ಬಿಗ್​ಬಾಸ್ ಕ್ಯಾಪ್ಟನ್ ಮನೆಗೆ ಬೀಗ ಹಾಕಿಸಿದ ಕಿಚ್ಚ ಸುದೀಪ್: ಕಾರಣವೇನು?

Bigg Boss: ವರ್ತೂರು ಸಂತೋಷ್ ಈ ವಾರ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಆದರೆ ಶನಿವಾರ ‘ವಾರಾಂತ್ಯದ ಪಂಚಾಯಿತಿ’ ನಡೆಸಿದ ಸುದೀಪ್, ವರ್ತೂರು ಅವರ ಕ್ಯಾಪ್ಟೆನ್ಸಿ ರದ್ದು ಮಾಡಿ, ಕ್ಯಾಪ್ಟನ್ ರೂಂಗೆ ಬೀಗ ಹಾಕಿಸಿದ್ದಾರೆ. ಕಾರಣವೇನು?

ಬಿಗ್​ಬಾಸ್ ಕ್ಯಾಪ್ಟನ್ ಮನೆಗೆ ಬೀಗ ಹಾಕಿಸಿದ ಕಿಚ್ಚ ಸುದೀಪ್: ಕಾರಣವೇನು?
ವರ್ತೂರು-ಸುದೀಪ್
Follow us
ಮಂಜುನಾಥ ಸಿ.
|

Updated on: Dec 09, 2023 | 10:30 PM

ಬಿಗ್​ಬಾಸ್ (BiggBoss) ಮನೆಯಲ್ಲಿ ಕಳೆದ ವಾರ ಬಹುತೇಕ ಎಲ್ಲ ಸ್ಪರ್ಧಿಗಳು ನಿಯಮ ಮೀರಿದ್ದಾರೆ, ಕೆಲವರು ಮಾನವೀಯತೆಯನ್ನೇ ಮೀರಿ ವರ್ತಿಸಿದ್ದಾರೆ. ಒಬ್ಬರ ಮೇಲೊಬ್ಬರು ಕೂಗಾಡಿದ್ದಾರೆ, ಕಿರುಚಾಡಿದ್ದಾರೆ, ಜಗಳ ಮಾಡಿದ್ದಾರೆ, ವೈಯಕ್ತಿಕ ದ್ವೇಷಗಳನ್ನು ತೀರಿಸಿಕೊಂಡಿದ್ದಾರೆ. ರಾಕ್ಷಸ-ಗಂಧರ್ವರ ಆಟದಲ್ಲಿ ಬಹುತೇಕ ಸ್ಪರ್ಧಿಗಳು ರಾಕ್ಷಸರಂತೆಯೇ ವರ್ತಿಸಿದ್ದಾರೆ. ಪ್ರೇಕ್ಷಕರು ಸಹ ಈ ವಾರ ಸ್ಪರ್ಧಿಗಳು ನಡೆದುಕೊಂಡ ರೀತಿ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ. ಶನಿವಾರ ಸುದೀಪ್ ಬಂದು ಹೇಗೆ ಸ್ಪರ್ಧಿಗಳಿಗೆ ಬುದ್ಧಿ ಹೇಳುತ್ತಾರೆ? ಹೇಗೆ ತರಾಟೆಗೆ ತೆಗೆದುಕೊಳ್ಳುತ್ತಾರೆ ಎಂದು ಕಾತರದಿಂದಿದ್ದರು. ಅಂತೆಯೇ ಸುದೀಪ್ ತಪ್ಪು ಮಾಡಿದವರಿಗೆ ಅವರ ತಪ್ಪನ್ನು ಮುಖಕ್ಕೆ ಹಿಡಿದು ತೋರಿಸಿದ್ದಾರೆ.

ಈ ವಾರ ವರ್ತೂರು ಸಂತೋಷ್ ಮನೆಯ ಕ್ಯಾಪ್ಟನ್ ಆಗಿದ್ದಾರೆ ಎಂಬುದು ಗೊತ್ತಿರುವ ವಿಷಯವೇ. ಆದರೆ ಶನಿವಾರ ಪಂಚಾಯಿತಿ ನಡೆಸಿದ ಸುದೀಪ್, ಕ್ಯಾಪ್ಟನ್ ಮನೆಗೆ ಬೀಗ ಹಾಕಿಸಿದ್ದಾರೆ, ಮಾತ್ರವಲ್ಲದೆ ವರ್ತೂರು ಅವರ ಕ್ಯಾಪ್ಟೆನ್ಸಿಯನ್ನೇ ರದ್ದು ಮಾಡಿ, ಅವರ ಇಮ್ಯೂನಿಟಿಯನ್ನು ಸಹ ರದ್ದು ಮಾಡಿದ್ದಾರೆ. ಇದಕ್ಕೆಲ್ಲ ಕಾರಣವೂ ಇದೆ.

