ಕತ್ತಲು ಬೆಳಕಿನ ಆಟ ಗೆದ್ದು ಎರಡನೇ ಬಾರಿ ಕ್ಯಾಪ್ಟನ್ ಆದ ಭವ್ಯಾ
Bigg Boss Kannada: ಬಿಗ್ಬಾಸ್ ಮನೆಯಲ್ಲಿ ವಾರಗಳು ಕಳೆದಂತೆ ಕ್ಯಾಪ್ಟೆನ್ ಆಗಲು ಎಲ್ಲರೂ ಹಾತೊರೆಯುತ್ತಿದ್ದಾರೆ. ಕ್ಯಾಪ್ಟನ್ ಆದರೆ ಬಿಗ್ಬಾಸ್ ಮನೆಯಲ್ಲಿ ಒಂದು ವಾರ ಹೆಚ್ಚು ಇರಬಹುದು ಎಂಬುದೇ ಇದರ ಹಿಂದಿನ ಲೆಕ್ಕಾಚಾರ. ಇದೀಗ ಭವ್ಯಾ ಗೌಡ ಎರಡನೇ ಬಾರಿಗೆ ಮನೆಗೆ ಕ್ಯಾಪ್ಟನ್ ಆಗಿದ್ದಾರೆ. ಆದರೆ ಇದರಿಂದ ಕೆಲವರಿಗೆ ಸಮಸ್ಯೆ ಶುರುವಾಗುವ ಸಾಧ್ಯತೆ ಇದೆ.
ಭವ್ಯಾ ಗೌಡ ಎರಡನೇ ಬಾರಿ ಕ್ಯಾಪ್ಟನ್ ಆಗಿದ್ದಾರೆ. ಮನೆಯಲ್ಲಿ ಕೆಲ ವಾರಗಳ ಕಾಲ ಇದ್ದೂ ಇಲ್ಲದಂತಿದ್ದ, ಕೇವಲ ತ್ರಿವಿಕ್ರಮ್ ಜೊತೆಗಿನ ಗೆಳೆತನದಿಂದಲೇ ಸುದ್ದಿಯಾಗುತ್ತಿದ್ದ ಭವ್ಯಾ ಇತ್ತೀಚೆಗೆ ತಮ್ಮ ಸ್ವಂತ ಬಲದಿಂದ ಆಡಲು ಶುರು ಮಾಡಿದ್ದಾರೆ. ಅದರ ಬೆನ್ನಲ್ಲೆ ಇದೀಗ ಭವ್ಯಾ ಗೌಡ ಈ ವಾರ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಅದೂ ಇದು ಮೊದಲ ಬಾರಿ ಅಲ್ಲ ಬದಲಿಗೆ ಎರಡನೇ ಬಾರಿ. ಕ್ಯಾಪ್ಟನ್ ಆದ ಬೆನ್ನಲ್ಲೆ ತಾನೊಬ್ಬ ಗಟ್ಟಿ ನಾಯಕಿ ಎಂದು ತೋರಿಸಿದ್ದಾರೆ ಸಹ.
ಕ್ಯಾಪ್ಟನ್ ಟಾಸ್ಕ್ಗೆ ಅಂತಿಮವಾಗಿ ಐಶ್ವರ್ಯಾ ಮತ್ತು ಭವ್ಯಾ ಗೌಡ ಉಳಿದಿದ್ದರು. ಇಬ್ಬರೂ ಪರಸ್ಪರರ ವಿರೋಧಿಗಳಾಗಿ ಬಿಗ್ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಕ್ಯಾಪ್ಟನ್ ಯಾರೆಂಬುದನ್ನು ಆಯ್ಕೆ ಮಾಡಲು ಭಿನ್ನವಾದ ಟಾಸ್ಕ್ ಅನ್ನೇ ಬಿಗ್ಬಾಸ್ ನೀಡಿದ್ದರು. ಕೇವಲ ಕತ್ತಲೆ ತುಂಬಿದ ಕೋಣೆಯಲ್ಲಿ ಬಣ್ಣದ ಬಾಕ್ಸ್ಗಳನ್ನು ಹಾಗೂ ಅವನ್ನು ಇಡಲು ಬಣ್ಣದ ಸಣ್ಣ ಮೇಜುಗಳನ್ನು ಇಡಲಾಗಿತ್ತು. ಆ ಕೋಣೆಯಲ್ಲಿ ಕೆಲವು ಸೆಕೆಂಡ್ಗಳ ಕಾಲ ಮಾತ್ರವೇ ಲೈಟ್ ಆನ್ ಮಾಡಲಾಗುತ್ತಿತ್ತು. ಆಗ ಸ್ಪರ್ಧಿಗಳು ಬಣ್ಣಗಳ ಬಾಕ್ಸ್ಗಳನ್ನು ನೋಡಿಕೊಂಡು ಅದನ್ನು ಗಮನದಲ್ಲಿಟ್ಟುಕೊಂಡು ಲೈಟ್ ಅನ್ನು ತೆಗೆದಾಗ ಕತ್ತಲಿನಲ್ಲಿ ಬಾಕ್ಸ್ ಗಳನ್ನು ಆಯಾ ಬಣ್ಣದ ಮೇಜಿನ ಮೇಲೆ ಇಡಬೇಕಾಗಿತ್ತು.
