ಮಂಡಿಯೂರಿ ಕ್ಷಮೆ ಕೇಳಿದ ವಿನಯ್, ದ್ವೇಷ ಕರಗಿ ಮತ್ತೆ ಅರಳಿತು ಸ್ನೇಹ

Bigg Boss Kannada: ಬಿಗ್​ಬಾಸ್ ಮನೆಯಲ್ಲಿ ಮುರಿದ ಸಂಬಂಧಗಳು ಮರುಸ್ಥಾಪನೆಗೊಂಡಿವೆ. ವಿನಯ್ ಮಂಡಿಯೂರಿ ಕ್ಷಮೆ ಕೇಳಿದ್ದಾರೆ. ಬುಧವಾರದ ಎಪಿಸೋಡ್​ನಲ್ಲಿ ಏನೇನಾಯ್ತು?

ಮಂಡಿಯೂರಿ ಕ್ಷಮೆ ಕೇಳಿದ ವಿನಯ್, ದ್ವೇಷ ಕರಗಿ ಮತ್ತೆ ಅರಳಿತು ಸ್ನೇಹ

Updated on: Jan 24, 2024 | 11:24 PM

ಬಿಗ್​ಬಾಸ್ ಕನ್ನಡ ಸೀಸನ್ 10 (BiggBoss) ಫಿನಾಲೆ (Finale) ವಾರದಲ್ಲಿದೆ. ಮನೆಯಲ್ಲಿ ಆರು ಮಂದಿ ಉಳಿದಿದ್ದು, ಒಬ್ಬರನ್ನು ಕಂಡರೆ ಒಬ್ಬರಿಗಾಗದ ಕೆಲವರು ಮನೆಯಲ್ಲಿದ್ದಾರೆ. ಆದರೆ ಬುಧವಾರದ ಎಪಿಸೋಡ್​ನಲ್ಲಿ ಮನೆಯ ಸದಸ್ಯರು ಕಹಿಯನ್ನು ಮರೆತು ಪರಸ್ಪರ ಮತ್ತೆ ಸ್ನೇಹಿತರಾದರು. ಮನೆಯಿಂದ ಹೊರ ಹೋಗುವ ಕೆಲವೇ ದಿನಗಳ ಮುಂಚೆ ಎಲ್ಲರೂ ಮತ್ತೆ ಆತ್ಮೀಯವಾಗಿ ಬೆರೆತರು. ಪರಸ್ಪರ ಉಡುಗೊರೆಗಳನ್ನು ಕೊಟ್ಟುಕೊಂಡರು. ಹೈಲೆಟ್ ಎಂದರೆ ಯಾವುದಕ್ಕೂ ಬಗ್ಗದ, ಜಗ್ಗದ ವಿನಯ್ ಮಂಡಿಯೂರಿ ಕ್ಷಮೆ ಕೇಳಿದರು.

ತಮ್ಮ ಪ್ರೀತಿ ಪಾತ್ರರಿಗೆ ಪತ್ರ ಬರೆದು ಅವರಿಗೆ ಉಡುಗೊರೆಯೊಂದನ್ನು ನೀಡುವ ಅವಕಾಶವನ್ನು ಬಿಗ್​ಬಾಸ್ ನೀಡಿದ್ದರು. ಅಂತೆಯೇ ಎಲ್ಲರೂ ಆಸಕ್ತಿಯಿಂದ ಪತ್ರ ಬರೆದರು. ಮೊದಲು ಪತ್ರ ಓದಿದ ಕಾರ್ತಿಕ್, ಸಂಗೀತಾ ಬಳಿ ಕ್ಷಮೆ ಕೇಳಿದರು. ನಿಮ್ಮಿಂದ ಏನನ್ನೂ ನಿರೀಕ್ಷಿಸುವುದಿಲ್ಲ ನಗುವೊಂದನ್ನು ಬಿಟ್ಟು ಎಂದು, ಅವರಿಗಾಗಿ ಒಂದು ಟಿ-ಶರ್ಟ್ ಉಡುಗೊರೆ ಕೊಟ್ಟರು.

