ನೋಡನೋಡುತ್ತಿದ್ದಂತೆಯೇ ಹಿಂದಿ ಬಿಗ್ ಬಾಸ್ ಸೀಸನ್ 15ರ ಫಿನಾಲೆ (Bigg Boss 15 Finale) ಸಮೀಪಿಸಿದೆ. ಸಲ್ಮಾನ್ ಖಾನ್ ನಡೆಸಿಕೊಡುವ ಈ ಕಾರ್ಯಕ್ರಮಕ್ಕೆ ದೊಡ್ಡ ವೀಕ್ಷಕರ ವರ್ಗ ಇದೆ. ಈ ವರ್ಷ ಕೊರೊನಾ ಹರಡುವ ಭೀತಿಯ ನಡುವೆಯೂ ಹಿಂದಿ ಬಿಗ್ ಬಾಸ್ ಶೋ ಯಶಸ್ವಿಯಾಗಿ ಪೂರ್ಣಗೊಳ್ಳುತ್ತಿದೆ. ಎಂದಿನಂತೆ ಈ ಬಾರಿ ಕೂಡ ಹಲವು ಬಗೆಯ ಕಾಂಟ್ರವರ್ಸಿಗಳು ಈ ಕಾರ್ಯಕ್ರಮದಲ್ಲಿ ಜಾಗ ಪಡೆದುಕೊಂಡವು. ಅನೇಕರ ಮೇಲೆ ಸಲ್ಮಾನ್ ಖಾನ್ ರೇಗಾಡಿದರು. ಹಲವರು ಕಣ್ಣೀರು ಸುರಿಸಿದರು. ಹೀಗೆ ಅನೇಕ ಡ್ರಾಮಾಗಳಿಗೆ ಸಾಕ್ಷಿಯಾದ ‘ಬಿಗ್ ಬಾಸ್ ಸೀಸನ್ 15’ಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಫಿನಾಲೆ ನಡೆಯಲಿದೆ. ಆ ವೇದಿಕೆಯಲ್ಲಿ ನಟ ಸಿದ್ದಾರ್ಥ್ ಶುಕ್ಲಾ (Sidharth Shukla) ಅವರನ್ನು ವಿಶೇಷವಾಗಿ ಸ್ಮರಿಸಿಕೊಳ್ಳಲಾಗುತ್ತದೆ. ಕಳೆದ ವರ್ಷ ಹೃದಯಾಘಾತದಿಂದ ನಿಧನರಾದ ಅವರಿಗೆ ನಟಿ ಶೆಹನಾಜ್ ಗಿಲ್ (Shehnaaz Gill) ಅವರು ನಮನ ಸಲ್ಲಿಸಲಿದ್ದಾರೆ. ಕಲರ್ಸ್ ವಾಹಿನಿ ಈ ಕುರಿತಂತೆ ಒಂದು ಪ್ರೋಮೋ ಹಂಚಿಕೊಂಡಿದೆ. ಅದನ್ನು ನೋಡಿದ ವೀಕ್ಷಕರು ಭಾವುಕರಾಗಿದ್ದಾರೆ.
ಹಿಂದಿ ಬಿಗ್ ಬಾಸ್ ಸೀಸನ್ 13ರಲ್ಲಿ ಶೆಹನಾಜ್ ಗಿಲ್ ಮತ್ತು ಸಿದ್ದಾರ್ಥ್ ಶುಕ್ಲಾ ಅವರು ಸ್ಪರ್ಧಿಸಿದ್ದರು. ಆ ಸೀಸನ್ನಲ್ಲಿ ಸಿದ್ದಾರ್ಥ್ ಶುಕ್ಲಾ ವಿನ್ನರ್ ಆಗಿ ಹೊರಹೊಮ್ಮಿದರೆ, 2ನೇ ರನ್ನರ್ ಅಪ್ ಸ್ಥಾನಕ್ಕೆ ಶೆಹನಾಜ್ ಗಿಲ್ ತೃಪ್ತಿಪಟ್ಟುಕೊಂಡಿದ್ದರು. ಅವರಿಬ್ಬರ ನಡುವಿನ ಆಪ್ತತೆ ಕಂಡು ಎಲ್ಲರಿಗೂ ಖುಷಿ ಆಗಿತ್ತು. ಬಿಗ್ ಬಾಸ್ ಮುಗಿದ ಬಳಿಕವೂ ಅವರಿಬ್ಬರು ಜೊತೆಯಾಗಿ ವಾಸಿಸುತ್ತಿದ್ದರು. ಆದರೆ ವಿಧಿಯ ಯೋಜನೆ ಬೇರೆಯೇ ಇತ್ತು. ಹೃದಯಾಘಾತದಿಂದ ಸಿದ್ದಾರ್ಥ್ ಮೃತಪಟ್ಟಾಗ ಶೆಹನಾಜ್ಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿತ್ತು.
