
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಮಂಜ ಅವರ ಮಾತುಗಳು ಅತಿಯಾಗುತ್ತಿವೆ. ಇನ್ನುಳಿದ ಸ್ಪರ್ಧಿಗಳ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ಅದೇ ಕಾರಣಕ್ಕೆ ಅವರು ಎಲ್ಲರ ಕೆಂಗಣ್ಣಿಗೆ ಗುರಿ ಆಗುತ್ತಿದ್ದಾರೆ. ಗಿನ್ನೆಸ್ ದಾಖಲೆ ಹೊಂದಿರುವ ಧನುಷ್ ಅವರ ಬಗ್ಗೆ ಮಂಜ ಕೀಳಾಗಿ ಮಾತನಾಡಿದ್ದಾರೆ. ಸಾವಿರಾರು ಕಿಲೋಮೀಟರ್ ಸೈಕಲ್ ತುಳಿಯುವ ಮೂಲಕ ಗಿನ್ನೆಸ್ ದಾಖಲೆ ಬರೆದವರು ಧನುಷ್. ಆದರೆ ‘ನಿನ್ನ ಕಿತ್ತೋದ್ ಸೈಕಲ್’ ಎಂದು ಹೇಳುವ ಮೂಲಕ ಮಂಜ ವೈಯಕ್ತಿಕ ದಾಳಿ ಮಾಡಿದ್ದಾರೆ.
ಟಾಸ್ಕ್ ನಡುವೆ ಮಂಜ ಹೇಳಿದ ಈ ಮಾತಿನಿಂದ ಧನುಷ್ ಅವರಿಗೆ ಕೋಪ ಬಂದಿದೆ. ‘ನಿನ್ನದು ಕಿತ್ತಾದ್ ಜೀವನ’ ಎಂದು ಅವರು ಧನುಷ್ ತಿರುಗೇಟು ನೀಡಿದ್ದಾರೆ. ‘ನೀನು ಜೊಲ್ಲ’ ಎಂದು ಮಂಜ ಹೇಳಿದ್ದಾರೆ. ಇದು ತೀರಾ ಅನಗತ್ಯವಾದ ಮಾತಾಗಿತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ಹೆಚ್ಚಾಗಿದೆ. ಪದೇ ಪದೇ ಇಂಥದ್ದೇ ಕಿರಿಕ್ ಮುಂದುವರಿಯುತ್ತಿದೆ.
ಈ ಮೊದಲು ಕೂಡ ಮಂಜ ಅವರು ಧನುಷ್ ಅವರ ಸೈಕಲ್ ಬಗ್ಗೆ ಕೀಳಾಗಿ ಮಾತನಾಡಿದ್ದರು. ಆದರೆ ‘ನಾನು ಪರ್ಸನಲ್ ಆಗಿ ಆ ರೀತಿ ಮಾತನಾಡಿಲ್ಲ’ ಎಂದು ಸಮಜಾಯಿಷಿ ನೀಡಿದ್ದರು. ಈಗ ಮತ್ತೆ ಅದೇ ಚಾಳಿ ಮುಂದುವರಿಸಿದ್ದಾರೆ. ಅವರ ವರ್ತನೆಯಿಂದ ಇನ್ನುಳಿದ ಸ್ಪರ್ಧಿಗಳಿಗೆ ಅಸಮಾಧಾನ ಉಂಟಾಗಿದೆ.
ಇಷ್ಟೆಲ್ಲ ಮಾತುಗಳನ್ನು ಕೇಳಿಸಿಕೊಂಡ ಬಳಿಕವೂ ಧನುಷ್ ಅವರು ಮಂಜನಿಗೆ ತಿಳಿಹೇಳಲು ಪ್ರಯತ್ನಿಸಿದ್ದಾರೆ. ‘ಸರಿಯಾಗಿ ಮಾತನಾಡುವುದಾದರೆ ಮಾತ್ರ ಮಾತನಾಡು. ಇಲ್ಲ ಅಂದ್ರೆ ಮಾತಾಡಬೇಡ’ ಎಂದು ಧನುಷ್ ಹೇಳಿದರು. ‘ನನಗೂ ನಿನಗೂ ಸೆಟ್ ಆಗಲ್ಲ. ಮಾತಾಡೋದು ಬೇಡ’ ಎಂದು ಮಂಜ ಖಡಕ್ ಆಗಿ ಹೇಳಿದರು.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 13: ಅತಿಯಾಗಿ ಮಾತಾಡಿದ ಮಂಜನಿಗೆ ಬುದ್ಧಿ ಕಲಿಸಿದ ಮನೆ ಮಂದಿ
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಪರಸ್ಪರ ಮಾತನಾಡದೇ ಇರಲು ಸಾಧ್ಯವಿಲ್ಲ. ದ್ವೇಷ ಇಟ್ಟುಕೊಂಡು ಟಾಸ್ಕ್ ಮುಂದುವರಿಸಲು ಕೂಡ ಸಾಧ್ಯವಿಲ್ಲ. ಆ ವಿಚಾರವನ್ನು ಮಂಜನಿಗೆ ಧನುಷ್ ತಿಳಿಸಿಹೇಳಲು ಪ್ರಯತ್ನಿಸಿದರೂ ಕೂಡ ಪ್ರಯೋಜನ ಆಗಲಿಲ್ಲ. ‘ಸುದೀಪ್ ಅವರು ಯಾವ ರೀತಿ ಬುದ್ಧಿ ಹೇಳಿದ್ರೂ ಕೂಡ ಮಂಜ ಬದಲಾಗಲ್ಲ. ಆಟದಲ್ಲಿ ಅವನಿಗೆ ಮಜ ಇಲ್ಲ. ಜಗಳ ಮಾಡುವುದರಲ್ಲಿ ಅವನಿಗೆ ಮಜಾ ಇದೆ’ ಎಂದು ಗಗನ ಚಿನ್ನಪ್ಪ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.