ನಟ ಚಂದನ್ ಕುಮಾರ್ (Chandan Kumar) ಅವರು ಕಿರುತೆರೆ ಮತ್ತು ಸಿನಿಮಾದಲ್ಲಿ ಗುರುತಿಸಿಕೊಂಡಿದ್ದಾರೆ. ತೆಲುಗಿನ ಧಾರಾವಾಹಿಯಲ್ಲೂ ಅವರು ನಟಿಸಿ ಫೇಮಸ್ ಆಗಿದ್ದಾರೆ. ‘ಶ್ರೀಮತಿ ಶ್ರೀನಿವಾಸ್’ (Srimathi Srinivas) ಧಾರಾವಾಹಿಯ ಶೂಟಿಂಗ್ ವೇಳೆ ಚಂದನ್ ಕುಮಾರ್ ಅವರ ಮೇಲೆ ಹಲ್ಲೆ (Assault on Chandan Kumar) ಆಗಿದೆ. ಸೀರಿಯಲ್ ತಂತ್ರಜ್ಞರ ಜೊತೆ ಚಂದನ್ ಕಿರಿಕ್ ಮಾಡಿಕೊಂಡಿದ್ದು ಅವರಿಗೆ ಕಪಾಳಮೋಕ್ಷ ಮಾಡಲಾಗಿದೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದು ಬಹಳ ದಿನಗಳಾಗಿದ್ದು, ಈಗ ಪ್ರಕರಣ ಬೆಳಕಿಗೆ ಬಂದಿದೆ.
ಯಾವ ಕಾರಣಕ್ಕಾಗಿ ಈ ಹಲ್ಲೆ ನಡೆದಿದೆ ಎಂಬುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಮೊದಲು ಚಂದನ್ ಅವರಿಂದ ಕ್ಯಾಮೆರಾಮ್ಯಾನ್ ಮೇಲೆ ಹಲ್ಲೆ ನಡೆಯಿತು. ಆ ಕಾರಣದಿಂದಲೇ ತಂತ್ರಜ್ಞರು ಚಂದನ್ ವಿರುದ್ಧ ತಿರುಗಿ ಬಿದ್ದರು ಎಂದು ಹೇಳಲಾಗುತ್ತಿದೆ. ಬಳಿಕ ಚಂದನ್ ಕ್ಷಮೆ ಕೇಳಿದರೂ ಕೂಡ ಅಲ್ಲಿದ್ದ ಯಾರೊಬ್ಬರೂ ಸಮಾಧಾನಗೊಂಡಿಲ್ಲ. ಪರಿಸ್ಥಿತಿ ಬಿಡಗಾಯಿಸಿದಾಗ ಕೈಕೈ ಮಿಲಾಯಿಸಿದ್ದಾರೆ.
ಹಲವು ವರ್ಷಗಳಿಂದ ಚಂದನ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾ ಮತ್ತು ಸೀರಿಯಲ್ ಎರಡೂ ಕ್ಷೇತ್ರದಲ್ಲಿ ಅವರು ಹೆಸರು ಗಳಿಸಿದ್ದಾರೆ. ಕನ್ನಡದ ‘ರಾಧಾ ಕಲ್ಯಾಣ’, ‘ಲಕ್ಷ್ಮೀ ಬಾರಮ್ಮ’ ಮುಂತಾದ ಧಾರಾವಾಹಿಯಿಂದ ಅವರು ಮನೆಮಾತಾಗಿದ್ದಾರೆ. ‘ಸಾವಿತ್ರಮ್ಮ ಗಾರಿ ಅಬ್ಬಾಯಿ’ ಮೂಲಕ ತೆಲುಗು ಕಿರುತೆರೆಗೂ ಚಂದನ್ ಕುಮಾರ್ ಎಂಟ್ರಿ ನೀಡಿದ್ದರು. ನಂತರ ‘ಶ್ರೀಮತಿ ಶ್ರೀನಿವಾಸ್’ ಧಾರಾವಾಹಿ ಒಪ್ಪಿಕೊಂಡರು. ಅದೇ ಸೀರಿಯಲ್ ಸೆಟ್ನಲ್ಲಿ ಅವರಿಗೆ ಕಪಾಳಮೋಕ್ಷ ಮಾಡಲಾಗಿದೆ.
ಸೀರಿಯಲ್ ಮಾತ್ರವಲ್ಲದೇ ಅನೇಕ ರಿಯಾಲಿಟಿ ಶೋಗಳಲ್ಲೂ ಚಂದನ್ ಭಾಗಿ ಆಗಿದ್ದಾರೆ. ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’, ‘ಬಿಗ್ ಬಾಸ್ ಕನ್ನಡ ಸೀಸನ್ 3’ ಶೋಗಳಲ್ಲಿ ಸ್ಪರ್ಧಿಸಿದ ಬಳಿಕ ಅವರ ಖ್ಯಾತಿ ಇನ್ನಷ್ಟು ಹೆಚ್ಚಿತು. ‘ಲವ್ ಯೂ ಆಲಿಯಾ’, ‘ಪ್ರೇಮ ಬರಹ’ ಮುಂತಾದ ಸಿನಿಮಾಗಳಲ್ಲಿ ಚಂದನ್ ನಟಿಸಿದ್ದಾರೆ. ಕಿರುತೆರೆ ನಟಿ ಕವಿತಾ ಗೌಡ ಜೊತೆ ಅವರು 2021ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆ ಸಂದರ್ಭದಲ್ಲಿ ತೆಲುಗು ಸೀರಿಯಲ್ನಿಂದ ಅವರು ಬ್ರೇಕ್ ಪಡೆದುಕೊಂಡಿದ್ದರು.
Published On - 8:58 am, Mon, 1 August 22