ಬಿಗ್ಬಾಸ್ ಕನ್ನಡ ಸೀಸನ್ 12ರಿಂದ ಮಲ್ಲಮ್ಮ ಹೊರಕ್ಕೆ: ವಿಶೇಷ ಬೀಳ್ಕೊಡುಗೆ ಕೊಟ್ಟ ಬಿಗ್ಬಾಸ್
Bigg Boss Kannada season 12: ಈ ವಾರ ಮಲ್ಲಮ್ಮ ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಮಲ್ಲಮ್ಮ ಮನೆಯ ಹಿರಿಯ ಸದಸ್ಯೆ ಆಗಿದ್ದರು. ಬಹುಷಃ ಕನ್ನಡ ಬಿಗ್ಬಾಸ್ ಇತಿಹಾಸದಲ್ಲೇ ಹಿರಿಯ ಸದಸ್ಯೆ ಆಗಿದ್ದರು. ಆದರೆ ಎಲ್ಲರೊಟ್ಟಿಗೆ ಬೆರೆತು ಚೆನ್ನಾಗಿಯೇ ಆಡುತ್ತಿದ್ದರು. ಈಗ ಅನಿವಾರ್ಯವಾಗಿ ಮನೆಯಿಂದ ಹೊರ ಹೋಗಿದ್ದಾರೆ. ಆದರೆ ಸ್ವತಃ ಬಿಗ್ಬಾಸ್ ಮಲ್ಲಮ್ಮನನ್ನು ವಿಶೇಷವಾಗಿ ಬೀಳ್ಕೊಟ್ಟರು.

ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada) ರಿಂದ ಈ ವಾರ ಒಬ್ಬ ಸ್ಪರ್ಧಿ ಹೊರಗೆ ಹೋಗಿದ್ದಾರೆ. ಕಳೆದ ವಾರ ಯಾರೂ ಸಹ ಎಲಿಮಿನೇಟ್ ಆಗಿರಲಿಲ್ಲ. ಆದರೆ ಈ ವಾರ ಮಲ್ಲಮ್ಮ ಮನೆಯಿಂದ ಹೊರಗೆ ಬಂದಿದ್ದಾರೆ. ಮಲ್ಲಮ್ಮ ಮನೆಯ ಹಿರಿಯ ಸದಸ್ಯೆ ಆಗಿದ್ದರು. ಬಹುಷಃ ಕನ್ನಡ ಬಿಗ್ಬಾಸ್ ಇತಿಹಾಸದಲ್ಲೇ ಹಿರಿಯ ಸ್ಪರ್ಧಿ ಆಗಿದ್ದರು ಮಲ್ಲಮ್ಮ. ವಯಸ್ಸು ಮರೆತು ಎಲ್ಲರೊಟ್ಟಿಗೆ ಬೆರೆತು ಚೆನ್ನಾಗಿಯೇ ಆಡುತ್ತಿದ್ದರು. ಈಗ ಅನಿವಾರ್ಯವಾಗಿ ಮನೆಯಿಂದ ಹೊರ ಹೋಗಿದ್ದಾರೆ. ಆದರೆ ಸ್ವತಃ ಬಿಗ್ಬಾಸ್, ಮಲ್ಲಮ್ಮನನ್ನು ವಿಶೇಷವಾಗಿ ಬೀಳ್ಕೊಟ್ಟರು.
ಈ ವಾರ ನಾಮಿನೇಟ್ ಆದವರಲ್ಲಿ ಕೆಲವರು ನಿನ್ನೆ ಸೇಫ್ ಆಗಿದ್ದರು. ಭಾನುವಾರದ ಎಪಿಸೋಡ್ನಲ್ಲಿ ಗಿಲ್ಲಿ, ಅಶ್ವಿನಿ, ರಾಶಿಕಾ, ಧ್ರುವಂತ್, ಧನುಶ್, ಸ್ಪಂದನಾ ಅವರುಗಳು ಸೇಫ್ ಆದರು. ಕೊನೆಯದಾಗಿ ಮಾಳು ಮತ್ತು ಮಲ್ಲಮ್ಮ ಇಬ್ಬರೂ ಉಳಿದುಕೊಂಡರು. ಆಗ ಸುದೀಪ್ ನೀವು ಇಬ್ಬರೂ ಸಹ ಬಿಗ್ಬಾಸ್ ಮನೆಯ ವಿಶೇಷ ಸ್ಪರ್ಧಿಗಳು, ಆರ್ಥಿಕ ಹಿನ್ನೆಲೆ ಇಲ್ಲದೆ, ಹಲವು ಕಷ್ಟಗಳನ್ನು ಮೆಟ್ಟಿನಿಂತು ನಿಮ್ಮ ಸ್ವಂತ ವ್ಯಕ್ತಿತ್ವದಿಂದ ಬಿಗ್ಬಾಸ್ ಮನೆಗೆ ಬಂದಿದ್ದೀರಿ, ಇಬ್ಬರಲ್ಲಿ ಯಾರು ಹೊರ ಬಂದರೂ ಸಹ ಸಾಧನೆ ಮಾಡಿ ಹೊರ ಬಂದಿದ್ದೀರಿ ಎಂದೇ ಅರ್ಥ ಎಂದರು. ಬಳಿಕ ಯಾರ ವಿಡಿಯೋ ಹಾಕಲಾಗುತ್ತದೆಯೋ ಅವರು ಔಟ್ ಎಂದರ್ಥ ಎಂದರು. ಎಲ್ಲರೂ ಕುತೂಹಲದಿಂದ ಕಾಯಬೇಕಾದರೆ ಮಲ್ಲಮ್ಮನ ವಿಡಿಯೋ ಪ್ಲೇ ಆಯ್ತು. ಆ ಮೂಲಕ ಮಲ್ಲಮ್ಮ ಹೊರ ಹೋಗುವುದು ಖಾತ್ರಿ ಆಯ್ತು.