ನಿಧಿ ಸುಬ್ಬಯ್ಯಗೆ ಬಿಗ್ ಬಾಸ್ ವೇದಿಕೆ ಮೇಲೆ ಕ್ಷಮೆ ಕೇಳಿದ ಅರವಿಂದ್
ಈ ವಿಚಾರದಲ್ಲಿ ಮಂಜು-ಅರವಿಂದ್ ಮಾತನಾಡುವಾಗ ನಿಧಿ ಮಧ್ಯ ಪ್ರವೇಶಿಸಿದ್ದರು. ಆಗ ಅರವಿಂದ್, ‘ನಾನು ಕ್ಯಾಪ್ಟನ್ ಜತೆ ಮಾತನಾಡುತ್ತಿದ್ದೇನೆ. ನೀವು ಸ್ವಲ್ಪ ಮುಚ್ಕೊಳಿ’ ಎಂದಿದ್ದರು.
ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ಕೆ.ಪಿ. ತಾವಾಗಿಯೇ ಯಾರ ತಂಟೆಗೂ ಹೋದವರಲ್ಲ. ಪ್ರತಿ ಬಾರಿ ಆಟವನ್ನು ಅವರು ಸ್ಪೋರ್ಟಿವ್ ಆಗಿ ತೆಗೆದುಕೊಳ್ಳುತ್ತಾರೆ. ಆದರೆ, ಜೂನ್ 29ರ ಎಪಿಸೋಡ್ನಲ್ಲಿ ಅವರು ಮೊದಲಿನ ಅರವಿಂದ್ ಆಗಿರಲಿಲ್ಲ. ಅವರು ಬಾಯ್ತಪ್ಪಿ ಶಬ್ದವೊಂದನ್ನು ಹೇಳಿದ್ದರು. ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಇದಕ್ಕೆ, ಅರವಿಂದ್ ಫಿನಾಲೆಯಲ್ಲಿ ಕ್ಷಮೆ ಕೇಳಿದ್ದಾರೆ.
ಬಿಗ್ ಬಾಸ್ ಸ್ಪರ್ಧಿಗಳಿಗೆ ಟಾಸ್ಕ್ ಒಂದನ್ನು ನೀಡಿದ್ದರು. ಇದರ ಅನುಸಾರ ಎರಡು ಟೀಂಗಳನ್ನು ಮಾಡಲಾಗಿತ್ತು. ಒಂದು ತಂಡಕ್ಕೆ ಅರವಿಂದ್ ಕ್ಯಾಪ್ಟನ್ ಆದರೆ, ಮತ್ತೊಂದು ಟೀಂಅನ್ನು ಮಂಜು ಮುನ್ನಡೆಸುತ್ತಿದ್ದರು. ಟಾಸ್ಕ್ ನಿಯಮದ ಅನುಸಾರ ಟಿಶ್ಯೂ ರೋಲ್ಗಳನ್ನು ಸ್ಟೋರ್ ರೂಮ್ನಿಂದ ತಂದು ಗುರುತಿಸಿದ ಜಾಗದಲ್ಲಿ ಒಂದರ ಮೇಲೆ ಒಂದನ್ನು ಎತ್ತರವಾಗಿ ನಿಲ್ಲಿಸಬೇಕಿತ್ತು. ಈ ಟಾಸ್ಕ್ ಆಡುವಾಗ ದಾರಿಯಲ್ಲಿ ಬಿದ್ದ ಟಿಶ್ಯುರೋಲ್ಗಳನ್ನು ನಿಧಿ ತೆಗೆದುಕೊಂಡಿದ್ದರು. ಇದು ಅರವಿಂದ್ ಕೋಪಕ್ಕೆ ಕಾರಣವಾಗಿತ್ತು.
ಈ ವಿಚಾರದಲ್ಲಿ ಮಂಜು-ಅರವಿಂದ್ ಮಾತನಾಡುವಾಗ ನಿಧಿ ಮಧ್ಯ ಪ್ರವೇಶಿಸಿದ್ದರು. ಆಗ ಅರವಿಂದ್, ‘ನಾನು ಕ್ಯಾಪ್ಟನ್ ಜತೆ ಮಾತನಾಡುತ್ತಿದ್ದೇನೆ. ನೀವು ಸ್ವಲ್ಪ ಮುಚ್ಕೊಳಿ’ ಎಂದಿದ್ದರು.