ಪ್ರಿಯಕರನನ್ನು ಕಳೆದುಕೊಂಡ ನೋವಿನಲ್ಲಿರುವ ಶೆಹನಾಜ್ ಗಿಲ್ ಅವರು ಬಿಗ್ ಬಾಸ್ ಫಿನಾಲೆ ಕಾರ್ಯಕ್ರಮಕ್ಕೆ ಬಂದು ನಮನ ಸಲ್ಲಿಸಲಿದ್ದಾರೆ. ಜ.29 ಮತ್ತು ಜ.30ರಂದು ರಾತ್ರಿ 8 ಗಂಟೆಗೆ ಫಿನಾಲೆ ಎಪಿಸೋಡ್ ಪ್ರಸಾರ ಆಗಲಿದೆ.
ಹಿಂದಿ ಕಿರುತೆರೆಯಲ್ಲಿ ಜನಪ್ರಿಯರಾಗಿದ್ದ ಸಿದ್ದಾರ್ಥ್ ಶುಕ್ಲಾ:
ಹಲವು ಧಾರಾವಾಹಿ ಮತ್ತು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಮೂಲಕ ಹಿಂದಿ ಕಿರುತೆರೆಯಲ್ಲಿ ಸಿದ್ದಾರ್ಥ್ ಶುಕ್ಲಾ ಅವರು ಫೇಮಸ್ ಆಗಿದ್ದರು. ಮಾಡೆಲ್ ಆಗಿ ವೃತ್ತಿಜೀವನ ಆರಂಭಿಸಿದ್ದ ಅವರು ನಂತರ ಕಿರುತೆರೆಯಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಹಲವು ಧಾರಾವಾಹಿಗಳಲ್ಲಿ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದರು. ಬಿಗ್ ಬಾಸ್ ಸೀಸನ್ 13ರಲ್ಲಿ ಅವರು ವಿನ್ನರ್ ಆಗಿ ಹೊರಹೊಮ್ಮಿದ ಬಳಿಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದರು. ಬಿಗ್ ಬಾಸ್ ಮಾತ್ರವಲ್ಲದೆ, ‘ಕತ್ರೋಂಕೆ ಕಿಲಾಡಿ ಸೀಸನ್ 7’ರಲ್ಲೂ ಅವರು ವಿನ್ನರ್ ಆಗಿದ್ದರು. ಬಿಗ್ ಬಾಸ್ 14ರಲ್ಲಿ ಅವರು ಗೆಸ್ಟ್ ಆಗಿ ದೊಡ್ಮನೆ ಪ್ರವೇಶಿಸಿದ್ದರು.
ಸೀರಿಯಲ್ನಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದು ಮಾತ್ರವಲ್ಲದೆ, ಹಲವು ಧಾರಾವಾಹಿಗಳಲ್ಲಿ ಸಿದ್ಧಾರ್ಥ್ ಶುಕ್ಲಾ ಅತಿಥಿ ಪಾತ್ರ ಮಾಡಿದ್ದರು. ಬಾಲಿವುಡ್ನ ಕೆಲವು ಸಿನಿಮಾಗಳಲ್ಲೂ ಕೂಡ ಅವರು ನಟಿಸಿದ್ದರು. ವರುಣ್ ಧವನ್ ನಾಯಕತ್ವದ ‘ಹಂಪ್ಟಿ ಶರ್ಮಾ ಕಿ ದುಲ್ಹನಿಯಾ’ ಚಿತ್ರದಲ್ಲಿ ಅವರೊಂದು ಪಾತ್ರ ಮಾಡಿದ್ದರು. ಏಕ್ತಾ ಕಪೂರ್ ನಿರ್ಮಾಣದ ‘ಬ್ರೋಕನ್ ಬಟ್ ಬ್ಯೂಟಿಫುಲ್ 3’ ವೆಬ್ ಸಿರೀಸ್ನಲ್ಲಿ ಸಿದ್ಧಾರ್ಥ್ ನಟಿಸಿದ್ದರು.
ಇದನ್ನೂ ಓದಿ:
‘ನೀನೂ ಸತ್ತು ಹೋಗು’: ಸಿದ್ದಾರ್ಥ್ ಶುಕ್ಲಾ ನಿಧನದ ಬಳಿಕ ಕಿಡಿಗೇಡಿಗಳಿಂದ ನಟಿಗೆ ಮೆಸೇಜ್; ಆಸ್ಪತ್ರೆಗೆ ದಾಖಲು
ಸಿದ್ದಾರ್ಥ್ ಶುಕ್ಲಾ ಶ್ರದ್ದಾಂಜಲಿ ಸಭೆ: ಅಭಿಮಾನಿಗಳಿಗೂ ಆಹ್ವಾನ ನೀಡಿದ ತಾಯಿ; ಇಲ್ಲಿದೆ ಮೀಟಿಂಗ್ ಲಿಂಕ್