ಉಗ್ರಂ ಮಂಜು ಜೊತೆ ಚೈತ್ರಾ ಕುಂದಾಪುರ ಕಿರಿಕ್: ಬಿಗ್​ ಬಾಸ್ ಮೊದಲ ದಿನವೇ ರಂಪಾಟ

‘ಕಲರ್ಸ್​ ಕನ್ನಡ’ ಮತ್ತು ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ರಿಯಾಲಿಟಿ ಶೋ ವೀಕ್ಷಿಸಬಹುದು. ಆಟ ಆರಂಭವಾದ ಮೊದಲ ದಿನವೇ ಚೈತ್ರಾ ಕುಂದಾಪುರ ಅವರು ಕಿರಿಕ್​ ತೆಗೆದಿದ್ದಾರೆ. ಅವರಿಗೆ ಉಗ್ರಂ ಮಂಜು ಎಚ್ಚರಿಕೆ ನೀಡಿದ್ದಾರೆ. ಸ್ವರ್ಗ ವರ್ಸಸ್​ ನರಕ ಎಂಬ ಕಾನ್ಸೆಪ್ಟ್ ಇರುವುದರಿಂದ ಈ ಬಾರಿ ಬಿಗ್​ ಬಾಸ್​ ಭಿನ್ನವಾಗಿದೆ.

ಉಗ್ರಂ ಮಂಜು ಜೊತೆ ಚೈತ್ರಾ ಕುಂದಾಪುರ ಕಿರಿಕ್: ಬಿಗ್​ ಬಾಸ್ ಮೊದಲ ದಿನವೇ ರಂಪಾಟ
ಉಗ್ರಂ ಮಂಜು

Updated on: Sep 30, 2024 | 6:47 PM

ಬಿಗ್​ ಬಾಸ್​ ಎಂದರೆ ಅಲ್ಲಿ ಕಿತ್ತಾಟ ಸಹಜ. ಹಾಗಂತ, ಆರಂಭದ ದಿನಗಳಲ್ಲೇ ಅಷ್ಟೇನೂ ಕಿರಿಕ್​ ಆಗುವುದಿಲ್ಲ. ಆದರೆ ಈ ಬಾರಿ ಆಟ ಬೇರೆ ರೀತಿ ಇದೆ. ಮೊದಲ ದಿನವೇ ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಜಗಳ ಶುರುವಾಗಿದೆ. ಉಗ್ರಂ ಮಂಜು ಮತ್ತು ಚೈತ್ರಾ ಕುಂದಾಪುರ ಅವರ ನಡುವೆ ಕಿತ್ತಾಟ ಶುರುವಾಗಿದೆ. ಹೊರಗಡೆ ಇದ್ದಾಗ ಚೈತ್ರಾ ಕುಂದಾಪುರ ಅವರು ಅನೇಕ ವಿವಾದಗಳನ್ನು ಮಾಡಿಕೊಂಡಿದ್ದರು. ಬಿಗ್ ಬಾಸ್​ ಮನೆಯ ಒಳಗೆ ಅವರಿಂದಲೇ ಮೊದಲು ಜಗಳ ಆರಂಭ ಆಗುತ್ತದೆ ಎಂದು ಬಹುತೇಕರು ಊಹಿಸಿದ್ದರು. ಹಾಗೆಯೇ ಆಗಿದೆ.

ಬಿಗ್​ ಬಾಸ್​ ಮನೆ ಮೊದಲಿನಂತೆ ಇಲ್ಲ. ಈ ಸೀಸನ್​ನಲ್ಲಿ ದೊಡ್ಮನೆ ಎರಡು ಭಾಗವಾಗಿದೆ. ಒಂದು ಭಾಗದಲ್ಲಿ ಸ್ವರ್ಗ ಇದೆ. ಇನ್ನೊಂದು ಭಾಗದಲ್ಲಿ ನರಕ ಇದೆ. ನರಕದಲ್ಲಿ ಇರುವವರಿಗೆ ಸವಲತ್ತುಗಳು ಕಡಿಮೆ. ಸದ್ಯಕ್ಕೆ ಚೈತ್ರಾ ಕುಂದಾಪುರ, ಗೋಲ್ಡ್ ಸುರೇಶ್, ಅನುಷಾ ರೈ, ಶಿಶಿರ್​, ಮಾನಸಾ, ಮೋಕ್ಷಿತಾ ಪೈ ಮತ್ತು ರಂಜಿತ್​ ಅವರು ನರಕವಾಸಿಗಳಾಗಿ ಬಿಗ್​ ಬಾಸ್​ನಲ್ಲಿ ಆಟ ಆರಂಭಿಸಿದ್ದಾರೆ.

