ಟಾಸ್ಕ್ ವೇಳೆ ಎದುರಾಳಿಗಳ ಕ್ರೂರತೆಗೆ ಗುರಿಯಾಗಿ ಕಣ್ಣಿಗೆ ಹಾನಿ ಆಗಿ ಆಸ್ಪತ್ರೆ ಸೇರಿದ್ದ ಸಂಗೀತಾ ಶೃಂಗೇರಿ (Sangeetha Sringeri) ಹಾಗೂ ಡ್ರೋನ್ ಪ್ರತಾಪ್ (Drone Prathap) ಮನೆಗೆ ಮರಳಿದ್ದಾರೆ. ಕಣ್ಣಿಗೆ ಹಾನಿ ಆಗಿದ್ದ ಕಾರಣ ಇಬ್ಬರಿಗೂ ಗಾಢ ಕಪ್ಪು ಬಣ್ಣದ ಕನ್ನಡಕಗಳನ್ನು ನೀಡಲಾಗಿದೆ. ಕಪ್ಪು ಕನ್ನಡಕಗಳನ್ನು ಧರಿಸಿ ಸರಿಯಾಗಿ ನೋಡಲಾರದೆ ಕಷ್ಟಪಟ್ಟು ಮನೆಯ ಒಳಗೆ ಇಬ್ಬರೂ ಬಂದಿದ್ದಾರೆ. ಈ ದೃಶ್ಯ ನೋಡಿ ಮನೆಯ ಸ್ಪರ್ಧಿಗಳು ಆತಂಕಿತರಾಗಿದ್ದಾರೆ.
ಕುರ್ಚಿಯಿಂದ ಎಬ್ಬಿಸುವ ಟಾಸ್ಕ್ನಲ್ಲಿ ಸಂಗೀತಾರನ್ನು ಟಾರ್ಗೆಟ್ ಮಾಡಿದ್ದ ಎದುರಾಳಿ ಸ್ಪರ್ಧಿಗಳು, ನೀರಿಗೆ ಸೋಪಿನ ಪುಡಿ, ಟಾಯ್ಲೆಟ್ ತೊಳೆಯುವ ಲಿಕ್ವಿಡ್, ಖಾರದ ಪುಡಿಗಳನ್ನು ಬೆರೆಸಿ ಸಂಗೀತಾ ಮೇಲೆ ಸತತ ದಾಳಿ ಮಾಡಿದ್ದರು. ವಿನಯ್ ಅಂತೂ ಅತ್ಯಂತ ಬಲವಾಗಿ ಸಂಗೀತಾ ಮುಖಕ್ಕೆ ನೀರೆರೆಚಿದ್ದರು. ಮೈಖಲ್, ನಮ್ರತಾ, ವರ್ತೂರು ಹಾಗೂ ಪವಿ ಅವರುಗಳು ಸಹ ಅದಕ್ಕೆ ಸಾಥ್ ನೀಡಿದ್ದರು. ಸೋಪು, ಖಾರದ ಪುಡಿ ಬೆರೆತ ನೀರು ಕಣ್ಣಿಗೆ ಹೋಗಿದ್ದರಿಂದ ಸಂಗೀತಾರ ಕಣ್ಣಿಗೆ ಹಾನಿ ಆಗಿತ್ತು. ಡ್ರೋನ್ ಪ್ರತಾಪ್ ಮೇಲೆಯೂ ವಿನಯ್ ಆಂಡ್ ಗ್ಯಾಂಗ್ ಹೀಗೆಯೇ ಮಾಡಿತು ಹಾಗಾಗಿ ಪ್ರತಾಪ್ ಕಣ್ಣಿಗೂ ಹಾನಿಯಾಯ್ತು. ಇಬ್ಬರನ್ನೂ ಆಸ್ಪತ್ರೆಗೆ ಕಳಿಸಿ ಚಿಕಿತ್ಸೆ ನೀಡಲಾಗಿತ್ತು.
