ಡ್ರೋನ್ ಪ್ರತಾಪ್ಗೆ ಕ್ಲಾಸ್ ತೆಗೆದುಕೊಂಡ ಸುದೀಪ್, ಚಪ್ಪಾಳೆ ಯಾರಿಗೆ?
Bigg Boss: ಆರಂಭದಲ್ಲಿ ಮನೆಯ ಸದಸ್ಯರಿಂದ ಗೇಲಿಗೆ ಒಂದು ರೀತಿಯ ದೌರ್ಜನ್ಯಕ್ಕೆ ಗುರಿಯಾಗಿದ್ದ ಡ್ರೋನ್ ಪ್ರತಾಪ್ಗೆ ಬೆಂಬಲ ನೀಡಿದ್ದೇ ಸುದೀಪ್, ಆದರೆ ಕಳೆದ ವಾರ ಅವರಾಡಿದ ಆಟವನ್ನು ಟೀಕಿಸಿ ಬುದ್ಧಿ ಹೇಳಿದರು ಕಿಚ್ಚ.

ಡ್ರೋನ್ ಪ್ರತಾಪ್ (Drone Prathap) ಬಿಗ್ಬಾಸ್ ಮನೆಗೆ ಬಂದಾಗ ಸ್ನೇಹಿತ್, ವಿನಯ್, ತುಕಾಲಿ ಸಂತು ಅವರಿಂದ ತೀವ್ರ ವ್ಯಂಗ್ಯ, ಹಾಸ್ಯ ಒಂದು ರೀತಿಯ ದೌರ್ಜನ್ಯಕ್ಕೆ ಒಳಗಾಗಿದ್ದರು. ಮನೆಯ ಹಲವು ಸದಸ್ಯರು ಅವರನ್ನು ಆಡಿಕೊಂಡಿದ್ದರು. ಆ ಸಮಯದಲ್ಲಿ ಡ್ರೋನ್ ಪ್ರತಾಪ್ ಪರವಾಗಿ ನಿಂತಿದ್ದು ಕಿಚ್ಚ ಸುದೀಪ್ (Kichcha Sudeep), ಡ್ರೋನ್ ಪ್ರತಾಪ್ ಬಿಗ್ಬಾಸ್ ಮನೆಯಲ್ಲಿ ಚೆನ್ನಾಗಿ ಆಡಲು, ಎಲ್ಲ ಭಯಗಳಿಂದ ಹೊರಗೆ ಬರುವಂತೆ ಮಾಡಿದರು. ಮಾತ್ರವಲ್ಲದೆ ಕಿಚ್ಚನ ಚಪ್ಪಾಳೆಯನ್ನೂ ನೀಡಿ ಹುರಿದುಂಬಿಸಿದರು. ಆದರೆ ಶನಿವಾರದ ಎಪಿಸೋಡ್ನಲ್ಲಿ ಪ್ರತಾಪ್ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರು, ತಪ್ಪುಗಳನ್ನು ಮುಖಕ್ಕೆ ಹೇಳಿದರು.
ಡ್ರೋನ್ ಪ್ರತಾಪ್ ಕಳೆದ ವಾರ ತಂಡದ ಲೀಡರ್ ಆಗಿದ್ದರು. ಕಳೆದ ಬಾರಿ ಲೀಡರ್ ಆಗಿದ್ದಾಗ ಕಿಚ್ಚನಿಂದ ಚಪ್ಪಾಳೆ ತೆಗೆದುಕೊಂಡಿದ್ದ ಡ್ರೋನ್, ಈ ಬಾರಿ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಂಡು ತಮ್ಮ ತಂಡ ಸೋಲುವಂತೆ ಮಾಡಿದರು. ಆರಂಭದಲ್ಲಿಯೇ ಕಾರ್ತಿಕ್ ಅನ್ನು ಹೊರಗಿಟ್ಟರು, ಎದುರಾಳಿ ತಂಡದಿಂದ ಕರೆದುಕೊಂಡು ಬಂದಿದ್ದ ನಮ್ರತಾರನ್ನು ಕ್ಯಾಪ್ಟೆನ್ಸಿ ಟಾಸ್ಕ್ನಿಂದ ಹೊರಗಿಟ್ಟರು. ಟಾಸ್ಕ್ಗಳಲ್ಲಿ ಸಹ ಸರಿಯಾಗಿ ಪ್ರದರ್ಶನ ತೋರಲಿಲ್ಲ. ಹಾಗಾಗಿ ತಂಡ ಹೀನಾಯ ಸೋಲು ಕಂಡಿತು.
