ಕ್ಯಾಪ್ಟನ್ ಮೇಲೆ ತಂಡದ ಅಸಮಾಧಾನ, ಆಕ್ರೋಶ ಹೊರಹಾಕಿದ ಡ್ರೋನ್ ಪ್ರತಾಪ್
ಬಿಗ್ಬಾಸ್ ಮನೆಯ ಪ್ರಮುಖ ಸ್ಪರ್ಧಿಯಾಗಿ ಮಾರ್ಪಟ್ಟಿರುವ ಡ್ರೋನ್ ಪ್ರತಾಪ್, ಇತ್ತೀಚೆಗೆ ಜೋರಾಗಿ ಮಾತನಾಡಲು ಶುರು ಮಾಡಿದ್ದರು. ಬುಧವಾರದ ಎಪಿಸೋಡ್ನಲ್ಲಂತೂ ತೀವ್ರ ಸಿಟ್ಟನ್ನು ಪ್ರದರ್ಶಿಸಿದರು.
ಬಿಗ್ಬಾಸ್ (Bigg Boss) ಮನೆಯ ಪ್ರಮುಖ ಸ್ಪರ್ಧಿಯಾಗಿ ಮಾರ್ಪಟ್ಟಿರುವ ಡ್ರೋನ್ ಪ್ರತಾಪ್, ಶೋ ಪ್ರಾರಂಭವಾದ ಮೊದಲ ಕೆಲವು ವಾರ ಮೌನವಾಗಿರುತ್ತಿದ್ದರು, ಯಾರಾದರೂ ಏನಾದರೂ ಅಂದರೆ, ವ್ಯಂಗ್ಯ ಮಾಡಿದರೆ ಬಾತ್ರೂಂಗೆ ಹೋಗಿ ಅಳುತ್ತಿದ್ದರು, ಸುದೀಪ್ ಧೈರ್ಯ ತುಂಬಿದ ಮೇಲೆ ಧೈರ್ಯವಾಗಿ ಮಾತನಾಡಲು ಆರಂಭಿಸಿದ್ದಾರೆ. ಈಗ ತಂಡದ ಕ್ಯಾಪ್ಟನ್ ಸಹ ಆಗಿ ಸತತವಾಗಿ ಎರಡು ಟಾಸ್ಕ್ ಸಹ ಗೆದ್ದರು. ಆದರೆ ಮೂರನೇ ಟಾಸ್ಕ್ ವೇಳೆಗೆ ತಂಡದ ಸದಸ್ಯರ ಅಸಮಾಧಾನಕ್ಕೆ ಗುರಿಯಾದರು.
ಬುಧವಾರದ ಎಪಿಸೋಡ್ನಲ್ಲಿ ಬಿಗ್ಬಾಸ್ ‘ಬೊಂಬೆಯಾಟವಯ್ಯ’ ಟಾಸ್ಕ್ ನೀಡಿದ್ದರು. ಆ ಟಾಸ್ಕ್ಗೆ ಎರಡೂ ತಂಡದ ನಾಯಕರು ಉಸ್ತುವಾರಿ ವಹಸಿದ್ದರು. ಒಂದು ತಂಡದವರು ಕಲ್ಲಂತೆ ಕೂತಿದ್ದಾಗ, ಎದುರಾಳಿ ತಂಡದವರು ಅವರನ್ನು ಬಿಗ್ಬಾಸ್ ಸೂಚನೆಯಂತೆ ಒಮ್ಮೆ ನಗಿಸಿ, ಒಮ್ಮೆ ಅಳಿಸುವ ಒಮ್ಮೆ ಸಿಟ್ಟು ತರಿಸುವಂತೆ ಮಾಡಬೇಕಿತ್ತು. ಕಲ್ಲಂತೆ ಕೂತ ಸ್ಪರ್ಧಿಗಳು ಎಷ್ಟು ಬಾರಿ ಅಲುಗಾಡಿದ್ದಾರೆ ಎಂಬುದನ್ನು ಉಸ್ತುವಾರಿಗಳು ಲೆಕ್ಕ ಹಾಕಬೇಕಿತ್ತು.
