
ಮಾಡರ್ನ್ ಕವಿ ಮಂಜ, ತನ್ನ ಅಶ್ಲೀಲ, ಅವಾಚ್ಯ ಭಾಷೆಯ ಕಾರಣಕ್ಕೆ ಬಿಗ್ಬಾಸ್ ಮನೆಯಿಂದ ಹೊರದಬ್ಬಿಸಿಕೊಂಡಿದ್ದಾನೆ. ಸುದೀಪ್ ಅವರ ಕರುಣೆಯ ಕಾರಣಕ್ಕೆ ಮತ್ತೊಂದು ಅವಕಾಶ ಸಿಕ್ಕರೂ ಸಹ, ಕೇವಲ ಅತಿಥಿಯಾಗಿ ಬಂದು ಕೆಲ ವಾರ ಮನೆಯಲ್ಲಿದ್ದು ಕಳೆದ ವಾರವಷ್ಟೆ ಮತ್ತೆ ಮನೆಯಿಂದ ಹೊರಗೆ ಹೋಗಿದ್ದಾನೆ ಮಂಜ. ಆದರೆ ಮಂಜ ಮನೆ ಬಿಟ್ಟು ಹೋದರೂ ಅವನು ಬಳಸುತ್ತಿದ್ದ ಭಾಷೆ ಮನೆ ಬಿಟ್ಟು ಹೋಗಿಲ್ಲ. ಬೇರೆ ಕೆಲ ಸ್ಪರ್ಧಿಗಳು ಮತ್ತೆ ಅಂಥಹುದೇ ಭಾಷೆ ಬಳಸುತ್ತಿದ್ದಾರೆ.
ನಿನ್ನೆ (ಗುರುವಾರ) ಎಪಿಸೋಡಿನಲ್ಲಿ ಸಾಕಷ್ಟು ವಿಷಯಗಳು ನಡೆದವು. ಚಾಣಾಕ್ಷತನ, ಮೋಸ, ವಂಚನೆ, ತಂತ್ರ, ಕುತಂತ್ರ ಎಲ್ಲವೂ ನಡೆಯಿತು. ಯಾರೋ ಮಾಡಿದ ಕಾರ್ಯಕ್ಕೆ ಇನ್ಯಾರ ನಡುವೆಯೋ ಜಗಳಗಳು ನಡೆದು ಹೋದವು. ಧನುಶ್, ಗಾನವಿಯನ್ನು ನಂಬಿದ ಕಾರಣಕ್ಕೆ ಸಿಂಹದ ಕಿರೀಟ ತಪ್ಪಿಹೋಗಿ ಯಶಸ್ ಮುಡಿಗೇರಿತು. ಇದು ಧನುಶ್ ಮತ್ತು ಶಾಸ್ತ್ರಿ ನಡುವಿನ ಜಗಳಕ್ಕೆ ಕಾರಣವಾಯ್ತು.
ಶಾಸ್ತ್ರಿ ಪ್ರತಿಬಾರಿಯಂತೆ ಧನುಶ್ ಅನ್ನು ಆತನ ದಡ್ಡತನದ ಕಾರಣಕ್ಕೆ ರೇಗಿಸಲು ಪ್ರಾರಂಭಿಸಿದ. ಅದಾಗಲೇ ಗಗನ್, ತಾಂಡವ್ ಅವರಿಂದಲೂ ಟೀಕೆ ಎದುರಿಸಿದ್ದ ಧನುಶ್, ಒಮ್ಮೆಲೆ ಶಾಸ್ತ್ರಿ ಮೇಲೆ ಸಿಟ್ಟಿನಿಂದ ಉರಿದು ಬಿದ್ದ. ಈ ವೇಳೆ ಧನುಶ್ ಅಂತೂ ‘ಲೋ..’ ಪದಗಳು, ಕನ್ನಡದ ಕೆಲ ಬೈಗುಳದ ಪದಗಳನ್ನು ಶಾಸ್ತ್ರಿಯ ವಿರುದ್ಧ ಬಳಕೆ ಮಾಡಿದರು. ಶಾಸ್ತ್ರಿ ಸಹ ಸುಮ್ಮನೆ ಕೂರಲಿಲ್ಲ, ಪ್ರತಿಯಾಗಿ ಶಾಸ್ತ್ರಿಯೂ ಸಹ ಬೈಗುಳದ ಸುರಿಮಳೆ ಮಾಡಿದರು. ‘ನಾಯಿ‘, ‘ಹುಚ್ಚ ನಾಯಿ’, ‘ಹಚ್ಚ’, ‘ಹುಡುಗಿಯರ ಕಾಲು ನೆಕ್ಕುವವ’ ಹೀಗೆ ಹಲವು ಬೈಗುಳಗಳ ಸುರಿಮಳೆ ಮಾಡಿದರು. ಕೊನೆಗೆ ಧನುಶ್ ಮಾಡಿರುವ ಗಿನ್ನೀಸ್ ರೆಕಾರ್ಡ್ ಅನ್ನು ಸಹ ಟೀಕೆ ಮಾಡಿದರು.
ಇದನ್ನೂ ಓದಿ:ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
ಜಗಳ ಯಾವ ಮಟ್ಟಿಗೆ ಹೋಯ್ತೆಂದರೆ ಧನುಶ್ ಅಂತೂ ಶಾಸ್ತ್ರಿ ಜೊತೆಗೆ ಕೈ-ಕೈ ಮಿಲಾಯಿಸಲು ರೆಡಿಯಾಗಿಬಿಟ್ಟರು. ‘ತಾಕತ್ತಿದ್ದರೆ ಬಾರೋ ನೋಡೋಣ’ ಎನ್ನುತ್ತಾ, ಶಾಸ್ತ್ರಿ ಮೇಲೆ ಜಗಳಕ್ಕೆ ಏರಿ ಹೋದರು. ಶಾಸ್ತ್ರಿ ಬೀನ್ ಬೇನ್ ಮಲಗಿಕೊಂಡೇ ಖಾರವಾದ ಉತ್ತರಗಳನ್ನು ಕೊಡುತ್ತಾ ಧನುಶ್ ಅನ್ನು ಇನ್ನಷ್ಟು ಕೆಣಕಿದರು. ಬಳಿಕ ಗಗನ್ ಮತ್ತು ತಾಂಡವ್ ರಾಮ್ ಅವರು ಮಧ್ಯ ಪ್ರವೇಶಿಸಿ ಜಗಳ ನಿಲ್ಲಿಸಬೇಕಾಯ್ತು. ಮಾಡರ್ನ್ ಕವಿ ಮಂಜನಷ್ಟು ಹೊಲಸು ಮಾತುಗಳನ್ನು ಧನುಶ್ ಮತ್ತು ಶಾಸ್ತ್ರಿ ಆಡಲಲ್ಲವಾದರೂ ಕೆಲ ಅವಾಚ್ಯ ಪದಗಳನ್ನಂತೂ ಪರಸ್ಪರ ಬಳಸಿಕೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