ಇದನ್ನೂ ಓದಿ:ಮನೆಯವರ ಎಲ್ಲರ ಆಯ್ಕೆಯೂ ಒಬ್ಬರೇ; ಡ್ರೋನ್ ಪ್ರತಾಪ್ಗೆ ಕಳಪೆ ಪಟ್ಟ
ಪ್ರತಾಪ್ ಮಾಡಿದ ತಪ್ಪುಗಳನ್ನೆಲ್ಲ ಎತ್ತಿ ತೋರಿಸಿದ ಸುದೀಪ್, ಕಳೆದ ಬಾರಿ ನೀವು ಲೀಡರ್ ಆಗಿದ್ದಾಗ ಇಡೀ ತಂಡ ನಿಮಗೆ ಎದುರಾಗಿತ್ತು ಆಗ ನಾನು ನಿಮಗೆ ಕಿಚ್ಚನ ಚಪ್ಪಾಳೆ ನೀಡಿದ್ದೆ, ಆದರೆ ಈ ಬಾರಿ ನೀವು ತಪ್ಪು ಮಾಡಿದ್ದೀರಿ, ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡಿದಿರಿ ಎಂದರು. ಉಸ್ತುವಾರಿ ಆಗಿ ಮಾಡಬೇಕಾದ ಕೆಲಸವನ್ನು ನಾಯಕನಾಗಿ ಮಾಡಲು ಹೋದರಿ, ಆಟವನ್ನು ಸರಿಯಾಗಿ ಗ್ರಹಿಸಲಿಲ್ಲ, ನಿಮ್ಮನ್ನು ನಂಬಿಕೆಯಿಟ್ಟು ಆರಿಸಿದ ತಂಡಕ್ಕೆ ಅಪಮಾನ ಮಾಡಿದಿರಿ ಎಂದು ಟೀಕಿಸಿದರು. ಪ್ರತಾಪ್ ಸಹ ಸುದೀಪ್ ಮಾತು ಒಪ್ಪಿಕೊಂಡು ತಂಡದ ಕ್ಷಮೆ ಕೇಳಿದರು.
ಅದಾದ ಬಳಿಕ ಈ ವಾರದ ಕಿಚ್ಚನ ಚಪ್ಪಾಳೆ ನೀಡುವ ಸಮಯ ಬಂತು. ಕಳೆದ 50 ದಿನದಿಂದ ಒಂದೇ ತಂಡದಲ್ಲಿ ಆಡಿದ್ದ ನಮ್ರತಾ, ಈ ವಾರ ತಮ್ಮ ಕಂಫರ್ಟ್ ಜೋನ್ ಬಿಟ್ಟು ಹೊರಬಂದು ಡ್ರೋನ್ ಪ್ರತಾಪ್ ತಂಡ ಸೇರಿದ್ದು, ಅಲ್ಲಿ ಪ್ರತಾಪ್ರಿಂದ ಮೋಸವಾದರೂ ಪ್ರಯತ್ನ ಬಿಡದೆ ಎಲ್ಲ ಟಾಸ್ಕ್ಗಳನ್ನು ಆಡಿ ಗೆಲ್ಲಲು ಯತ್ನಿಸಿದ್ದು ಅಂತಿಮವಾಗಿ, ಇಷ್ಟು ದಿನ ತಮ್ಮ ವಿರೋಧಿ ಎಂದುಕೊಂಡಿದ್ದ ತನಿಷಾ ಪರವಾಗಿ ಕ್ಯಾಪ್ಟನ್ಸಿ ಟಾಸ್ಕ್ ಆಡಿದ್ದು ಎಲ್ಲವನ್ನೂ ಪರಿಗಣಿಸಿ ನಮ್ರತಾಗೆ ಚಪ್ಪಾಳೆ ನೀಡಿದರು ಸುದೀಪ್. ವಿಶೇಷವೆಂದರೆ ನಮ್ರತಾ ಈ ವಾರ ಅತಿ ಹೆಚ್ಚು ಮತಗಳಿಸಿದವರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