ಇದನ್ನೂ ಓದಿ: ತುಕಾಲಿ ಸಂತು ಪತ್ನಿ ಮಾನಸಾಗೆ ಸವಾಲು ಹಾಕಿ ಬಿಗ್​ ಬಾಸ್​ಗೆ ಬಂದ ನಟಿ ಹಂಸಾ

ಉಗ್ರಂ ಮಂಜು, ಐಶ್ವರ್ಯಾ, ಹಂಸಾ, ತ್ರಿವಿಕ್ರಮ್​, ಲಾಯರ್​ ಜಗದೀಶ್​, ಧರ್ಮ ಕೀರ್ತಿರಾಜ್​, ಗೌತಮಿ ಜಾಧವ್​, ಭವ್ಯಾ ಗೌಡ, ಯಮುನಾ ಶ್ರೀನಿಧಿ, ಧನರಾಜ್​ ಅವರು ಸ್ವರ್ಗದಲ್ಲಿ ಸ್ಥಾನ ಪಡೆದಿದ್ದಾರೆ. ಆಟ ಶುರುವಾದ ಮೊದಲ ದಿನವೇ ಸ್ವರ್ಗ ವಾಸಿಗಳಿಗೆ ಹಾಗೂ ನರಕವಾಸಿಗಳಿಗೆ ಕಿತ್ತಾಟ ಆರಂಭ ಆಗಿದೆ. ಆಟದ ನಿಯಮಗಳ ವಿಚಾರದಲ್ಲಿ ಉಗ್ರಂ ಮಂಜು ಮತ್ತು ಚೈತ್ರಾ ಕುಂದಾಪುರ ಅವರ ನಡುವೆ ವಾದ ಆಗಿದೆ.

ಚೈತ್ರಾ ಕುಂದಾಪುರ ನರಕದಲ್ಲಿ ಇರುವುದರಿಂದ ಅವರಿಗೆ ವಿಶೇಷ ಅಧಿಕಾರಗಳು ಇಲ್ಲ. ಆದರೆ ಅವರು ತಮ್ಮ ಮಿತಿಮಿತಿಗಳನ್ನು ಮೀರಿದಂತಿದೆ. ಮೊದಲ ದಿನದ ಝಲಕ್ ತೋರಿಸುವ ಪ್ರೋಮೋದಲ್ಲಿ ಚೈತ್ರಾ ಕುಂದಾಪುರ ಅವರು ಕೂಗಾಡಿರುವುದು ಕಾಣಿಸಿದೆ. ‘ನೀವು ಮಾತನಾಡುವಂತಿಲ್ಲ’ ಎಂದು ಚೈತ್ರಾಗೆ ಉಗ್ರಂ ಮಂಜು ತಾಕೀತು ಮಾಡಿದ್ದಾರೆ. ‘ಮಾತನಾಡಬಾರದು ಅಂತ ರೂಲ್​ ಬುಕ್​ನಲ್ಲಿ ಇದ್ದರೆ ತೋರಿಸಿ, ನಾನು ಮಾತನಾಡಲ್ಲ’ ಎಂದು ಚೈತ್ರಾ ತಿರುಗೇಟು ನೀಡಿದ್ದಾರೆ. ಈ ಘಟನೆಯಿಂದ ಬಿಗ್​ ಬಾಸ್​ ಮನೆಯ ಸ್ಪರ್ಧಿಗಳ ನಡುವೆ ಆರಂಭದಲ್ಲೇ ಮನಸ್ತಾಪ ಹುಟ್ಟಿಕೊಂಡಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us