ಬಿಗ್​ಬಾಸ್ ಗೆಲ್ಲುವ ಸ್ಪರ್ಧಿ ಇವರೇ: ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ

Bigg Boss: ಬಿಗ್​ಬಾಸ್ ಕನ್ನಡ ಸೀಸನ್ 10 ಪ್ರಾರಂಭವಾಗಿ ತಿಂಗಳು ಕಳೆದಿದ್ದು, ಆಟ ಈಗ ತುಸು ಹೆಚ್ಚೇ ರಂಗೇರಿದೆ. ಸ್ಪರ್ಧಿಗಳ ನಡುವೆ ಟಾಸ್ಕ್​ಗಳ ವಿಷಯದಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಬಿಗ್​ಬಾಸ್ ವಿನ್ನರ್ ಯಾರಾಗಲಿದ್ದಾರೆ ಎಂಬ ಊಹೆ ಈಗ ಸುಲಭವಿಲ್ಲ. ಆದರೆ ಮಾಜಿ ಬಿಗ್​ಬಾಸ್ ಸ್ಪರ್ಧಿ, ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಈ ಬಾರಿ ಬಿಗ್​ಬಾಸ್ ಯಾರು ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಬಿಗ್​ಬಾಸ್ ಗೆಲ್ಲುವ ಸ್ಪರ್ಧಿ ಇವರೇ: ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ
ಆರ್ಯವರ್ಧನ್ ಗುರೂಜಿ
Follow us
ಮಂಜುನಾಥ ಸಿ.
|

Updated on: Nov 08, 2023 | 8:39 PM

ಬಿಗ್​ಬಾಸ್ (Bigg Boss) ಕನ್ನಡ ಸೀಸನ್ 10 ಶುರುವಾಗಿ ತಿಂಗಳು ಕಳೆಯುತ್ತಾ ಬಂದಿದೆ. ಸ್ಪರ್ಧಿಗಳ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಮನೆಯಲ್ಲಿ ಎರಡು ಗುಂಪುಗಳಾಗಿದ್ದು ಪರಸ್ಪರರ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ ಸ್ಪರ್ಧಿಗಳು. ಪ್ರತಿ ಟಾಸ್ಕ್​ನಲ್ಲಿಯೂ ಗೆಲ್ಲಲೇ ಬೇಕೆಂಬ ಛಲವನ್ನು ಇತ್ತಂಡಗಳ ಸದಸ್ಯರೂ ತೋರಿಸುತ್ತಿದ್ದಾರೆ. ಬಿಗ್​ಬಾಸ್ ಫೈನಲಿಸ್ಟ್​ಗಳಾಗಲು ಅರ್ಹತೆಯುಳ್ಳ ಹಲವು ಸ್ಪರ್ಧಿಗಳು ಬಿಗ್​ಬಾಸ್ ಮನೆಯಲ್ಲಿದ್ದು ಯಾರು ಗೆಲ್ಲಬಹುದೆಂಬ ಊಹೆ ಈ ಹಂತದಲ್ಲಿ ಸುಲಭವಾಗಿಲ್ಲ. ಈ ನಡುವೆ ಮಾಜಿ ಬಿಗ್​ಬಾಸ್ ಸ್ಪರ್ಧಿ, ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಈ ಬಾರಿ ಬಿಗ್​ಬಾಸ್ ಗೆಲ್ಲುವ ಸ್ಪರ್ಧಿ ಯಾರೆಂದು ಭವಿಷ್ಯ ನುಡಿದಿದ್ದಾರೆ.