ಇದನ್ನೂ ಓದಿ:ಈ ಬಾರಿ ಬಿಗ್ಬಾಸ್ ಗೆಲ್ಲೋದು ಯಾರು? ಉತ್ತರ ಕೊಟ್ಟ ಗೋಲ್ಡ್ ಸುರೇಶ್
ಈ ಟಾಸ್ಕ್ನಲ್ಲಿ ಐಶ್ವರ್ಯಾ ಮತ್ತು ಭವ್ಯಾ ಇಬ್ಬರೂ ಸಹ ಚೆನ್ನಾಗಿ ಆಡಿದರು. ಭವ್ಯಾ ತುಸು ಹೆಚ್ಚು ಕಾನ್ಫಿಡೆನ್ಸ್ನಿಂದ ಆಡಿದರು. ಅಂತಿಮವಾಗಿ ಬಿಗ್ಬಾಸ್ ಫಲಿತಾಂಶ ಘೋಷಣೆ ಮಾಡಿದಾಗ ಇಬ್ಬರ ನಡುವೆ ಕೇವಲ 36 ಸೆಕೆಂಡ್ಗಳ ಅಂತರ ಮಾತ್ರವೇ ಇತ್ತು. ಅದರಂತೆ ಭವ್ಯಾ ಟಾಸ್ಕ್ ಗೆದ್ದು ಕ್ಯಾಪ್ಟನ್ ಆದರು. ತಮಗೆ ಅಧಿಕಾರ ಸಿಕ್ಕ ಕೂಡಲೇ ಪ್ರತಿಸ್ಪರ್ಧಿ ಆಗಿದ್ದ ಐಶ್ವರ್ಯಾ ಅನ್ನು ನೇರವಾಗಿ ನಾಮಿನೇಟ್ ಮಾಡಿದರು. ಆ ನಂತರವೂ ಸಹ ತಮ್ಮ ಗೆಳೆಯ ತ್ರಿವಿಕ್ರಮ್ಗೆ ಕ್ಯಾಪ್ಟನ್ ಆಗಿ ಕೆಲವು ಆರ್ಡರ್ಗಳನ್ನು ಮಾಡಿದರು. ಇದರಿಂದ ತ್ರಿವಿಕ್ರಮ್ ಹಾಗೂ ಭವ್ಯಾ ನಡುವೆ ಸಣ್ಣ ಕಿತ್ತಾಟವೂ ನಡೆಯಿತು.
ಭವ್ಯಾ ಕ್ಯಾಪ್ಟನ್ ಆದ ಮೇಲೆ ಮನೆಯಲ್ಲಿ ಕೆಲವು ನಿಯಮಗಳನ್ನು ಹಾಕಿದರು. ಕ್ಯಾಪ್ಟನ್ ಆಗಿ ಲಕ್ಷುರಿ ಬಜೆಟ್ ಟಾಸ್ಕ್ ಅನ್ನು ಚೆನ್ನಾಗಿ ನಡೆಸಿಕೊಟ್ಟರು. ಮಂಜು ಅವರ ಮಟನ್ ಆಸೆಯಿಂದ ಮನೆಗೆ ಉಪ್ಪಿನಕಾಯಿ ಸಿಗದೆ ಹೋದಾಗಲೂ ಸಹ ಮಂಜು ಅವರ ಮೇಲೆ ಜೋರು ಧ್ವನಿಯಲ್ಲಿ ಜಗಳ ಮಾಡಿದರು. ಆರಂಭದಲ್ಲಿಯೇ ಈ ವಾರ ಒಳ್ಳೆಯ ಕ್ಯಾಪ್ಟನ್ಸಿ ನಿರ್ವಹಿಸುವ ಸುಳಿವು ನೀಡಿದ್ದಾರೆ ಭವ್ಯಾ ಗೌಡ. ಆದರೆ ಭವ್ಯಾ ಕ್ಯಾಪ್ಟನ್ ಆಗಿರುವುದು ಐಶ್ವರ್ಯಾಗೆ ಮುಳುವಾಗಿ ಪರಿಣಮಿಸಿದೆ. ಕ್ಯಾಪ್ಟೆನ್ಸಿ ಸೋತಿದ್ದರಿಂದಲೇ ಐಶ್ವರ್ಯಾ ಮನೆಯಿಂದ ಹೊರಬೇಕಾದ ಅನಿವಾರ್ಯತೆ ಮೂಡುತ್ತದೆಯೋ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