ನಂತರ ಅರವಿಂದ್ ಅವರು ಹೋಗಿ ನಿಧಿಗೆ ಕ್ಷಮೆ ಕೇಳಿದ್ದರು. ಆದರೆ, ನಿಧಿ ಇದನ್ನು ಒಪ್ಪಿರಲಿಲ್ಲ. ಇಬ್ಬರ ನಡುವೆ ಈ ವಿಚಾರಕ್ಕೆ ಮಾತಿನ ಚಕಮಕಿ ಏರ್ಪಟ್ಟಿತ್ತು. ‘ನೀವು ಏನು ಎಂಬುದು ನಂಗೆ ಗೊತ್ತು ಎಂದು ಪದೇಪದೇ ಹೇಳಿದ್ದೀರಿ. ಈ ಆಟದಿಂದ ನಾನು ಏನು ಎಂಬುದು ಗೊತ್ತಾಗುತ್ತದೆಯೇ? ನಾನು ಎಲ್ಲ ಬೈಗುಳಗಳನ್ನು ತೆಗೆದುಕೊಳ್ಳೋಕೆ ರೆಡಿ ಇಲ್ಲ. ನೀವು ಸಾರಿ ಎಂದು ಕೇಳುತ್ತೀರಿ. ಮತ್ತೆ ನನಗೆ ಕ್ಯಾರೆಕ್ಟರ್ ಇಲ್ಲ ಎಂದು ಹೇಳುತ್ತೀರಿ. ನನಗೆ ಕ್ಯಾರೆಕ್ಟರ್ ಇದೆ ಅರವಿಂದ್. ನಿಮಗೆ ಕ್ರೀಡಾಸ್ಫೂರ್ತಿ ಇಲ್ಲ. ಸೋಲನ್ನು ಒಪ್ಪಿಕೊಳ್ಳೋಕೆ ನಿನಗೆ ಆಗಲ್ಲ’ ಎಂದು ನಿಧಿ ಗರಂ ಆಗಿದ್ದರು. ಈ ವಿಚಾರ ವೀಕೆಂಡ್ನಲ್ಲೂ ಚರ್ಚೆಗೆ ಬಂದಿತ್ತು.
ಈಗ ಫಿನಾಲೆಗೂ ಮೊದಲು ಪತ್ರ ಬರೆಯೋಕೆ ಅವಕಾಶ ನೀಡಲಾಗಿತ್ತು. ಎಲ್ಲರೂ ಒಂದೊಂದು ಪತ್ರವನ್ನು ಬರೆದಿದ್ದರು. ಅರವಿಂದ್ ಅವರು ನಿಧಿಗೆ ಪತ್ರ ಬರೆದಿದ್ದರು. ‘ಹಾಯ್ ಗೆಳತಿ. ಬಿಗ್ ಬಾಸ್ ನೀಡಿರುವ ಈ ಅವಕಾಶವನ್ನು ನಿನ್ನಲ್ಲಿ ಕ್ಷಮೆ ಕೇಳಲು ಇಚ್ಛಿಸುತ್ತೇನೆ. ನಿನ್ನಲ್ಲಿ ಒಳ್ಳೆಯ ಸ್ನೇಹಿತೆ ಕಂಡಿದ್ದೇನೆ. ನನ್ನ ಮಾತು ನಿನಗೆ ನೋವುಂಟು ಮಾಡಿದೆ. ನೀನು ನೀಡಿದ ಸಲುಗೆ ದುರುಪಯೋಗ ಮಾಡಿಕೊಂಡ ಬೇಜಾರು ನನಗಿದೆ. ಎಲ್ಲಾ ಸಂದರ್ಭದಲ್ಲಿ ಸಲುಗೆಯಿಂದ ಮಾತನಾಡಬಾರದು ಎಂಬ ಅರಿವು ನನಗಾಗಿದೆ. ಈ ಸ್ನೇಹ ಜೀವನಪರ್ಯಂತ ಸಾಗಲಿ ಎಂದು ಕೇಳಿಕೊಳ್ಳುತ್ತೇನೆ’ ಎಂದು ಪತ್ರ ಬರೆದಿದ್ದಾರೆ ಅರವಿಂದ್.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ನಾಲ್ಕೇ ದಿನಕ್ಕೆ ಎರಡು ಲಕ್ಷ ಸಂಪಾದಿಸಿದ ಅರವಿಂದ್ ಕೆಪಿ