ಆರ್ಯವರ್ಧನ್ ಗುರೂಜಿ ಭವಿಷ್ಯದಂತೆ ಈ ಬಾರಿ ವರ್ತೂರು ಸಂತೋಷ್ ಅವರು ಬಿಗ್​ಬಾಸ್ ಗೆಲ್ಲುತ್ತಾರಂತೆ. ”ವರ್ತೂರು ಸಂತೋಷ್ ಅವರದ್ದು ಮೀನ ರಾಶಿ ಅವರಿಗೆ ಅನುಕೂಲಕರ ವಾತಾವರಣ ಇದೆ. ಅವರು ಒಳ್ಳೆಯ ವ್ಯಕ್ತಿ, ರೈತನ ಮಗ. ಬಿಗ್​ಬಾಸ್ ಮನೆಯಲ್ಲಿ ಬಹುತೇಕರು ಸಿನಿಮಾ ಹಾಗೂ ಟಿವಿ ಸೀರಿಯಲ್​ನವರೇ ಇದ್ದಾರೆ. ಅವರು ಪರಸ್ಪರರ ಬಗ್ಗೆ ತಿಳಿದಿರುವವರು, ಜನರಿಗೂ ಅವರ ಬಗ್ಗೆ ತಿಳಿದಿದೆ. ಆದರೆ ವರ್ತೂರು ಸಂತೋಷ್​ಗೆ ಅದೆಲ್ಲ ಗೊತ್ತಿಲ್ಲ. ಮನೆಯ ಒಳಗೆ ಅವರನ್ನು ಕುಗ್ಗಿಸಲಾಗಿದೆ, ಹೊರಗೆ ಕಾನೂನು ರೀತಿಯಾಗಿಯೂ ಅವರನ್ನು ಕುಗ್ಗಿಸಲಾಗಿದೆ. ಜನ ಅವರನ್ನು ಬೆಂಬಲಿಸಬೇಕು” ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:BBK 10: ವರ್ತೂರು ಸಂತೋಷ್​ ಅರೆಸ್ಟ್​ ಬಗ್ಗೆ ಬಿಗ್​ ಬಾಸ್​ ಸ್ಪರ್ಧಿಗಳಿಗೆ ಮಾಹಿತಿ ಇದೆಯಾ? ಸತ್ಯ ಬಿಚ್ಚಿಟ್ಟ ರಕ್ಷಕ್​

”ನನ್ನ ಶಿಷ್ಯರೊಬ್ಬರಿಗೆ ವರ್ತೂರು ಸಂತೋಷ್ ಬಹಳ ಆತ್ಮೀಯರು. ನಮಗೂ ಬೇಕಾದವರು. ಜನ ವರ್ತೂರು ಸಂತೋಷ್​ಗೆ ಬೆಂಬಲ ನೀಡಬೇಕು, ಎಲ್ಲರೂ ವರ್ತೂರು ಸಂತೋಷ್ ಅವರ ಚಿತ್ರ, ವಿಡಿಯೋಗಳನ್ನು ಫೇಸ್​ಬುಕ್, ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಬೇಕು. ನನಗೆ ತಿಳಿದಂತೆ ವರ್ತೂರು ಸಂತೋಷ್ ಚೆನ್ನಾಗಿ ಮನೊರಂಜನೆ ನೀಡುವ ವ್ಯಕ್ತಿ, ಆದರೆ ಹೊರಗೆ ಆಗಿರುವ ಘಟನೆಯಿಂದ ಅವರು ಸ್ವಲ್ಪ ವೀಕ್ ಆಗಿರಬಹುದು. ಈ ಹಂತದಲ್ಲಿ ಜನರ ಬೆಂಬಲ ಅವರಿಗೆ ಬೇಕು, ಒಬ್ಬ ಬ್ಯಾಟ್ಸ್​ಮ್ಯಾನ್ 100 ಹೊಡೆಯಬೇಕೆಂದರೆ ಆರಂಭದ ಕೆಲವು ಬಾಲ್​ಗಳನ್ನು ರಕ್ಷಣಾತ್ಮಕವಾಗಿ ಆಡಲೇ ಬೇಕಾಗುತ್ತದೆ” ಎಂದಿದ್ದಾರೆ ಆರ್ಯವರ್ಧನ್ ಗುರೂಜಿ.

ಆರ್ಯವರ್ಧನ್ ಗುರೂಜಿ ತಮ್ಮ ಭಿನ್ನ ಶೈಲಿಯ ಭವಿಷ್ಯ ನುಡಿಯುವಿಕೆಯಿಂದ ಜನಪ್ರಿಯತೆ ಗಳಿಸಿದ್ದರು. ಆ ಬಳಿಕ ಅವರನ್ನು ಮೊದಲ ಬಿಗ್​ಬಾಸ್ ಒಟಿಟಿ ಸೀಸನ್​ಗೆ ಸ್ಪರ್ಧಿಯಾಗಿ ಆಯ್ಕೆ ಮಾಡಲಾಯ್ತು. ಅಲ್ಲಿ ತಮ್ಮ ಮಾತು, ಟಾಸ್ಕ್​ನಿಂದ ಗಮನ ಸೆಳೆದ ಆರ್ಯವರ್ಧನ್ ಗುರೂಜಿ ಪ್ರೇಕ್ಷಕರ ಮನ ಗೆದ್ದರು. ಮಾತ್ರವಲ್ಲದೆ ಅಂತಿಮ ನಾಲ್ಕು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದು, ಬಿಗ್​ಬಾಸ್ ಸೀಸನ್ 9ರಲ್ಲಿಯೂ ಪಾಲ್ಗೊಂಡು ಹಲವು ದಿನ ಬಿಗ್​ಬಾಸ್ ಮನೆಯಲ್ಲಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