಮಾತುಗಳು ಕೇಳಿಬಂದಿದ್ದವು. ಬೇರೆ ಸೀರಿಯಲ್ ಮೂಲಕ ಅನಿರುದ್ಧ್ ಅವರು ಮತ್ತೆ ಪ್ರೇಕ್ಷಕರ ಎದುರು ಬರಬೇಕು ಎಂಬ ನಿರ್ಧಾರ ಮಾಡಿದಾಗ ಕೆಲವರು ಧಮ್ಕಿ ಹಾಕುವ ಪ್ರಯತ್ನ ಮಾಡಿದ್ದರು. ಆ ಬಗ್ಗೆ ಅನಿರುದ್ಧ್ ಅವರು ಮಾತನಾಡಿದ್ದಾರೆ. ‘ಸೂರ್ಯವಂಶ’ (Suryavamsha) ಧಾರಾವಾಹಿ ಮೂಲಕ ಅನಿರುದ್ಧ್ ಅವರು ಮತ್ತೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ‘ಉದಯ ಟಿವಿ’ (Udaya Tv) ಮೂಲಕ ಈ ಸೀರಿಯಲ್ ಪ್ರಸಾರ ಆಗಲಿದೆ. ಇಂದು (ಮಾರ್ಚ್ 6) ‘ಸೂರ್ಯವಂಶ’ ಸೀರಿಯಲ್ ತಂಡದವರು ಸುದ್ದಿಗೋಷ್ಠಿ ನಡೆಸಿದ್ದಾರೆ.
ಎಸ್. ನಾರಾಯಣ್ ಅವರ ನಿರ್ದೇಶನದಲ್ಲಿ ‘ಸೂರ್ಯವಂಶ’ ಸೀರಿಯಲ್ ಈ ಮೊದಲೇ ಸೆಟ್ಟೇರಬೇಕಿತ್ತು. ಆದರೆ ಕಾರಣಾಂತರಗಳಿಂದ ತಂಡ ಬದಲಾಯಿತು. ಈ ಬದಲಾದ ತಂಡದ ಜೊತೆ ಅನಿರುದ್ಧ್ ಅವರು ಕೈ ಜೋಡಿಸಿದ್ದಾರೆ. ಹರಿಸಂತು ಅವರು ಈ ಸೀರಿಯಲ್ನ ಪ್ರಧಾನ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ. ಸಂಚಿಕೆ ನಿರ್ದೇಶನದ ಜವಾಬ್ದಾರಿಯನ್ನು ಪ್ರಕಾಶ್ ಮುಚ್ಚಳಗುಡ್ಡ ಅವರು ನಿಭಾಯಿಸುತ್ತಿದ್ದಾರೆ. ಮಾರ್ಚ್ 11ರಿಂದ ಸೋಮವಾರದಿಂದ ಶನಿವಾರದ ತನಕ ಪ್ರತಿ ರಾತ್ರಿ 8 ಗಂಟೆಗೆ ಉದಯ ಟಿವಿಯಲ್ಲಿ ‘ಸೂರ್ಯವಂಶ’ ಸೀರಿಯಲ್ ಪ್ರಸಾರ ಆಗಲಿದೆ.
ತಮ್ಮ ವಿರುದ್ಧದ ಪಿತೂರಿ ಬಗ್ಗೆ ಅನಿರುದ್ಧ್ ಮೌನ ಮುರಿದಿದ್ದಾರೆ. ‘ನಮ್ಮ ನಿರ್ಮಾಪಕರಿಗೆ ಕರೆ ಬಂದಿಲ್ಲವೇನೋ. ಬಂದಿದ್ದರೂ ಅವರು ಹೇಳದೇ ಇರಬಹುದು. ಆದರೆ ಉದಯ ವಾಹಿನಿಯವರಿಗೆ ಅನೇಕ ಕರೆಗಳು ಬಂದಿವೆ. ಈ ಚಾನೆಲ್ ಉತ್ತುಂಗದಲ್ಲಿ ಇದ್ದಾಗ ಬೇರೆ ಚಾನೆಲ್ಗಳು ಹುಟ್ಟಿಯೇ ಇರಲಿಲ್ಲ. ಅದು ಉದಯ ವಾಹಿನಿಯ ಶಕ್ತಿ. ಅದು ಅವರಿಗೂ ಗೊತ್ತಿದೆ. ಯಾರು ಎಷ್ಟೇ ಕರೆಗಳು ಮಾಡಿದರೂ ಕೂಡ ಕಚೇರಿಗೆ ಬನ್ನಿ ಮಾತನಾಡೋಣ ಅಂತ ಉದಯ ಟಿವಿ ಅವರು ಹೇಳಿದರು. ಆದರೆ ಯಾರೂ ಮಾತನಾಡಲು ಬರಲಿಲ್ಲ’ ಎಂದು ಅನಿರುದ್ಧ್ ಹೇಳಿದ್ದಾರೆ. ಈ ಮೊದಲು ಎಸ್. ನಾರಾಯಣ್ ಅವರ ಬಳಿಯೂ ಹೋಗಿ ‘ಅನಿರುದ್ಧ್ ಅವರನ್ನು ಆಯ್ಕೆ ಮಾಡಿಕೊಳ್ಳಬೇಡಿ’ ಅಂತ ಕೆಲವರು ಪಿತೂರಿ ಮಾಡಿದ್ದರು. ‘ಅಂಥವರಿಗೆ ಎಸ್. ನಾರಾಯಣ್ ಸೂಕ್ತ ಉತ್ತರ ನೀಡಿದ್ದರು. ಆ ಬಳಿಕ ಬೇರೆ ಯಾರೂ ಮಾತನಾಡಲು ಬರಲಿಲ್ಲ’ ಎಂದಿದ್ದಾರೆ ಅನಿರುದ್ಧ್.
