‘ತಲೆ ಸುತ್ತಿ ಬಿದ್ದು ಆಗಾಗ ಹೊರಗೆ ಹೋಗ್ತೀರಿ’: ಚೈತ್ರಾಗೆ ತಿವಿದ ಭವ್ಯಾ
ಚೈತ್ರಾ ಕುಂದಾಪುರ ಅವರ ವರ್ತನೆಯಿಂದ ಬಿಗ್ ಬಾಸ್ ಮನೆಯ ಅನೇಕರು ಬೇಸತ್ತಿದ್ದಾರೆ. ಸದಾ ಕೂಗಾಡುತ್ತಾ ಮಾತನಾಡುವ ಚೈತ್ರಾ ಅವರನ್ನು ಬಹುತೇಕರು ವಿರೋಧಿಸುತ್ತಿದ್ದಾರೆ. ಗುರುವಾರದ (ಡಿಸೆಂಬರ್ 5) ಸಂಚಿಕೆಯಲ್ಲಿ ಭವ್ಯಾ ಅವರು ಚೈತ್ರಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ತ್ರಿವಿಕ್ರಮ್ ಕೂಡ ಚೈತ್ರಾ ಅವರ ಮಾತುಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.
ಕೆಲವು ವಾರಗಳ ಹಿಂದೆ ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ತಲೆ ತಿರುಗಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಆಸ್ಪತ್ರೆಗೆ ಹೋಗಿ ಬಂದ ಬಳಿಕ ಚೈತ್ರಾ ಅವರು ಹೊರಗಿನ ವಿಚಾರವನ್ನು ಮನೆಯ ಒಳಗೆ ಚರ್ಚೆ ಮಾಡಿದ್ದರು. ಅದರಿಂದಾಗಿ ಚೈತ್ರಾ ಅವರಿಗೆ ಸಿಕ್ಕಾಪಟ್ಟೆ ನೆಗೆಟಿವ್ ಆಗಿದೆ. ಗುರುವಾರದ (ಡಿ.5) ಎಪಿಸೋಡ್ನಲ್ಲಿ ಈ ವಿಚಾರ ಮತ್ತೆ ಪ್ರಸ್ತಾಪ ಆಗಿದೆ. ‘ತಲೆ ಸುತ್ತಿ ಬಂದು ಆಗಾಗ ಮನೆಯಿಂದ ಹೊರಗೆ ಹೋಗ್ತೀರಿ’ ಎಂದು ಭವ್ಯಾ ಅವರು ಚೈತ್ರಾಗೆ ತಿವಿದಿದ್ದಾರೆ.
ನಾಮಿನೇಷನ್ ಪ್ರಕ್ರಿಯೆಯಲ್ಲಿ ಚೈತ್ರಾ ವಿರುದ್ಧ ಮಾತನಾಡಿದ್ದಕ್ಕೆ ಭವ್ಯ ಅವರು ಕೆಲವು ಕಾರಣಗಳನ್ನು ನೀಡಿದರು. ಅದನ್ನು ಒಪ್ಪಿಕೊಳ್ಳದೇ ಚೈತ್ರಾ ಅವರು ವಾದ ಮಾಡಲು ಶುರು ಮಾಡಿದರು. ಇದರಿಂದ ಭವ್ಯಾ ಅವರಿಗೆ ಕಿರಿಕಿರಿ ಆಯಿತು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಅದೇ ರೀತಿ ತ್ರಿವಿಕ್ರಮ್ ಕೂಡ ಚೈತ್ರಾ ಅವರ ಬಣ್ಣ ಬಯಲು ಮಾಡಿದರು. ಈ ಮೊದಲು ಶಿಶಿರ್ ಬಗ್ಗೆ ಚೈತ್ರಾ ಹೇಳಿದ್ದ ಅಸಭ್ಯ ಪದಗಳನ್ನೆಲ್ಲ ತ್ರಿವಿಕ್ರಮ್ ಹೊರಗೆಳೆದರು.
‘ಹುಡುಗಿಯರ ಹಿಂದೆ ಸುತ್ತುವ ಜೊಲ್ಲ’ ಎಂದು ಶಿಶಿರ್ಗೆ ಚೈತ್ರಾ ಹೇಳಿದ್ದರು ಎಂದು ತ್ರಿವಿಕ್ರಮ್ ಆರೋಪಿದರು. ಅದನ್ನು ಚೈತ್ರಾ ಅವರು ಒಪ್ಪಿಕೊಳ್ಳಲೇ ಇಲ್ಲ. ‘ಒಂದು ವೇಳೆ ನಾನು ಆ ರೀತಿ ಹೇಳಿದ್ದರೆ ನನ್ನ ನಾಲಿಗೆ ಬಿದ್ದು ಹೋಗಲಿ’ ಎಂದು ಚೈತ್ರಾ ವಾದಿಸಿದ್ದಾರೆ. ‘ಖಂಡಿತಾ ಬಿದ್ದು ಹೋಗುತ್ತದೆ’ ಎಂದಿದ್ದಾರೆ ತ್ರಿವಿಕ್ರಮ್. ಒಟ್ಟಿನಲ್ಲಿ ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿಕೊಳ್ಳಲಾಗಿದೆ ಎಂಬುದು ತಿಳಿದ ಬಳಿಕ ಶಿಶಿರ್ ಅವರಿಗೆ ತುಂಬ ನೋವಾಯಿತು.
ಇದನ್ನೂ ಓದಿ: ದಿನದಿನಕ್ಕೂ ಚೈತ್ರಾಗೆ ಹುಚ್ಚು ಜಾಸ್ತಿ ಆಗುತ್ತಿದೆ: ಮುಲಾಜಿಲ್ಲದೇ ಹೇಳಿದ ರಜತ್
‘ಚೈತ್ರಾ ಅವರಿಗೆ ಈ ಮನೆಯಲ್ಲಿ ಇರುವ ಯೋಗ್ಯತೆ, ಅರ್ಹತೆ ಇಲ್ಲ. ಸೂಕ್ತ ಕಾರಣವನ್ನು ನಾಮಿನೇಷನ್ಗೆ ನಾವು ಕೊಟ್ಟರೆ ಅದನ್ನು ಅವರು ಅಪಾರ್ಥ ಮಾಡಿಕೊಳ್ಳುತ್ತಾರೆ. ಹೊರಗೆ ಹೋಗಿ ಅಲ್ಲಿನ ವಿಷಯವನ್ನು ಅವರು ಮನೆಯ ಒಳಗೆ ಬಂದು ಹೇಳುತ್ತಾರೆ. ಅದನ್ನು ಖಂಡಿಸಿದರೆ ತಮ್ಮ ತಂತ್ರಗಾರಿಕೆ ಎನ್ನುತ್ತಾರೆ. ಇಂಥ ತಂತ್ರಗಾರಿಕೆ ಬೇಕಿದ್ದರೆ ಹೊರಗೆ ಮಾಡಿಕೊಳ್ಳಲಿ, ಬಿಗ್ ಬಾಸ್ ಮನೆಯಲ್ಲಿ ಅಲ್ಲ’ ಎಂದು ಭವ್ಯ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.