ಬಿಗ್ಬಾಸ್ ಕನ್ನಡ ಸೀಸನ್ 10ರ (Bigg Boss) ಇತ್ತೀಚೆಗಿನ ಎಪಿಸೋಡ್ಗಳ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಸ್ಪರ್ಧಿಗಳು ಹಿಂಸಾತ್ಮಕವಾಗಿ ವರ್ತಿಸುತ್ತಿದ್ದಾರೆ, ಪರಸ್ಪರರ ಬಗ್ಗೆ ಕಠೋರ ಮಾತುಗಳನ್ನಾಡುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಇದರ ನಡುವೆ ಇತ್ತೀಚೆಗಿನ ಟಾಸ್ಕ್ ಒಂದರಲ್ಲಿ ಎದುರಾಳಿ ಸ್ಪರ್ಧಿಗಳು ಹಿಂಸಾತ್ಮಕವಾಗಿ ಆಡಿದ ಕಾರಣ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಅವರುಗಳಿಗೆ ಗಾಯವಾಗಿದೆ. ಈ ಬಗ್ಗೆ ಸಂಗೀತಾರ ಸಹೋದರ ಸುದೀಪ್ ಅವರನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರಶ್ನೆ ಮಾಡಿದ್ದಾರೆ.
‘‘ಕಿಚ್ಚ ಸುದೀಪ್, ಬಿಗ್ಬಾಸ್ ಮನೆ ಸ್ವರ್ಗದಷ್ಟೆ ಸುರಕ್ಷಿತವಾದದ್ದು, ಯಾವ ಕಾರಣಕ್ಕೂ ಅಪಾಯಕ್ಕೆ ಆಸ್ಪದವೇ ಇಲ್ಲ ಎಂದು ನೀವು ಭರವಸೆ ನೀಡಿದ್ದಿರಿ. ಆದರೆ ನೀವು ಕೊಟ್ಟ ಭರವಸೆಯನ್ನು ಈಗ ಬಿಗ್ಬಾಸ್ ಮನೆಯೊಳಗೆ ನಡೆದಿರುವ ಘಟನೆಗಳು ಮುರಿದು ಹಾಕಿವೆ. ಒಂದೊಮ್ಮೆ ಕೌಟುಂಬಿಕ ಕಾರ್ಯಕ್ರಮ ಆಗಿದ್ದ ಬಿಗ್ಬಾಸ್ ಈಗ ಆಕ್ರಮಣಕಾರಿ ಮತ್ತು ತಡೆಯಿಲ್ಲದ ಹಿಂಸೆಗೆ ವೇದಿಕೆ ಆದಂತಾಗಿದೆ. ಕುಟುಂಬಗಳು ಆತಂಕದಲ್ಲಿವೆ. ಹೇಗೆತಾನೆ ನಾವು ಒಟ್ಟಿಗೆ ಕೂತು ಈ ಆಕ್ರಮಣಶೀಲತೆ, ಹಿಂಸೆಯನ್ನು ನೋಡಲು ಸಾಧ್ಯ’’ ಎಂದು ಪ್ರಶ್ನೆ ಮಾಡಿದ್ದಾರೆ ಸಂಗೀತಾರ ಸಹೋದರ ಸಂತೋಷ್ ಕುಮಾರ್.
ಮುಂದುವರೆದು, ಕಲರ್ಸ್ ಕನ್ನಡ ಚಾನೆಲ್ ಅನ್ನು ಸಹ ಪ್ರಶ್ನೆ ಮಾಡಿರುವ ಸಂತೋಷ್ ಕುಮಾರ್, ‘‘ಮನೆಯಲ್ಲಿ ಆಗಿರುವ ಸಮಸ್ಯೆಗಳನ್ನು ಪರಿಹರಿಸಲು, ಬುದ್ಧಿಹೇಳಲು ಸುದೀಪ್ ಅವರೇ ಬರಬೇಕು ಎಂದು ಕಾಯುವುದು ಏಕೆ? ಸ್ಪರ್ಧಿಗಳು ಮಾಡಿದ ತಪ್ಪನ್ನು ಸ್ಥಳದಲ್ಲಿಯೇ ಬಿಗ್ಬಾಸ್ ಸರಿ ಮಾಡಬಹುದಲ್ಲವೇ? ಏಕೆ ಮಾಡುತ್ತಿಲ್ಲ’’ ಎಂದು ಸಹ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:ಈ ವಾರ ಬಿಗ್ಬಾಸ್ ಮನೆಯಲ್ಲಿ ಅತಿ ಹೆಚ್ಚು ಮತ ಗಳಿಸಿರುವುದು ಯಾರು? ಡ್ರೋನ್ ಪ್ರತಾಪ್ಗೆ ಎಷ್ಟನೆ ಸ್ಥಾನ?
ಬಿಗ್ಬಾಸ್ ಮನೆಯಲ್ಲಿ ಈ ವಾರ ಅತಿಯಾದ ಹಿಂಸೆ ನಡೆದಿದೆ. ಕಾರ್ತಿಕ್ ಹಾಗೂ ವಿನಯ್ ಪರಸ್ಪರ ಕೈ-ಕೈ ಮಿಲಾಯಿಸುವ ಹಂತಕ್ಕೆ ಜಗಳವಾಡಿದರು. ಸಂಗೀತಾ-ನಮ್ರತಾ ಜಗಳವೂ ಸಹ ಕರ್ಣ ಕಠೋರವಾಗಿತ್ತು. ಶುಕ್ರವಾರದ ಎಪಿಸೋಡ್ನಲ್ಲಂತೂ ವಿನಯ್, ಮೈಖಲ್, ನಮ್ರತಾ, ಪವಿ ಹಾಗೂ ವರ್ತೂರು ಅವರುಗಳು ಮಾನವೀಯತೆಯ ಗಡಿ ಮೀರಿ ವರ್ತಿಸಿದರು. ಕುರ್ಚಿಯಲ್ಲಿ ಕೂತಿದ್ದ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ರನ್ನು ಎಬ್ಬಿಸಲು ಸೋಲು, ಡೆಟಾಲ್, ಖಾರದ ಪುಡಿ ಇನ್ನಿತರೆ ಬೆರೆಸಿದ ನೀರನ್ನು ಸತತವಾಗಿ ಮತ್ತು ಬಲವಾಗಿ ಎಸೆದರು. ಇದರಿಂದ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಮುಖ, ಕಣ್ಣಿಗೆ ಹಾನಿಯಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯ್ತು.
ಶನಿವಾರ ಸುದೀಪ್ ವಾರದ ಪಂಚಾಯ್ತಿ ನಡೆಸಲಿದ್ದಾರೆ. ಟಾಸ್ಕ್ಗಳಲ್ಲಿ ತಪ್ಪು ಮಾಡಿದವರಿಗೆ ಇಂದು ಶಿಕ್ಷೆಯಾಗುವ ನಿರೀಕ್ಷೆ ಇದೆ. ಜೊತೆಗೆ ಈ ವಾರ ಯಾರು ಹೊರಗೆ ಹೊಗುತ್ತಾರೆ, ಯಾರು ಉಳಿದುಕೊಳ್ಳುತ್ತಾರೆ ಎಂಬ ಕುತೂಹಲಕ್ಕೂ ಅರ್ಧ ಉತ್ತರ ಸಿಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Sat, 9 December 23