ಇದನ್ನೂ ಓದಿ: ಭಾರತಿ ವಿಷ್ಣುವರ್ಧನ್ ಜೀವನದ ಕುರಿತ ಸಾಕ್ಷ್ಯಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಅನಿರುದ್ಧ್ ಜತ್ಕರ್
ಹಿರಿಯ ನಟ ಸುಂದರ್ ರಾಜ್ ಅವರು ಈ ಸೀರಿಯಲ್ನಲ್ಲಿ ಸತ್ಯಮೂರ್ತಿ ಎಂಬ ಪಾತ್ರ ಮಾಡುತ್ತಿದ್ದಾರೆ. ಕಥಾನಾಯಕನ ತಾತನಾಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ‘ನಮ್ಮ ಮನೆಯಲ್ಲಿ ನಾವು ಮಗನನ್ನು ಕಳೆದುಕೊಂಡು ಮೊಮ್ಮಗನನ್ನು ಪಡೆದುಕೊಂಡೆವು. ಈ ಧಾರಾವಾಹಿಯಲ್ಲಿ ಕೂಡ ಇದೇ ರೀತಿಯ ಕಥೆ ಇದೆ. ಈ ಪಾತ್ರ ಒಪ್ಪಿಕೊಳ್ಳುವಾಗ ಉತ್ತಮ ಗುಣಮಟ್ಟದಲ್ಲಿ ಸೀರಿಯಲ್ ಮೂಡಿಬರಬೇಕು ಎಂದು ನಾನು ಷರತ್ತು ಹಾಕಿದ್ದೆ. ಅದಕ್ಕೆ ತಕ್ಕಂತೆಯೇ ನಿರ್ಮಾಪಕರು ಅದ್ದೂರಿಯಾಗಿ ಸೀರಿಯಲ್ ನಿರ್ಮಾಣ ಮಾಡುತ್ತಿದ್ದಾರೆ’ ಎಂದು ಸುಂದರ್ ರಾಜ್ ಹೇಳಿದ್ದಾರೆ. ವಿಕ್ರಂ ಉದಯ್ಕುಮಾರ್, ರವಿ ಭಟ್, ಸುಂದರಶ್ರೀ, ಪುಷ್ಪಾ ಬೆಳವಾಡಿ, ಲೋಕೇಶ್ ಬಸವಟ್ಟಿ ಮುಂತಾದ ಕಲಾವಿದರು ಈ ಸೀರಿಯಲ್ನಲ್ಲಿ ನಟಿಸುತ್ತಿದ್ದಾರೆ.
‘ಸೂರ್ಯವಂಶ’ ಧಾರಾವಾಹಿಯಲ್ಲಿ ನಾಯಕಿಯಾಗಿ ಅಶ್ವಿನಿ ನಟಿಸುತ್ತಿದ್ದಾರೆ. ಈ ಸೀರಿಯಲ್ನ ಪ್ರೋಮೋಗಳು ಅದ್ದೂರಿಯಾಗಿ ಮೂಡಿಬಂದಿರುವ ಬಗ್ಗೆ ಅವರು ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಿರ್ಮಾಪಕರಿಗೆ ಧನ್ಯವಾದ ತಿಳಿಸಿದ್ದಾರೆ. ತನ್ವಿ ಕ್ರಿಯೇಷನ್ಸ್ ಮೂಲಕ ಪದ್ಮನಾಭ್ ಅವರು ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ನಾನು ಈ ಹಿಂದೆ ನಿರ್ಮಾಣ ಮಾಡಿದ ಮೂರು ಸಿನಿಮಾಗಳ ಪ್ರಸಾರ ಹಕ್ಕುಗಳನ್ನು ಉದಯ ಟಿವಿ ಅವರಿಗೆ ನೀಡಿದ್ದೇನೆ. ಈ ವಾಹಿನಿ ನನಗೆ ಗಾಡ್ಫಾದರ್ ಇದ್ದಂಗೆ. ಈ ಚಾನೆಲ್ನಿಂದ ಸೂರ್ಯವಂಶ ಸೀರಿಯಲ್ ನಿರ್ಮಾಣ ಮಾಡುವ ಅವಕಾಶ ಸಿಕ್ಕಾಗ ಅದನ್ನು ನಾನು ಖುಷಿಯಿಂದ ಒಪ್ಪಿಕೊಂಡೆ’ ಎಂದು ನಿರ್ಮಾಪಕ ಪದ್ಮನಾಭ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.