ಸಂಗೀತಾ, ಸಹ ಕಾರ್ತಿಕ್​ಗಾಗಿಯೇ ಪತ್ರ ಬರೆದಿದ್ದರು. ನಾವು ಇಂದು ಗೆಳೆಯರಲ್ಲದೇ ಇರಬಹುದು ಆದರೆ ಆರಂಭದ ದಿನಗಳಲ್ಲಿ ನಾವಿಬ್ಬರೂ ಆತ್ಮೀಯ ಗೆಳೆಯರು. ನೀವು ಈ ಮನೆಯಲ್ಲಿ ನನಗೆ ಬಹಳಷ್ಟು ಸಹಾಯ ಮಾಡಿದ್ದೀರಿ. ನಾನು ಬೇಸರದಲ್ಲಿರುವಾಗ ನನಗೆ ಬಂದು ಸ್ಪೂರ್ತಿ ತುಂಬಿದ್ದೀರಿ. ನೀವು ನನಗಾಗಿ ಏನೂ ಮಾಡಿಲ್ಲವೆಂದು ನಾನು ಹೇಳಿದರೆ ಅದು ಸುಳ್ಳು ಹೇಳಿದಂತಾಗುತ್ತದೆ. ಜಗಳವಾಡಿದಾಗ ನೀವು ಕೊಟ್ಟಿದ್ದ ಲಿಪ್​ಸ್ಟಿಕ್ ಹಾಗೂ ಒಂದು ಜಾಕೆಟ್ ಅನ್ನು ಇಂದು ಉಡುಗೊರೆಯಾಗಿ ಕೊಡುತ್ತೇನೆ ಎಂದು ಹೇಳಿ ಕಣ್ಣೀರಾದರು ಸಂಗೀತಾ. ಕಾರ್ತಿಕ್ ಸಹ ಕಣ್ಣೀರಾಗಿ ಇಬ್ಬರೂ ಪರಸ್ಪರ ತಬ್ಬಿಕೊಂಡು ಸ್ನೇಹಕ್ಕೆ ಮರುಜೀವ ನೀಡಿದರು.

ಇದನ್ನೂ ಓದಿ:ಮಾಡಿದ ತಪ್ಪಿಗೆ ಬಿಗ್​ಬಾಸ್ ಮನೆಯಿಂದ ಕ್ಷಮೆ ಕೇಳಿದ ಡ್ರೋನ್ ಪ್ರತಾಪ್

ತುಕಾಲಿ ಹಾಗೂ ವರ್ತೂರು ಪರಸ್ಪರರಿಗೆ ಪತ್ರ ಬರೆದುಕೊಂಡರು. ವರ್ತೂರು ಬರೆದ ಪತ್ರಕ್ಕಿಂತಲೂ ತುಕಾಲಿ, ವರ್ತೂರಿಗಾಗಿ ಸುಂದರವಾದ ಪತ್ರ ಬರೆದಿದ್ದರು. ಅಲ್ಲದೆ, ತಮಗೆ ಸಿಕ್ಕ ಒಂದು ಉತ್ತಮ ಮೆಡಲ್ ಅನ್ನು ವರ್ತೂರು ಅವರಿಗೆ ನೀಡಿದರು. ಗೆಳೆತನವನ್ನು ಹೀಗೆಯೇ ಮುಂದುವರೆಸುವುದಾಗಿ ಹೇಳಿದರು. ಡ್ರೋನ್ ಪ್ರತಾಪ್, ಸಂಗೀತಾಗಾಗಿ ಪತ್ರ ಬರೆದು ಅವರಿಗೆ ಧನ್ಯವಾದ ಹೇಳಿದರು.

ಕೊನೆಯದಾಗಿ ಬಂದ ವಿನಯ್, ಕಾರ್ತಿಕ್​ಗೆ ಪತ್ರ ಬರೆದು, ತಮ್ಮ ಹತ್ತು ವರ್ಷಗಳ ಗೆಳೆತನ ನೆನಪಿಸಿಕೊಂಡರು. ಕಾರ್ತಿಕ್ ಸಹ, ತಮ್ಮ ಬಳಿ ಹಣ ಇಲ್ಲದಾಗ ಹೇಗೆ ವಿನಯ್ ತಮಗೆ ಸಹಾಯ ಮಾಡಿದ್ದ ಎಂಬುದನ್ನು ನೆನಪಿಸಿಕೊಂಡು ಭಾವುಕರಾದರು. ಕೊನೆಗೆ ವಿನಯ್, ಈ ಮನೆಯಲ್ಲಿ ನಾವೆಲ್ಲರೂ ಬಹಳ ಜಗಳ ಮಾಡಿದ್ದೇವೆ. ನಾನಂತೂ ಬಹಳ ಜನಕ್ಕೆ ಬೇಸರ ಮಾಡಿದ್ದೇನೆ. ನನ್ನಿಂದ ಸಾಕಷ್ಟು ತಪ್ಪುಗಳಾಗಿವೆ. ಆ ತಪ್ಪುಗಳನ್ನೆಲ್ಲ ಮರೆತುಬಿಡಿ ಎಂದು ಮಂಡಿಯೂರಿ ಕೈಮುಗಿದು ಎಲ್ಲರ ಬಳಿ ಕ್ಷಮೆ ಕೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