ಈ ಟಾಸ್ಕ್ ನಡೆಯುವ ವೇಳೆ, ಎದುರಾಳಿ ತಂಡದವರು ಪದೇ-ಪದೇ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಅದನ್ನು ನೀನು ಗಮನಿಸಿಲ್ಲ, ಅದನ್ನು ನೋಟ್ ಮಾಡಿಕೊಂಡಿಲ್ಲ ಎಂದು ಡ್ರೋನ್ ಪ್ರತಾಪ್ ಮೇಲೆ ವರ್ತೂರು ಸಂತೋಷ್, ತನಿಷಾ, ಮೈಖಲ್ ಅವರುಗಳು ಆರೋಪ ಮಾಡಿದರು. ನಾನು ಪಾಯಿಂಟ್ ಮಾಡಿಕೊಂಡಿದ್ದೀನಿ ಎಂದರೂ ಬಿಡದೆ ಒಟ್ಟಾಗಿ ಡ್ರೋನ್ ಅನ್ನು ಟೀಕಿಸಲು ಆರಂಭಿಸಿದರು. ಆರಂಭದಲ್ಲಿ ಶಾಂತವಾಗಿದ್ದ ಡ್ರೋನ್, ಒಮ್ಮೆಲೆ ಸಿಟ್ಟು ಪ್ರದರ್ಶಿಸಿದರು, ಇದು ಎಲ್ಲರಿಗೂ ಆಶ್ಚರ್ಯವಾಯಿತು.
ಇದನ್ನೂ ಓದಿ:ಡ್ರೋನ್ ಪ್ರತಾಪ್ ಕೆಟ್ಟ ದೃಷ್ಠಿಯಿಂದ ನೋಡುತ್ತಾರೆಯೇ? ಬಿಗ್ಬಾಸ್ ಮನೆ ಮಹಿಳೆಯರು ಹೇಳಿದ್ದೇನು?
ನಾನು ಪಾಯಿಂಟ್ಸ್ ಹಾಕಿದ್ದೀನಿ, ಎಲ್ಲರೂ ಒಟ್ಟಿಗೆ ಮೈಮೇಲಿ ಬೀಳಬೇಡಿ ಎಂದು ಕೂಗಿದರು. ಡ್ರೋನ್ ಕೂಗಾಟ ನೋಡಿ ಎದುರಾಳಿ ತಂಡದವರೂ ಸಹ ಓಡಿ ಬಂದರು. ಆದರೆ ಅವರನ್ನು ವರ್ತೂರು ಸಂತೋಷ್ ವಾಪಸ್ ಕಳಿಸಿ, ಇದನ್ನು ನಾವು ಬಗೆಹರಿಸಿಕೊಳ್ಳುತ್ತೇವೆ ಎಂದರು. ಆ ಕ್ಷಣದಲ್ಲಿ ಡ್ರೋನ್ ಸಿಟ್ಟಾದರಾದರೂ ಬಳಿಕ ಬಂದು ತಂಡದ ಕ್ಷಮೆ ಕೇಳಿದರು. ಇನ್ನು ಮುಂದೆ ಹೀಗೆ ಸಿಟ್ಟಾಗುವುದಿಲ್ಲ, ಅವರ ತಂಡ ಎಲ್ಲಿ ನಿಯಮ ಉಲ್ಲಂಘಿಸಿದೆ ಎಂದು ನೋಡಿ ಪಾಯಿಂಟ್ಸ್ ಹಾಕಿಕೊಳ್ಳುತ್ತೇನೆ ಎಂದರು.
ತಂಡಕ್ಕೆ ಭರವಸೆ ನೀಡಿದಂತೆಯೇ ಬಜರ್ ಆದ ಮೇಲೆಯೂ ನಿಂತೇ ಇದ್ದ ಮೂರು ಸದಸ್ಯರ ಮೂರು ಪಾಯಿಂಟ್ಸ್ಗಳನ್ನು ಹಾಕಿಕೊಂಡರು. ಇದರಿಂದಾಗಿಯೇ ಡ್ರೋನ್ ಪ್ರತಾಪ್ರ ತಂಡವು ಆ ಟಾಸ್ಕ್ನಲ್ಲಿ ಗೆಲ್ಲುವಂತಾಯ್ತು. ಬಿಗ್ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಗೆ ಹಾಗೂ ಜಿಯೋ ಸಿನಿಮಾಸ್ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:58 pm, Wed, 8 November 23