ಕ್ಯಾಪ್ಟನ್ ಆಯ್ಕೆ ಮಾಡಲು ಬಿಗ್​ಬಾಸ್ ಟಾಸ್ಕ್ ಒಂದನ್ನು ನೀಡಿದ್ದರು. ತಿರುಗುವ ಹಲಗೆ ಮೇಲಿರುವ ಕುರ್ಚಿಯಲ್ಲಿ ಕುಳಿತು, 13 ನಿಮಿಷಗಳನ್ನು ಮನಸ್ಸಿನಲ್ಲಿಯೇ ಎಣಿಸಿ ಮೇಲೆ ಕಟ್ಟಿರುವ ಗಂಟೆಯನ್ನು ಬಾರಿಸಬೇಕಿತ್ತು. ಸಿರಿ, ಮೈಖಲ್, ವರ್ತೂರು ಸಂತೋಷ್ ಹಾಗೂ ಅವಿನಾಶ್ ಅವರುಗಳು ಸ್ಪರ್ಧೆಯಲ್ಲಿದ್ದರು. ವರ್ತೂರು ಸಂತೋಷ್ 12:15 ಸೆಕೆಂಡ್ ಲೆಕ್ಕ ಹಾಕಿ ಗಂಟೆ ಹೊಡೆದು, 13 ನಿಮಿಷಕ್ಕೆ ಅತ್ಯಂತ ಸಮೀಪವಿದ್ದ ಕಾರಣ ಅವರು ಟಾಸ್ಕ್​ನಲ್ಲಿ ಗೆದ್ದು ಕ್ಯಾಪ್ಟನ್ ಆಗಿದ್ದರು.

ಇದನ್ನೂ ಓದಿ:ಸುದೀಪ್ ಸರ್, ನೀವು ಹೇಳಿದ್ದೇನು? ಆಗುತ್ತಿರುವುದೇನು: ಸಂಗೀತಾ ಸಹೋದರ ಪ್ರಶ್ನೆ

ಆದರೆ ಶನಿವಾರದ ಪಂಚಾಯಿತಿಯಲ್ಲಿ ವರ್ತೂರು ಸಂತೋಷ್ ಮಾಡಿದ್ದ ಮೋಸ ಬಯಲಾಗಿದೆ. ಆಗಿರುವುದೇನೆಂದರೆ, ವರ್ತೂರು ಸಂತೋಷ್, ತಿರುಗುವ ಹಲಗೆಯ ಮೇಲಿನ ಕುರ್ಚಿಯ ಮೇಲೆ ಕೂತಿದ್ದರು, ಕೆಳಗೆ ಹಲಗೆ ಬಳಿ ನಿಂತು ಹಲಗೆಯನ್ನು ತಿರುಗಿಸುತ್ತಿದ್ದ ವಿನಯ್, ವರ್ತೂರು ಪರವಾಗಿ 13 ನಿಮಿಷಗಳನ್ನು ಲೆಕ್ಕ ಹಾಕಿ, ಹಲಗೆಗೆ ಜೋರಾಗಿ ಹೊಡೆದರು, ಆ ಸಂಜ್ಞೆ ಅರಿತ ವರ್ತೂರು ಸಂತೋಷ್, ಕೂಡಲೇ ಗಂಟೆ ಭಾರಿಸಿ ಟಾಸ್ಕ್ ಮುಗಿಸಿದರು.

ಟಾಸ್ಕ್​ ಅನ್ನು ನ್ಯಾಯಯುತವಾಗಿ ಆಡದೆ, ಹಿಂದಿನ ದಾರಿಯಲ್ಲಿ ಕ್ಯಾಪ್ಟನ್ ಆದ ವರ್ತೂರು ಸಂತೋಷ್ ಅವರ ಕ್ಯಾಪ್ಟೆನ್ಸಿಯನ್ನು ಸುದೀಪ್ ರದ್ದು ಮಾಡಿ, ಕ್ಯಾಪ್ಟನ್ ರೂಂಗೆ ಬೀಗ ಹಾಕಿಸಿದರು. ಮಾತ್ರವಲ್ಲದೆ, ವರ್ತೂರು ಅವರ ಇಮ್ಮೂನಿಟಿ ರದ್ದು ಮಾಡಿದರು. ಕ್ಯಾಪ್ಟೆನ್ಸಿಯನ್ನು ಗಂಭೀರವಾಗಿ ಪರಿಗಣಿಸದ ವಿನಯ್ ಹಾಗೂ ವರ್ತೂರು ಸಂತೋಷ್​ಗೆ ಮಾತಿನ ಛಾಟಿ ಸಹ ಬೀಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