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಕಬಡ್ಡಿ: ರೊಚ್ಚಿಗೆದ್ದ ರಾಶಿಕಾ-ರಕ್ಷಿತಾ
ಆದರೆ ಬಿಗ್ಬಾಸ್, ಮಲ್ಲಮ್ಮನಿಗೆ ವಿಶೇಷ ಬೀಳ್ಕೊಡುಗೆಯನ್ನು ನೀಡಿದರು. ಅವರಿಗಾಗಿ ಲೈಟುಗಳ ಒಂದು ವಿಶೇಷ ಚಪ್ಪರ ಆಯೋಜಿಸಿ ಅದರ ಕೆಳಗೆ ಅವರನ್ನು ನಿಲ್ಲಿಸಿ ಮಾತನಾಡಿದ ಬಿಗ್ಬಾಸ್, ‘ಬಿಗ್ಬಾಸ್ ಮನೆಗೆ ನೂರಾರು ಮಂದಿ ಸ್ಪರ್ಧಿಗಳು ಬಂದಿದ್ದಾರೆ ಆದರೆ ಅವರೆಲ್ಲರಿಗಿಂತಲೂ ನೀವು ಭಿನ್ನ. ಬಿಗ್ಬಾಸ್ ಮನೆಗೆ ಬರಲು ಆರ್ಥಿಕ, ಸಾಮಾಜಿಕ ಹಿನ್ನೆಲೆಯ ಅಗತ್ಯ ಇಲ್ಲ ವ್ಯಕ್ತಿತ್ವ ಇದ್ದರೆ ಸಾಕೆಂದು ತೋರಿಸಿದ್ದೀರಿ ಮಾತ್ರವಲ್ಲ ವಯಸ್ಸು ಸಹ ಅಡ್ಡಿಯಲ್ಲ ಎಂಬುದನ್ನು ತೋರಿಸಿದ್ದೀರಿ. ನೀವು ಪ್ರಜ್ಞಾವಂತ ಸ್ಪರ್ಧಿ ಆಗಿದ್ದೀರಿ, ನೀವು ಬಿಗ್ಬಾಸ್ ಮನೆಯ ಹೆಮ್ಮೆಯ ಸ್ಪರ್ಧಿ, ಈ ಮನೆ ಸದಾ ನಿಮ್ಮದೇ, ಬಿಗ್ಬಾಸ್ ನಿಮ್ಮನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ನಿಮ್ಮ ಹೊರಗಿನ ಜೀವನಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿ ಬೀಳ್ಕೊಟ್ಟರು.
ಮಲ್ಲಮ್ಮ ಹೋಗುವಾದ ಧ್ರುವಂತ್, ರಕ್ಷಿತಾ ಹಾಗೂ ಇನ್ನೂ ಕೆಲವರು ಕಣ್ಣೀರು ಹಾಕಿದರು. ಇಡೀ ಮನೆಯೇ ಭಾವುಕವಾಗಿ ಮಲ್ಲಮ್ಮನನ್ನು ಮನೆಯಿಂದ ಹೊರಗೆ ಕಳಿಸಿಕೊಟ್ಟಿತು. ಮಲ್ಲಮ್ಮನು ಹೊರ ಬಂದ ಬಳಿಕ ಸುದೀಪ್ ಬಳಿಯೂ ಸಹ ಬೇಸರ ವ್ಯಕ್ತಪಡಿಸಿದರು. ‘ಅಮ್ಮ ಅಮ್ಮ ಅಂದು ನನ್ನನ್ನು ಪ್ರತ್ಯೇಕವಾಗಿಟ್ಟು ಬಿಟ್ಟರು’ ಎಂದು ಅಳಲು ತೋಡಿಕೊಂಡರು. ಸುದೀಪ್ ಸಹ ಮಲ್ಲಮ್ಮ ಅವರು ಆಡಿದ ಆಟವನ್ನು ಕೊಂಡಾಡಿ ಅವರಿಗೆ ಬೀಳ್ಕೊಟ್ಟರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




