ಅವರು ತಪ್ಪು ಮಾಡಲಿಲ್ಲ, ಪಾಪ ಮಾಡಿದ್ದಾರೆ: ಅನಿರುದ್ಧ್ ಬೇಸರ
Anirudh Jatkar: ‘ಜೊತೆ-ಜೊತೆಯಲಿ’ ಧಾರಾವಾಹಿಯ ನಿರ್ದೇಶಕ ಜಗದೀಶ್ ಆರೂರು ನಟ ಅನಿರುದ್ಧ್ ವಿರುದ್ಧ ಅಶಿಸ್ತಿನ ಆರೋಪ ಹೊರಿಸಿ, ಅವರ ಮೇಲೆ ನಿಷೇಧ ಹೇರುವಂತೆ ಮಾಡಿದ್ದರು. ಆ ಘಟನೆ ಬಗ್ಗೆ ನಟ ಅನಿರುದ್ಧ್ ಬೇಸರಿಂದ ಮಾತನಾಡಿದ್ದಾರೆ.
ನಟ ಅನಿರುದ್ಧ್ (anirudh jatkar) ‘ಜೊತೆ-ಜೊತೆಯಲಿ’ ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಸಿನಿಮಾ ನಟರಿಗೆ ದೊರಕಿದಷ್ಟೆ ಅದ್ಭುತ ಸ್ವಾಗತ ಅನಿರುದ್ಧ್ಗೆ ಆ ಧಾರಾವಾಹಿಯಿಂದ ದೊರಕಿತ್ತು. ಧಾರಾವಾಹಿಗೆ ಪ್ರೇಕ್ಷಕರ ಮೆಚ್ಚುಗೆ ಪ್ರಾಪ್ತವಾಗಿತ್ತು. ಆದರೆ ಧಾರಾವಾಹಿಯ ನಿರ್ದೇಶಕ, ನಿರ್ಮಾಪಕ ಆರೂರು ಜಗದೀಶ್ ಹಾಗೂ ಅನಿರುದ್ಧ್ ನಡುವೆ ಮನಸ್ಥಾಪಗಳು ಉಂಟಾದವು. ಈ ಮನಸ್ಥಾಪಗಳಿಂದಾಗಿ ಅನಿರುದ್ಧ್ ಧಾರಾವಾಹಿಯಿಂದ ಹೊರಗೆ ಬರಬೇಕಾಯ್ತು. ಅದಾದ ಕೆಲವು ಎಪಿಸೋಡ್ಗಳ ಬಳಿಕ ಧಾರಾವಾಹಿಯೂ ನಿಂತು ಹೋಯ್ತು. ಇದೀಗ ಅನಿರುದ್ಧ್ ಹೊಸ ಧಾರಾವಾಹಿ ಪ್ರಾರಂಭಿಸುತ್ತಿದ್ದಾರೆ. ಆದರೆ ‘ಜೊತೆ-ಜೊತೆಯಲಿ’ ಧಾರಾವಾಹಿ ತಂಡದಿಂದಾದ ಬೇಸರವನ್ನು ಅವರು ಮರೆತಿಲ್ಲ.
‘ಆ ಘಟನೆ ನಡೆದಾಗಿನಿಂದಲೂ ನಾನು ಡಿಸ್ಟರ್ಬ್ಡ್ ಆಗಿದ್ದೀನಿ, ನನ್ನ ಕುಟುಂಬಕ್ಕೆ ಗೊತ್ತಿದೆ, ನಾನು ಸರಿಯಾಗಿ ನಿದ್ದೆ ಸಹ ಮಾಡಿಲ್ಲ, ಈವರೆಗೂ ನನಗೆ ಅದು ಕಾಡುತ್ತಿದೆ. ಆ ಘಟನೆ ನಡೆದ ಬಗ್ಗೆ ಬಹಳ ಬೇಸರ ಇದೆ, ಹಾಗೆಂದು ನಾನು ನಿಂತಿಲ್ಲ. ಬೇಜಾರಿಗೆ ಹಾಗೆಂದು ನನ್ನನ್ನು ನಾನು ಚಟದಲ್ಲಿ ಮುಳುಗಿಸಿಕೊಂಡಿಲ್ಲ. ಬಿದ್ದಾಗ ಏಳಲೇ ಬೇಕು, ಬಿದ್ದುಕೊಂಡೇ ಇದ್ದರೆ ಏಳಲು ಆಗುವುದಿಲ್ಲ. ಆ ಘಟನೆ ನಡೆದ ಬಳಿಕ ತಕ್ಷಣ ಎದ್ದು ಕೆಲಸ ಮಾಡಲು ಪ್ರಾರಂಭಿಸಿದೆ. ಸ್ವಚ್ಛತೆಗಾಗಿ ನಾನು ಎಂಬ ಅಭಿಯಾನ ಮಾಡಿದೆ, ಪತ್ರಿಕೆಗೆ ಲೇಖನಗಳನ್ನು ಬರೆದೆ, ಈಗ ಒಂದು ಕಾದಂಬರಿ ಬರೀತಿದ್ದೀನಿ. ಸಿನಿಮಾದಲ್ಲಿ ನಟಿಸಿದೆ. ಭಾರತಿ ಅಮ್ಮನವರ ಬಗ್ಗೆ ಸಾಕ್ಷ್ಯಚಿತ್ರ ಮಾಡಿದೆ. ಆ ಸಾಕ್ಷ್ಯ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಹ ಸಿಕ್ಕಿತು. ಇದೆಲ್ಲದರ ನಡುವೆ ಬೇಸರವಂತೂ ಇದೆ. ಅವರೆಲ್ಲ ನನ್ನವರೇ ಆಗಿದ್ದರು, ಜಗಳ-ವಾದಗಳು ಸಾಮಾನ್ಯ, ಕುಟುಂಬದಲ್ಲಿ ಜಗಳ-ವಾದಗಳು ಇದ್ದೇ ಇರುತ್ತವೆ. ಆದರೆ ಅದನ್ನೇ ದೊಡ್ಡದು ಮಾಡಿ ಬ್ಯಾನ್ ಮಾಡುವುದು ಎಲ್ಲ ಬೇಕಾಗಿರಲಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ:ಭಾರತಿ ವಿಷ್ಣುವರ್ಧನ್ ಆರೋಗ್ಯ ಹೇಗಿದೆ? ಅಪ್ಡೇಟ್ ಕೊಟ್ಟ ಅನಿರುದ್ಧ್
‘ಆ ಪಾತ್ರವನ್ನು ಮುಗಿಸೋಕೆ ಆಗಲಿಲ್ಲ ಎಂಬ ಸಂಕಟ ಇದೆ. ನಮ್ಮ ಜಗಳಗಳಿಂದ ಅಭಿಮಾನಿಗಳಿಗೆ ರಸಭಂಗ ಆಯ್ತು. ಪ್ರೇಕ್ಷಕರಿಗೆ ಅನ್ಯಾಯ ಮಾಡಿದ್ದೇವೆ. ಆ ಧಾರಾವಾಹಿ ಸಾಕಷ್ಟು ಕೊಟ್ಟಿದೆ, ಆ ಧಾರಾವಾಹಿಗೆ ಅನ್ಯಾಯ ಆಗಬಾರದಿತ್ತು. ಆ ಧಾರಾವಾಹಿ ವಾಹಿನಿಗೆ ಸಾಕಷ್ಟು ಕೊಡ್ತು, ನಿರ್ಮಾಣ ಸಂಸ್ಥೆಗೆ ಸಾಕಷ್ಟು ಕೊಟ್ಟಿತು. ಆದರೆ ಅದನ್ನು ನಾವು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಅವರು ತಪ್ಪು ಮಾಡಲಿಲ್ಲ, ಅಪರಾಧ ಮಾಡಲಿಲ್ಲ, ಪಾಪವನ್ನೇ ಮಾಡಿದ್ದಾರೆ. ಅವರ ಆ ನಡೆಯನ್ನು ನಾನು ಮರೆತಿಲ್ಲ, ಮರೆಯುವುದೂ ಇಲ್ಲ. ನನಗೆ ಈಗಲೂ ಆ ಬಗ್ಗೆ ಸಂಕಟ ಇದೆ. ಇವತ್ತಿನ ವರೆಗೆ ನನಗೆ ಕಾಡುತ್ತಿದೆ’ ಎಂದು ಬೇಸರ ಹೊರಹಾಕಿದ್ದಾರೆ ಅನಿರುದ್ಧ್.
ಇದೀಗ ತಾವು ನಟಿಸಲಿರುವ ಹೊಸ ಧಾರಾವಾಹಿ ‘ಸೂರ್ಯವಂಶ’ ಬಗ್ಗೆ ಮಾತನಾಡಿದ ನಟ ಅನಿರುದ್ಧ್, ‘ಪ್ರೇಕ್ಷಕರಿಗೆ ನಮ್ಮಿಂದ ದೊಡ್ಡ ಅಪೇಕ್ಷೆ ಇದೆ. ತಂಡದ ಮೇಲೆಯೂ ಜವಾಬ್ದಾರಿ ಇದೆ. ವಾಹಿನಿ, ಧಾರಾವಾಹಿ ತಂಡ ಇದನ್ನು ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡುತ್ತಿದೆ. ಛಲದಿಂದ ಕೆಲಸ ನಡೀತಿದೆ. ‘ಸೂರ್ಯವಂಶ’ ಎಂದು ಧಾರಾವಾಹಿಗೆ ಹೆಸರಿಟ್ಟಿದ್ದೀವಿ, ಶೀರ್ಷಿಕೆಗೆ ತಕ್ಕಹಾಗೆ ಧಾರಾವಾಹಿ ಬರುತ್ತಿದೆ. ಧಾರಾವಾಹಿಯಲ್ಲಿ ನಾನು ಬೇರೆ-ಬೇರೆ ಆಯಾಮಗಳಿರುವ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಜೊತೆ-ಜೊತೆಯಲಿ ಧಾರಾವಾಹಿ ಯಲ್ಲಿ ನಟಿಸಬೇಕಾದರೆ ಭಿನ್ನ ಪಾತ್ರಗಳಲ್ಲಿ ನಟಿಸಿದ್ದೆ. ಸಿಗುತ್ತೊ-ಇಲ್ಲವೊ ಅಂದುಕೊಂಡಿದ್ದೆ, ಆದರೆ ಸಿಕ್ಕಿದೆ. ವಿವಿಧ ಆಯಾಮ ಇರುವ ಪಾತ್ರ ‘ಸೂರ್ಯವಂಶ’ ಸಿನಿಮಾದಲ್ಲಿದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