ಇದೀಗ ಇಬ್ಬರೂ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ವಾಪಸ್ಸಾಗಿದ್ದಾರೆ. ಎಲ್ಲ ಸದಸ್ಯರು ಲಿವಿಂಗ್ ಏರಿಯಾನಲ್ಲಿರುವಾಗ ಮುಖ್ಯ ದ್ವಾರದಿಂದ ಸಂಗೀತಾ ಹಾಗೂ ಪ್ರತಾಪ್ ಒಳಬಂದಿದ್ದಾರೆ. ಇಬ್ಬರೂ ಸಹ ಕಣ್ಣಿಗೆ ಗಾಢ ಕಪ್ಪು ಬಣ್ಣದ ಕನ್ನಡಕ ಧರಿಸಿದ್ದಾರೆ. ಹಾಗಿದ್ದರೂ ಬಿಸಿಲಿಗೆ ಕೈ ಅಡ್ಡ ಹಿಡಿದುಕೊಂಡು ಕಷ್ಟಪಟ್ಟು ಮನೆಯೊಳಗೆ ಬಂದಿದ್ದಾರೆ. ಸಂಗೀತಾರನ್ನು ತಬ್ಬಿ ಅತ್ತಿದ್ದಾರೆ ತನಿಷಾ, ಮನೆಯ ಸದಸ್ಯರೆಲ್ಲ ಗಾಬರಿಯಾಗಿ ಸಂಗೀತಾ ಹಾಗೂ ಪ್ರತಾಪ್ರನ್ನು ಮುತ್ತಿಕೊಂಡಿದ್ದಾರೆ.
ಇದನ್ನೂ ಓದಿ:ಚೇತರಿಕೆ ಕಾಣಲು ಸಂಗೀತಾಗೆ ಇನ್ನೂ ಬೇಕು ಸಮಯ
ಸಿರಿ ಅವರು ವಿಚಾರಿಸಿದಾಗ ‘ನಾನು ಸರಿಯಾಗಿದ್ದೇನೆ, ಏನೂ ಆಗಿಲ್ಲ’ ಎಂದು ಸಂಗೀತಾ ಬೇಸರದಿಂದಲೇ ಹೇಳಿದ್ದಾರೆ. ಡ್ರೋನ್ ಪ್ರತಾಪ್ ಸಹ ವರ್ತೂರು ಬಳಿ, ‘ಕಣ್ಣು ಕಾಣಿಸುತ್ತಿದೆ’ ಎಂದು ಹೇಳಿದ್ದಾರೆ. ಕಾರ್ತಿಕ್ ಅಂತೂ ಇಬ್ಬರನ್ನೂ ಆ ಸ್ಥಿತಿಯಲ್ಲಿ ನೋಡಿ ಕಣ್ಣೀರು ಹಾಕಿದ್ದಾರೆ. ವಿನಯ್ ಸಂಗೀತಾ ಹಾಗೂ ಪ್ರತಾಪ್ರನ್ನು ಎದುರುಗೊಳ್ಳಲಿಲ್ಲವಾದರೂ ಅವರನ್ನು ಕಂಡು ಆತಂಕಿತಗೊಂಡಂತೆ ಕಾಣುತ್ತಿದ್ದಾರೆ. ಸದ್ಯಕ್ಕೆ ಪ್ರೋಮೋ ಅಷ್ಟೆ ಬಿಡುಗಡೆ ಆಗಿದ್ದು, ಸಂಗೀತಾ ಹಾಗೂ ಪ್ರತಾಪ್ರ ಕಣ್ಣಿಗೆ ಎಷ್ಟು ಹಾನಿ ಆಗಿದೆ ಎಂಬ ಬಗ್ಗೆ ಪೂರ್ಣ ಮಾಹಿತಿ ಇಂದಿನ ರಾತ್ರಿಯ ಎಪಿಸೋಡ್ನಲ್ಲಿ ಗೊತ್ತಾಗಲಿದೆ.
ಇಂದು (ಶನಿವಾರ) ಕಿಚ್ಚನ ಪಂಚಾಯ್ತಿ ನಡೆಯಲಿದೆ ಈ ವಾರ ಯಾರ್ಯಾರು ತಪ್ಪು ಮಾಡಿದ್ದಾರೋ, ಕ್ರೂರವಾಗಿ ನಡೆದುಕೊಂಡಿದ್ದಾರೆಯೋ ಅವರಿಗೆಲ್ಲ ತಕ್ಕ ಶಾಸ್ತಿ ಆಗಲಿದೆ ಎಂದು ಬಿಗ್ಬಾಸ್ ಪ್ರೇಕ್ಷಕರ ನಂಬಿಕೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:56 pm, Sat, 9 December 23